ನವದೆಹಲಿ: ವಿವಿಧ ಷೇರುಗಳ ಮಾರಾಟ, ವಿದೇಶಿ ಬಂಡವಾಳ ಹೂಡಿಕೆ ಹಿಂತೆಗೆತ, ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಮತದಾನದಿಂದಾಗಿ ಷೇರು ಮಾರುಕಟ್ಟೆ ಈ ವಾರದಲ್ಲಿ ಸತತ ನಾಲ್ಕನೇ ದಿನವೂ ಕುಸಿತ ಕಂಡಿದೆ. ಬೆಂಚ್ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರದ ವಹಿವಾಟಿನ ದಿನದಾಂತ್ಯಕ್ಕೆ ಶೇಕಡಾ 1.5 ರಷ್ಟು ನಷ್ಟ ಅನುಭವಿಸಿದವು.
30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವು ಸತತ ನಾಲ್ಕನೇ ದಿನವೂ ಅಂಕ ಕಳೆದುಕೊಂಡಿತು. ಇಂದಿನ ವಹಿವಾಟಿನಲ್ಲಿ 1062.22 ಪಾಯಿಂಟ್ಸ್ ಅಥವಾ ಶೇಕಡಾ 1.45 ರಷ್ಟು ಕುಸಿದು 72,404.17ಕ್ಕೆ ಅಂತ್ಯ ಕಂಡಿತು. ಒಂದು ಹಂತದಲ್ಲಿ 1,132.21 ಅಂಕ ಕಳೆದುಕೊಂಡಿದ್ದ ಸೆನ್ಸೆಕ್ಸ್ ತುಸು ಏರಿಕೆ ಕಂಡಿತು.
ಇತ್ತ 50 ಷೇರುಗಳ ನಿಫ್ಟಿ ಸೂಚ್ಯಂಕವು 345 ಅಂಕ, ಶೇಕಡಾ 1.55 ರಷ್ಟು ಕುಸಿದು 21,957 ಅಂಕಗಳಿಗೆ ದಿನದ ವಹಿವಾಟು ಮುಗಿಸಿತು. ಒಂದು ಹಂತದಲ್ಲಿ 370.1 ರಷ್ಟು ಕುಸಿದು ಷೇರುದಾರರಿಗೆ ಭಾರೀ ಹಿನ್ನಡೆ ಉಂಟು ಮಾಡಿತು. ನಿಫ್ಟಿ ಸೂಚ್ಯಂಕವು ಕಳೆದ 7 ದಿನಗಳಿಂದ ಪಾಯಿಂಟ್ಸ್ ನಷ್ಟ ಅನುಭವಿಸುತ್ತಲೇ ಇದೆ. ಈವರೆಗೂ 1900 ಅಂಕಗಳಷ್ಟು ಇಳಿಕೆ ಕಂಡಿದೆ.
ಮಾರುಕಟ್ಟೆ ಕುಸಿತಕ್ಕೆ ಕಾರಣಗಳಿವು: ಸ್ಟಾಕ್ ಮಾರುಕಟ್ಟೆ ತಜ್ಞರ ಪ್ರಕಾರ, ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನ, ವಿದೇಶಿ ಬಂಡವಾಳ ಹೂಡಿಕೆಯ ಹಿಂತೆಗೆತ, ಅಮೆರಿಕದ ಡಾಲರ್ಗೆ ಬೇಡಿಕೆ ಹೆಚ್ಚಳ, ಕೇಂದ್ರೀಯ ಬ್ಯಾಂಕ್ನ ಬಡ್ಡಿ ದರದ ಕಟ್ಟುನಿಟ್ಟಿನ ನೀತಿ, ಷೇರುಗಳ ವಿಪರೀತ ಮಾರಾಟ ಮಾರುಕಟ್ಟೆಯ ಮೇಲೆ ಪ್ರಭಾವಿ ಬೀರಿದೆ ಎಂದು ಪ್ರಾಥಮಿಕ ಕಾರಣಗಳನ್ನು ನೀಡಿದ್ದಾರೆ.
ಹೆಚ್ಡಿಎಫ್ಸಿ ಬ್ಯಾಂಕ್, ಲಾರ್ಸೆನ್, ಟೂಬ್ರೊ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಮಾರಾಟ ತೀವ್ರವಾಗಿವೆ. ಇದರಿಂದ ಬೆಂಚ್ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್ಇ ಮತ್ತು ನಿಫ್ಟಿ ನಲುಗುತ್ತಿದೆ.
ಯಾರಿಗೆ ಲಾಭ-ನಷ್ಟ?: ಪ್ರಮುಖ ಷೇರುಗಳ ಪೈಕಿ ಲಾರ್ಸನ್ ಆ್ಯಂಡ್ ಟೂಬ್ರೊ ಸ್ಟಾಕ್ ಬೆಲೆ ಶೇಕಡಾ 5 ಕ್ಕಿಂತ ಕಡಿಮೆಯಾಗಿದೆ. ಏಷ್ಯನ್ ಪೇಂಟ್ಸ್, ಜೆಎಸ್ಡಬ್ಲ್ಯೂ ಸ್ಟೀಲ್, ಐಟಿಸಿ, ಬಜಾಜ್ ಫೈನಾನ್ಸ್, ಇಂಡಸ್ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಎನ್ಟಿಪಿಸಿ, ಬಜಾನ್ ಫಿನ್ಸರ್ವ್, ಹೆಚ್ಡಿಎಫ್ಇಸಿ ಬ್ಯಾಂಕ್ ರಿಲಯನ್ಸ್ ಇಂಡಸ್ಟ್ರೀಸ್, ಪವರ್ ಗ್ರಿಡ್ ಷೇರುಗಳ ಬೆಲೆ ಕುಸಿತ ಕಂಡಿದೆ. ಟಾಟಾ ಮೋಟಾರ್ಸ್, ಮಹೀಂದ್ರಾ ಅಂಡ್ ಮಹೀಂದ್ರಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇನ್ಫೋಸಿಸ್ ಮತ್ತು ಎಚ್ಸಿಎಲ್ ಟೆಕ್ ಷೇರುಗಳು ಲಾಭ ಗಳಿಸಿವೆ.
ಇದನ್ನೂ ಓದಿ: ವೃದ್ಧಾಪ್ಯದ ನೆಮ್ಮದಿಯ ಬದುಕಿಗೆ ದಿನಕ್ಕೆ 13 ರೂಪಾಯಿ ತುಂಬಿ: ತಿಂಗಳಿಗೆ ₹5 ಸಾವಿರ ಪಿಂಚಣಿ ಪಡೆಯಿರಿ! - Atal Pension Yojana