ನವದೆಹಲಿ: ಇಂದು ಷೇರುವಹಿವಾಟಿನಲ್ಲಿ ಭಾರಿ ಅಸ್ಥಿರತೆ ಕಂಡು ಬಂದಿದೆ. ಪರಿಣಾಮ ಸೆನ್ಸೆಕ್ಸ್ 941 ಪಾಯಿಂಟ್‌ಗಳ ಭಾರಿ ಕುಸಿತ ಕಂಡಿದೆ. ಹಿಂದಿನ ಮುಕ್ತಾಯಕ್ಕಿಂತ ಗಣನೀಯವಾಗಿ ಕಡಿಮೆಯಾಗಿದೆ. ವಿದೇಶಿ ಬಂಡವಾಳ ಹೂಡಿಕೆದಾರರ ನಿರಂತರ ಮಾರಾಟದಿಂದಾಗಿ ಈ ಕುಸಿತ ಕಂಡು ಬಂದಿದೆ.
ಶೇ 1.18ರಷ್ಟು ಅಂಶಗಳ ಕುಸಿತ ಕಂಡಿರುವ ಷೇರುಪೇಟೆ 78,782.24 ಪಾಯಿಂಟ್‌ಗಳಲ್ಲಿ ಕೊನೆಗೊಂಡರೆ, ನಿಫ್ಟಿ ಬರೋಬ್ಬರಿ 309.00 ಪಾಯಿಂಟ್‌ಗಳು ಅಥವಾ 1.27 ಪಾಯಿಂಟ್‌ಗಳ ಇಳಿಕೆಯೊಂದಿಗೆ 23,995.35 ಅಂಶಗಳಲ್ಲಿ ದಿನದ ವ್ಯವಹಾರ ಮುಗಿಸಿದೆ.
ನಿಫ್ಟಿ ರಿಯಾಲ್ಟಿ ಶೇಕಡಾ 2.93 ರಷ್ಟು ಕುಸಿತ: ವಲಯವಾರು ಸೂಚ್ಯಂಕಗಳನ್ನು ನೋಡುವುದಾದರೆ, ನಿಫ್ಟಿ ರಿಯಾಲ್ಟಿ ಶೇಕಡಾ 2.93 ರಷ್ಟು ಕುಸಿತ ಕಾಣುವ ಮೂಲಕ ಅತ್ಯಂತ ಹೆಚ್ಚು ನಷ್ಟವನ್ನು ಅನುಭವಿಸಿದ ವಲಯವಾಗಿ ಮಾರ್ಪಟ್ಟಿತು. ಒಂದು ಹಂತದಲ್ಲಿ ಸೆನ್ಸೆಕ್ಸ್ ಸುಮಾರು 1,500 ಪಾಯಿಂಟ್‌ಗಳಷ್ಟು ಕುಸಿತ ಕಂಡು ಭಾರಿ ಮೊತ್ತದ ನಷ್ಟಕ್ಕೆ ಕಾರಣವಾಗಿತ್ತು. ಆದರೆ ನಂತರ ಸುಮಾರು 600 ಅಂಕಗಳಷ್ಟು ಏರಿಕೆ ದಾಖಲಿಸಿ, ಅಂತಿಮವಾಗಿ 941 ಅಂಕಗಳ ನಷ್ಟದೊಂದಿಗೆ ವ್ಯವಹಾರ ಕೊನೆಗೊಳಿಸಿದೆ.
94,017 ಕೋಟಿ ರೂ ಮೌಲ್ಯದ ಷೇರುಗಳ ಮಾರಾಟ: ವಿದೇಶಿ ಬಂಡವಾಳ ಹೂಡಿಕೆದಾರರು ಅಕ್ಟೋಬರ್‌ನಲ್ಲಿ ಒಟ್ಟಾರೆ 94,017 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ಮೂಲಕ ಕೋವಿಡ್ ಇಳಿಕೆಯ ನಂತರದ ಅತ್ಯಂತ ದೊಡ್ಡ ಮೊತ್ತದ ಷೇರು ಮಾರಾಟ ಇದಾಗಿದೆ ಎಂದು ಷೇರು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ. ನಾಲ್ಕು ತಿಂಗಳ ಕಾಲ ಖರೀದಿದಾರರಾಗಿದ್ದ FIIಗಳು ಅಕ್ಟೋಬರ್‌ನಲ್ಲಿ ಭಾರಿ ಪ್ರಮಾಣದಲ್ಲಿ ಷೇರುಗಳ ಮಾರಾಟ ಮಾಡುವ ಮೂಲಕ ಒಟ್ಟಾರೆ ಶೇ 7- 10 ಪ್ರತಿಶತದಷ್ಟು ಮಾರುಕಟ್ಟೆ ಇಳಿಕೆಗೆ ಕಾರಣರಾಗಿದ್ದಾರೆ ಎಂದು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ ಡೇಟಾ ತೋರಿಸಿದೆ.
ಹೊಯ್ದಾಟಕ್ಕೆ ಕಾರಣವಾದ ಅಮೆರಿಕ ಅಧ್ಯಕ್ಷೀಯ ಚುನಾವಣೆ: ಈ ನಡುವೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಸಹ ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದೆ. ಅಧ್ಯಕ್ಷೀಯ ಅಭ್ಯರ್ಥಿಗಳಾದ ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದ್ದು, ಇದು ಮಾರುಕಟ್ಟೆಯ ಇಂದಿನ ಹೊಯ್ದಾಟಕ್ಕೆ ಕಾರಣವಾಗಿದೆ, ಸೆನ್ಸೆಕ್ಸ್ ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 85,978 ಅಂಕಗಳಿಂದ ಸುಮಾರು 7 ಸಾವಿರ ಅಂಕಗಳಷ್ಟು ಕುಸಿದು 78,782 ಅಂಕಗಳಿಗೆ ಬಂದು ನಿಂತಿದೆ.
ಇನ್ನು ನಿರೀಕ್ಷೆಯಂತೆ ಷೇರುಗಳು ಹೆಚ್ಚಿನ ಮೌಲ್ಯವನ್ನು ಹೊಂದಿರುವುದರಿಂದ ವಿದೇಶಿ ಹೂಡಿಕೆದಾರರು, ಷೇರುಗಳನ್ನು ಮಾರಾಟ ಮಾಡಿ, ಚೀನಾ ಮಾರುಕಟ್ಟೆಯತ್ತ ತಮ್ಮ ಚಿತ್ತ ಹರಿಸಿದ್ದಾರೆ. ಮತ್ತೊಂದು ಕಡೆ ಎರಡನೇ ತ್ರೈಮಾಸಿಕ ಆರ್ಥಿಕ ವರದಿಗಳಲ್ಲಿ ಬಹುತೇಕ ಕಂಪನಿಗಳು ನಷ್ಟವನ್ನು ದಾಖಲಿಸುತ್ತಿರುವುದು ಕೂಡಾ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದರು.
ಅಲ್ಪಾವಧಿಯಲ್ಲಿ ನಿರಂತರವಾದ ಚಂಚಲತೆ ನಿರೀಕ್ಷಿಸಲಾಗಿದೆ. ಏಕೆಂದರೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಏನಾಗುತ್ತದೆ ಎಂಬುದರ ಮೇಲೆ ಎಲ್ಲರ ಚಿತ್ತ ಹರಿದಿದೆ. ಅಮೆರಿಕ ಫೆಡ್ ಮತ್ತು BoE ನೀತಿ ನಿರ್ಧಾರಗಳಂತಹ ಪ್ರಮುಖ ಆರ್ಥಿಕ ಘಟನೆಗಳು ಮಾರುಕಟ್ಟೆಯ ಚಲನೆಯನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ನಾಯರ್ ಹೇಳಿದ್ದಾರೆ.
ಇದನ್ನು ಓದಿ:ಅಕ್ಟೋಬರ್‌ನಲ್ಲಿ 1 ಲಕ್ಷ 40 ಸಾವಿರ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟ: ಶೇ 85ರಷ್ಟು ಹೆಚ್ಚಳ
4 ತಿಂಗಳ ಖರೀದಿಯ ನಂತರ ಎಫ್ಪಿಐಗಳಿಂದ 94 ಸಾವಿರ ಕೋಟಿ ಮೌಲ್ಯದ ಷೇರು ಮಾರಾಟ