ಮುಂಬೈ: ಸರ್ಕಾರಿ ಸ್ವಾಮ್ಯದ ಪ್ರಮುಖ ಕಂಪನಿಗಳಾದ ಎಸ್ಬಿಐ, ಬಿಪಿಸಿಎಲ್, ಒಎನ್ಜಿಸಿ ಮತ್ತು ಕೋಲ್ ಇಂಡಿಯಾ ಷೇರುಗಳು ಶೇ 3 ರಿಂದ 7ರಷ್ಟು ಏರಿಕೆಯಾಗಿದ್ದರಿಂದ ಬುಧವಾರದ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆಗಳು ಏರಿಕೆಯಲ್ಲಿ ಕೊನೆಗೊಂಡವು. ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವು 268 ಪಾಯಿಂಟ್ಗಳ ಏರಿಕೆಯೊಂದಿಗೆ 71,823 ರಲ್ಲಿ ಕೊನೆಗೊಂಡರೆ, ನಿಫ್ಟಿ-50 97 ಪಾಯಿಂಟ್ ಏರಿಕೆಯಾಗಿ 21,840 ರಲ್ಲಿ ಕೊನೆಗೊಂಡಿದೆ.
ಟಾಟಾ ಸ್ಟೀಲ್, ಆ್ಯಕ್ಸಿಸ್ ಬ್ಯಾಂಕ್, ಮಾರುತಿ, ಎನ್ಟಿಪಿಸಿ, ಪವರ್ ಗ್ರಿಡ್, ಐಟಿಸಿ, ನೆಸ್ಲೆ, ಇಂಡಸ್ಇಂಡ್ ಬ್ಯಾಂಕ್, ಟಾಟಾ ಮೋಟಾರ್ಸ್, ರಿಲಯನ್ಸ್ ಮತ್ತು ಎಂ & ಎಂ ಷೇರುಗಳು ಶೇಕಡಾ 1 ರಿಂದ 2 ರಷ್ಟು ಏರಿಕೆ ಕಂಡವು. ಟೆಕ್ ಎಂ, ಇನ್ಫೋಸಿಸ್, ಸನ್ ಫಾರ್ಮಾ, ಸಿಪ್ಲಾ, ಡಾ.ರೆಡ್ಡೀಸ್ ಇಳಿಕೆಯಾದ ಪ್ರಮುಖ ಷೇರುಗಳಾಗಿವೆ.
ಬಿಎಸ್ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ದಿನದ ನಷ್ಟವನ್ನು ಸರಿದೂಗಿಸಿ ಶೇಕಡಾ 1.3 ರಷ್ಟು ಏರಿಕೆ ಕಂಡವು. ವಲಯವಾರು ನೋಡುವುದಾದರೆ- ನಿಫ್ಟಿ ಐಟಿ ಮತ್ತು ಫಾರ್ಮಾ ಸೂಚ್ಯಂಕಗಳು ತಲಾ ಶೇಕಡಾ 1ರಷ್ಟು ಕುಸಿದವು. ನಿಫ್ಟಿ ಪಿಎಸ್ಯು ಬ್ಯಾಂಕ್ ಮತ್ತು ತೈಲ ಮತ್ತು ಅನಿಲ ಸೂಚ್ಯಂಕಗಳು ತಲಾ ಶೇಕಡಾ 3 ಕ್ಕಿಂತ ಹೆಚ್ಚು ಲಾಭ ದಾಖಲಿಸಿವೆ.
ಯುಎಸ್ ಡಾಲರ್ ವಿರುದ್ಧ ರೂಪಾಯಿ ಬುಧವಾರ 5 ಪೈಸೆ ಏರಿಕೆಯಾಗಿ 83.03ಕ್ಕೆ (ತಾತ್ಕಾಲಿಕ) ತಲುಪಿದೆ. ಸಾಗರೋತ್ತರ ಮಾರುಕಟ್ಟೆಯಲ್ಲಿ ಅಮೆರಿಕನ್ ಕರೆನ್ಸಿಯ ಬಲ ಮತ್ತು ಹೆಚ್ಚಿದ ಕಚ್ಚಾ ತೈಲ ಬೆಲೆಗಳು ರೂಪಾಯಿ ಮೇಲೆ ಒತ್ತಡ ತಂದಿದ್ದು, ಹೆಚ್ಚುವರಿ ಏರಿಕೆಯನ್ನು ತಡೆದಿವೆ ಎಂದು ಫಾರೆಕ್ಸ್ ವ್ಯಾಪಾರಿಗಳು ತಿಳಿಸಿದ್ದಾರೆ.
ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ ರೂಪಾಯಿಯು ಡಾಲರ್ ಎದುರು 83.11 ರಲ್ಲಿ ಪ್ರಾರಂಭವಾಯಿತು. ಇದು ಇಂಟ್ರಾ-ಡೇ ವಹಿವಾಟಿನಲ್ಲಿ ಗರಿಷ್ಠ 83.02 ಮತ್ತು ಕನಿಷ್ಠ 83.12 ರಲ್ಲಿ ಹೊಯ್ದಾಡಿತು. ಅಂತಿಮವಾಗಿ ರೂಪಾಯಿ ಡಾಲರ್ ವಿರುದ್ಧ 83.03ರಲ್ಲಿ (ತಾತ್ಕಾಲಿಕ) ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯವಾದ 83.08 ಕ್ಕಿಂತ 5 ಪೈಸೆ ಹೆಚ್ಚಾಗಿದೆ.
ಕಚ್ಚಾ ತೈಲ ಬೇಡಿಕೆ ಏರಿಕೆಯಾಗಬಹುದು ಎಂಬ ಒಪೆಕ್ನ ಮುನ್ಸೂಚನೆ ಮತ್ತು ಯುಎಸ್ ಇಂಧನ ಷೇರುಗಳಲ್ಲಿ ತೀವ್ರ ಕುಸಿತದ ಹಿನ್ನೆಲೆಯಲ್ಲಿ ತೈಲ ಬೆಲೆಗಳು ಬುಧವಾರ ಕೊಂಚ ಬದಲಾಗಿವೆ. ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಬ್ಯಾರೆಲ್ ಗೆ 6 ಸೆಂಟ್ಸ್ ಅಥವಾ ಶೇಕಡಾ 0.07 ರಷ್ಟು ಏರಿಕೆಯಾಗಿ 82.83 ಡಾಲರ್ ಗೆ ತಲುಪಿದೆ. ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಯೆಟ್ (ಡಬ್ಲ್ಯುಟಿಐ) ಕ್ರೂಡ್ ಫ್ಯೂಚರ್ಸ್ 77.87 ಡಾಲರ್‌ಗೆ ಇಳಿದಿದೆ.
ಇದನ್ನೂ ಓದಿ: ಸಗಟು ಹಣದುಬ್ಬರ ಜನವರಿಯಲ್ಲಿ ಶೇ 0.27ಗೆ ಇಳಿಕೆ