ಮುಂಬೈ : ಶುಕ್ರವಾರದ ವಹಿವಾಟಿನಲ್ಲಿ ಭಾರತದ ಷೇರು ಸೂಚ್ಯಂಕಗಳು ಏರಿಕೆಯೊಂದಿಗೆ ಕೊನೆಗೊಂಡಿವೆ. ಬಿಎಸ್ಇ ಸೆನ್ಸೆಕ್ಸ್ 253 ಪಾಯಿಂಟ್ಸ್ ಅಥವಾ ಶೇಕಡಾ 0.34 ರಷ್ಟು ಏರಿಕೆ ಕಂಡು 73,917 ರಲ್ಲಿ ಕೊನೆಗೊಂಡರೆ, ನಿಫ್ಟಿ-50 62 ಪಾಯಿಂಟ್ಸ್ ಅಥವಾ ಶೇಕಡಾ 0.28 ರಷ್ಟು ಏರಿಕೆ ಕಂಡು 22,466 ರಲ್ಲಿ ಕೊನೆಗೊಂಡಿದೆ.
ಸೆನ್ಸೆಕ್ಸ್ನಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ, ಜೆಎಸ್ಡಬ್ಲ್ಯೂ ಸ್ಟೀಲ್, ಅಲ್ಟ್ರಾಟೆಕ್ ಸಿಮೆಂಟ್, ಕೋಟಕ್ ಬ್ಯಾಂಕ್, ಐಟಿಸಿ, ಮಾರುತಿ ಸುಜುಕಿ, ಎನ್ಟಿಪಿಸಿ ಮತ್ತು ಟಾಟಾ ಮೋಟಾರ್ಸ್ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿವೆ. ಟಿಸಿಎಸ್, ಎಚ್ ಯುಎಲ್, ಎಚ್ಸಿಎಲ್ ಟೆಕ್, ನೆಸ್ಲೆ ಇಂಡಿಯಾ, ವಿಪ್ರೋ, ಬಜಾಜ್ ಫಿನ್ ಸರ್ವ್ ಮತ್ತು ಇನ್ಫೋಸಿಸ್ ಹೆಚ್ಚು ಕುಸಿತ ಕಂಡವು.
ವಿಶಾಲ ಮಾರುಕಟ್ಟೆಗಳನ್ನು ನೋಡುವುದಾದರೆ- ಬಿಎಸ್ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ತಲಾ ಶೇಕಡಾ 1 ಕ್ಕಿಂತ ಹೆಚ್ಚು ಏರಿಕೆಯೊಂದಿಗೆ ಬೆಂಚ್ಮಾರ್ಕ್ಗಳನ್ನು ಮೀರಿಸಿದವು. ವಲಯಗಳ ಪೈಕಿ ನಿಫ್ಟಿ ಆಟೋ ಶೇಕಡಾ 1.6 ರಷ್ಟು ಏರಿಕೆ ಕಂಡರೆ, ನಿಫ್ಟಿ ರಿಯಾಲ್ಟಿ ಸೂಚ್ಯಂಕ 1.4 ಶೇಕಡಾ ಏರಿಕೆಯೊಂದಿಗೆ ನಂತರದ ಸ್ಥಾನದಲ್ಲಿದೆ. ನಿಫ್ಟಿ ಐಟಿ ಸೂಚ್ಯಂಕ ಶೇಕಡಾ 0.8 ರಷ್ಟು ಕುಸಿದಿದೆ.
ಸಕಾರಾತ್ಮಕ ದೇಶೀಯ ಮಾರುಕಟ್ಟೆಗಳು ಮತ್ತು ಕೆಲ ಹೊಸ ವಿದೇಶಿ ಒಳಹರಿವಿನ ನಿರೀಕ್ಷೆಗಳಿಂದಾಗಿ ರೂಪಾಯಿ ಶುಕ್ರವಾರ ಯುಎಸ್ ಡಾಲರ್ ವಿರುದ್ಧ 17 ಪೈಸೆ ಏರಿಕೆಯಾಗಿ 83.33 ಕ್ಕೆ (ತಾತ್ಕಾಲಿಕ) ತಲುಪಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಯುಎಸ್ ಡಾಲರ್ ಗಳನ್ನು ಮಾರಾಟ ಮಾಡಿದೆ ಎಂಬ ವರದಿಗಳು ಸಹ ರೂಪಾಯಿಯನ್ನು ಬೆಂಬಲಿಸಿವೆ ಎಂದು ವಿದೇಶಿ ವಿನಿಮಯ ವ್ಯಾಪಾರಿಗಳು ತಿಳಿಸಿದ್ದಾರೆ.
ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ರೂಪಾಯಿಯು 83.50 ಕ್ಕೆ ಪ್ರಾರಂಭವಾಯಿತು ಮತ್ತು ಇಂಟ್ರಾಡೇ ಗರಿಷ್ಠ 83.32 ಮತ್ತು ಕನಿಷ್ಠ 83.50 ದಲ್ಲಿ ವಹಿವಾಟು ನಡೆಸಿತು. ರೂಪಾಯಿ ಅಂತಿಮವಾಗಿ 83.33 (ತಾತ್ಕಾಲಿಕ) ಕ್ಕೆ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 17 ಪೈಸೆ ಹೆಚ್ಚಾಗಿದೆ. ಗುರುವಾರ, ಯುಎಸ್ ಡಾಲರ್ ವಿರುದ್ಧ ರೂಪಾಯಿ 83.50 ರಲ್ಲಿ ಮುಕ್ತಾಯವಾಗಿತ್ತು.
ಶುಕ್ರವಾರದಂದು ಜುಲೈ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ದರ ಶೇಕಡಾ 0.31 ರಷ್ಟು ಏರಿಕೆಯಾಗಿ 83.53 ಡಾಲರ್ ಗೆ ತಲುಪಿದೆ ಮತ್ತು ಡಬ್ಲ್ಯುಟಿಐ (ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಯೆಟ್) ನಲ್ಲಿ ಜೂನ್ ಕ್ರೂಡ್ ಆಯಿಲ್ ಫ್ಯೂಚರ್ಸ್ ದರ ಶೇಕಡಾ 0.16 ರಷ್ಟು ಏರಿಕೆಯಾಗಿ 79.36 ಡಾಲರ್ಗೆ ತಲುಪಿದೆ.
ಇದನ್ನೂ ಓದಿ : ಗುಡ್ ನ್ಯೂಸ್: ಭಾರತದ ಸರಕು ರಫ್ತು ಪ್ರಮಾಣ ಶೇ 1.07ರಷ್ಟು ಹೆಚ್ಚಳ; ಆರ್ಥಿಕ ಹಿಂಜರಿತದ ಮಧ್ಯೆಯೂ ಉತ್ತಮ ಸಾಧನೆ - goods exports