ಮುಂಬೈ: ಯುಎಸ್ನಲ್ಲಿ ಷೇರುಗಳ ಮಾರಾಟದಿಂದ ಏಷ್ಯಾದ ಮಾರುಕಟ್ಟೆಗಳಲ್ಲಿ ಸೃಷ್ಟಿಯಾಗಿರುವ ತಲ್ಲಣದ ಹೊರತಾಗಿಯೂ ಭಾರತೀಯ ಇಕ್ವಿಟಿ ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ನಿಫ್ಟಿ50 ಸೋಮವಾರದ ವಹಿವಾಟಿನಲ್ಲಿ ಲಾಭದೊಂದಿಗೆ ಕೊನೆಗೊಂಡವು. ಆದಾಗ್ಯೂ, ಮುಂದಿನ ವಾರ ನಿಗದಿಯಾಗಿರುವ ಫೆಡರಲ್ ರಿಸರ್ವ್ನ ಸಭೆಯನ್ನು ಹೂಡಿಕೆದಾರರು ಎದುರು ನೋಡುತ್ತಿರುವುದರಿಂದ ಯುರೋಪ್ ಮತ್ತು ಯುಎಸ್ನಲ್ಲಿ ಫ್ಯೂಚರ್ಸ್ ಮಾರುಕಟ್ಟೆ ಏರಿಕೆಯಾಗಿದೆ.
ಮುಂಬೈ ಷೇರು ಮಾರುಕಟ್ಟೆಯಲ್ಲಿ ಸೋಮವಾರದ ವಹಿವಾಟಿನ ಆರಂಭದಲ್ಲಿ 80,973.75ಕ್ಕೆ ಇಳಿದ ಬಿಎಸ್ಇ ಸೆನ್ಸೆಕ್ಸ್ 81,653.36 ಗರಿಷ್ಠ ಮತ್ತು 80,895.05ರ ಕನಿಷ್ಠ ಮಟ್ಟಗಳ ಮಧ್ಯೆ ವಹಿವಾಟು ನಡೆಸಿತು. ಅಂತಿಮವಾಗಿ 30 ಷೇರುಗಳ ಸೆನ್ಸೆಕ್ಸ್ 375 ಪಾಯಿಂಟ್ ಅಥವಾ ಶೇಕಡಾ 0.46ರಷ್ಟು ಏರಿಕೆಯಾಗಿ 81,560ರಲ್ಲಿ ಕೊನೆಗೊಂಡಿದೆ.
ಏತನ್ಮಧ್ಯೆ, ದಿನದ ಆರಂಭದಲ್ಲಿ 24,823.40ಕ್ಕೆ ಇಳಿಕೆಯಾಗಿ ವಹಿವಾಟು ಆರಂಭಿಸಿದ ನಿಫ್ಟಿ50, ಸೋಮವಾರದಂದು ಗರಿಷ್ಠ 24,957.50 ಮತ್ತು ಕನಿಷ್ಠ 24,753.15ರ ಮಧ್ಯೆ ವಹಿವಾಟು ನಡೆಸಿತು. ಇದು ಅಂತಿಮವಾಗಿ 84 ಪಾಯಿಂಟ್ ಅಥವಾ ಶೇಕಡಾ 0.34ರಷ್ಟು ಏರಿಕೆಯಾಗಿ 24,936 ರಲ್ಲಿ ಕೊನೆಗೊಂಡಿದೆ.
ಎನ್ಎಸ್ಇಯಲ್ಲಿ ನಿಫ್ಟಿ50 ಸೂಚ್ಯಂಕದ ಷೇರುಗಳ ಪೈಕಿ 26 ಷೇರುಗಳು ಏರಿಕೆಯೊಂದಿಗೆ ಕೊನೆಗೊಂಡವು. ಪ್ರಮುಖವಾಗಿ ಎಚ್ಯುಎಲ್, ಶ್ರೀರಾಮ್ ಫೈನಾನ್ಸ್, ಐಸಿಐಸಿಐ ಬ್ಯಾಂಕ್, ಐಟಿಸಿ ಮತ್ತು ಬ್ರಿಟಾನಿಯಾ ಶೇಕಡಾ 2.5 ರವರೆಗೆ ಲಾಭ ಗಳಿಸಿದವು. ಇನ್ನು ಒಎನ್ಜಿಸಿ, ಟೆಕ್ ಮಹೀಂದ್ರಾ, ಬಿಪಿಸಿಎಲ್, ಟಾಟಾ ಸ್ಟೀಲ್ ಮತ್ತು ಹಿಂಡಾಲ್ಕೊ ಶೇಕಡಾ 2.91 ರವರೆಗೆ ನಷ್ಟಕ್ಕೀಡಾದವು.
ಹಾಗೆಯೇ, ಬಿಎಸ್ಇ ಸೆನ್ಸೆಕ್ಸ್ ಷೇರುಗಳಲ್ಲಿ ಎಚ್ಯುಎಲ್ ಶೇಕಡಾ 2.95 ರಷ್ಟು ಲಾಭ ಗಳಿಸಿದರೆ, ಐಸಿಐಸಿಐ ಬ್ಯಾಂಕ್, ಐಟಿಸಿ, ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಇಂಡಸ್ಇಂಡ್ ಬ್ಯಾಂಕ್ ಲಾಭ ಗಳಿಸಿದ ಇತರ ಷೇರುಗಳಾಗಿವೆ. ಬಿಎಸ್ಇ ಸೆನ್ಸೆಕ್ಸ್ನ 30 ಷೇರುಗಳ ಪೈಕಿ ಅರ್ಧದಷ್ಟು ಷೇರುಗಳು ನಷ್ಟದಲ್ಲಿ ಕೊನೆಗೊಂಡವು. ಟೆಕ್ ಮಹೀಂದ್ರಾ (ಶೇಕಡಾ 2.6 ರವರೆಗೆ), ಎನ್ ಟಿಪಿಸಿ, ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್ ಮತ್ತು ಪವರ್ ಗ್ರಿಡ್ ಕಾರ್ಪೊರೇಷನ್ ಇವು ನಷ್ಟಕ್ಕೀಡಾದ ಇತರ ಷೇರುಗಳಾಗಿವೆ.
ಆದಾಗ್ಯೂ, ವಿಶಾಲ ಮಾರುಕಟ್ಟೆಗಳು ಮುಂಚೂಣಿ ಸೂಚ್ಯಂಕಗಳಿಗೆ ಹೋಲಿಸಿದರೆ ಕುಸಿತ ಕಂಡಿವೆ. ಬಿಎಸ್ಇ ಸ್ಮಾಲ್ ಕ್ಯಾಪ್ ಶೇಕಡಾ 0.65 ರಷ್ಟು ಕುಸಿದಿದೆ ಮತ್ತು ಬಿಎಸ್ಇ ಮಿಡ್ ಕ್ಯಾಪ್ ಶೇಕಡಾ 0.2 ರಷ್ಟು ಕುಸಿದಿದೆ.
ಇದನ್ನೂ ಓದಿ: 2,200 ಕೋಟಿ ರೂ. ಟ್ರೇಡಿಂಗ್ ಹಗರಣ: ನಟಿ ಸುಮಿ ಬೋರಾ ಖಾತೆಗೆ 20 ಕೋಟಿ ರೂ. ವರ್ಗಾವಣೆ ಆರೋಪ - Assam Online Trading Scam