ಮುಂಬೈ: ಕಾರ್ಪೊರೇಟ್ ಕಾರ್ಯಕ್ಷಮತೆಯ ನಿರೀಕ್ಷೆಗಳ ನಡುವೆ ಐಟಿ, ಗ್ರಾಹಕ ಬೆಲೆಬಾಳುವ ವಸ್ತುಗಳು ಮತ್ತು ಹಣಕಾಸು ಷೇರುಗಳ ಖರೀದಿಯ ಭರಾಟೆಯಿಂದ ಈಕ್ವಿಟಿ ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಇಂದು ದಾಖಲೆಯ ಹೊಸ ಎತ್ತರ ತಲುಪಿವೆ.
30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 350.81 ಪಾಯಿಂಟ್ಸ್ ಅಥವಾ ಶೇಕಡಾ 0.47 ರಷ್ಟು ಏರಿಕೆ ಕಂಡು 74,227.63 ರಲ್ಲಿ ಕೊನೆಗೊಂಡಿದೆ. ದಿನದ ವಹಿವಾಟಿನಲ್ಲಿ ಸೂಚ್ಯಂಕವು ಗರಿಷ್ಠ 74,501.73 ಮತ್ತು ಕನಿಷ್ಠ 73,485.12 ರ ನಡುವೆ ವಹಿವಾಟು ನಡೆಸಿತು. ಎನ್ಎಸ್ಇ ನಿಫ್ಟಿ ಕೂಡ 80 ಪಾಯಿಂಟ್ಸ್ ಅಥವಾ ಶೇಕಡಾ 0.36 ರಷ್ಟು ಏರಿಕೆ ಕಂಡು 22,514.65 ರಲ್ಲಿ ಕೊನೆಗೊಂಡಿದೆ. ನಿಫ್ಟಿಯಲ್ಲಿನ 31 ಷೇರುಗಳು ಲಾಭದೊಂದಿಗೆ ಕೊನೆಗೊಂಡವು.
ಹಿಂದಿನ ಎರಡು ಸೆಷನ್ಗಳಲ್ಲಿ ಎರಡೂ ಸೂಚ್ಯಂಕಗಳು ಇಳಿಕೆಯಲ್ಲಿ ಕೊನೆಗೊಂಡಿದ್ದವು. ಮಾರ್ಚ್ 7 ರಂದು ಸೆನ್ಸೆಕ್ಸ್ ತನ್ನ ಹಿಂದಿನ ಗರಿಷ್ಠ ಮಟ್ಟವಾದ 74,119.39 ಕ್ಕೆ ಏರಿಕೆಯಾಗಿತ್ತು. ನಿಫ್ಟಿ ಈ ಹಿಂದೆ ಗರಿಷ್ಠ 22,493.55 ಮಟ್ಟಕ್ಕೆ ತಲುಪಿತ್ತು.
ಲಾಭ ಗಳಿಸಿದ ಷೇರುಗಳು: ಸೆನ್ಸೆಕ್ಸ್ ಷೇರುಗಳಲ್ಲಿ ಎಚ್ಡಿಎಫ್ಸಿ ಬ್ಯಾಂಕ್, ಟೈಟನ್, ಟೆಕ್ ಮಹೀಂದ್ರಾ ಮತ್ತು ಏಷ್ಯನ್ ಪೇಂಟ್ಸ್ ಲಾಭ ಗಳಿಸಿದ ಪ್ರಮುಖ 20 ಷೇರುಗಳಾಗಿವೆ. ಟಿಸಿಎಸ್, ಮಾರುತಿ, ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಬಜಾಜ್ ಫಿನ್ ಸರ್ವ್ ಲಾಭ ಗಳಿಸಿದ ಇತರ ಷೇರುಗಳಾಗಿವೆ.
ಯಾರಿಗೆ ನಷ್ಟ?: ಇದಕ್ಕೆ ವ್ಯತಿರಿಕ್ತವಾಗಿ ಎಸ್ಬಿಐ, ಭಾರ್ತಿ ಏರ್ಟೆಲ್, ಜೆಎಸ್ಡಬ್ಲ್ಯೂ ಸ್ಟೀಲ್, ಪವರ್ ಗ್ರಿಡ್, ಐಟಿಸಿ ಮತ್ತು ರಿಲಯನ್ಸ್ ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿವೆ.
ಬಿಎಸ್ಇ ಲಾರ್ಜ್ ಕ್ಯಾಪ್ ಶೇಕಡಾ 0.34 ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 0.54 ರಷ್ಟು ಏರಿಕೆ ಕಂಡರೆ ಮಿಡ್ ಕ್ಯಾಪ್ ಸೂಚ್ಯಂಕವು ಶೇಕಡಾ 0.11 ರಷ್ಟು ಕುಸಿದಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಬುಧವಾರ ₹ 2,213.56 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರದ ಅಂಕಿ ಅಂಶಗಳು ತಿಳಿಸಿವೆ.
ಏಷ್ಯಾದ ಇತರ ಭಾಗಗಳಲ್ಲಿ ಸಿಯೋಲ್ ಮತ್ತು ಟೋಕಿಯೊ ಲಾಭದೊಂದಿಗೆ ಕೊನೆಗೊಂಡರೆ, ಹಾಂಗ್ ಕಾಂಗ್ ಮತ್ತು ಶಾಂಘೈ ರಜಾದಿನಗಳ ಕಾರಣದಿಂದ ಮುಚ್ಚಲ್ಪಟ್ಟಿವೆ. ಯುರೋಪಿಯನ್ ಮಾರುಕಟ್ಟೆಗಳು ಲಾಭದಲ್ಲಿ ವಹಿವಾಟು ನಡೆಸುತ್ತಿವೆ. ಯುಎಸ್ ಮಾರುಕಟ್ಟೆಗಳು ಬುಧವಾರದ ವಹಿವಾಟನ್ನು ಮಿಶ್ರ ಟಿಪ್ಪಣಿಯೊಂದಿಗೆ ಮುಕ್ತಾಯಗೊಳಿಸಿದವು.
ಏತನ್ಮಧ್ಯೆ ಜಾಗತಿಕ ತೈಲ ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಶೇಕಡಾ 0.36 ರಷ್ಟು ಏರಿಕೆಯಾಗಿ ಬ್ಯಾರೆಲ್ಗೆ 88.67 ಡಾಲರ್ಗೆ ತಲುಪಿದೆ.
ಇದನ್ನೂ ಓದಿ : ಇವಿ ಉತ್ಪಾದನಾ ಘಟಕ ಸ್ಥಾಪನೆ: ಸ್ಥಳ ಪರಿಶೀಲನೆಗಾಗಿ ಭಾರತಕ್ಕೆ ಆಗಮಿಸಲಿದೆ ಟೆಸ್ಲಾ ತಂಡ - TESLA