ನವದೆಹಲಿ: ಅಮೆರಿಕದ ಶಾರ್ಟ್ ಶೆಲ್ಲರ್ ಕಂಪನಿ ಹಿಂಡನ್‌ಬರ್ಗ್ ಮಾಡಿರುವ ಆರೋಪವನ್ನು ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಶನಿವಾರ ನಿರಾಕರಿಸಿದ್ದಾರೆ. ಹಿಂಡನ್‌ಬರ್ಗ್ ಆರೋಪಗಳು ಆಧಾರರಹಿತ, ತಮ್ಮ ಹಣಕಾಸು ವ್ಯವಹಾರಗಳು ತೆರೆದ ಪುಸ್ತಕವಿದ್ದಂತೆ ಎಂದು ದಂಪತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅದಾನಿ ಮನಿ ಸೈಫನ್ ಹಗರಣದಲ್ಲಿ ಬಳಸಲಾದ ವಿದೇಶಿ ಷೇರುಗಳಲ್ಲಿ ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಮತ್ತು ಅವರ ಪತಿ ಪಾಲುಗಳನ್ನು ಹೊಂದಿದ್ದಾರೆ ಎಂದು ಅಮೇರಿಕನ್ ಶಾರ್ಟ್-ಸೆಲ್ಲರ್ ಹಿಂಡೆನ್‌ಬರ್ಗ್ ರಿಸರ್ಚ್ ಆರೋಪಿಸಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸೆಬಿ ಅಧ್ಯಕ್ಷರು, ನಮ್ಮ ಜೀವನ, ಆಸ್ತಿ, ಹೂಡಿಕೆ ಮತ್ತು ಹಣಕಾಸಿನ ವ್ಯವಹಾರ ತೆರೆದ ಪುಸ್ತಕವಾಗಿದೆ. ಹಿಂಡನ್‌ಬರ್ಗ್ ರಿಸರ್ಚ್ ವಿರುದ್ಧ ಸೆಬಿ ಕ್ರಮ ಕೈಗೊಂಡಿದೆ. ಹಿಂಡನ್ಬರ್ಗ್ಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಮಾಧಬಿ ಪುರಿ ಬುಚ್ ಮತ್ತು ಧವಲ್ ಬುಚ್ ಹೇಳಿದ್ದಾರೆ. ಹಿಂಡನ್‌ಬರ್ಗ್ ವಿರುದ್ಧ ಸೆಬಿಯ ಕ್ರಮಕ್ಕೆ ಪ್ರತಿಯಾಗಿ ಚಾರಿತ್ರ್ಯ ಹಾಳು ಮಾಡುವ ಯತ್ನ ನಡೆದಿದೆ ಎಂದು ಬುಚ್ ದಂಪತಿ ಆರೋಪಿಸಿದ್ದಾರೆ.
ಆಗಸ್ಟ್ 10, 2024ರ ಹಿಂಡನ್‌ಬರ್ಗ್ ವರದಿಯಲ್ಲಿ ನಮ್ಮ ವಿರುದ್ಧ ಮಾಡಿರುವ ಆಧಾರರಹಿತ ಆರೋಪಗಳು ಮತ್ತು ಇತರ ವಿಚಾರಗಳನ್ನು ಬಲವಾಗಿ ನಿರಾಕರಿಸುತ್ತೇವೆ. ಈ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾಗಿದೆ. ನಮ್ಮ ಜೀವನ ಮತ್ತು ಹಣಕಾಸು ತೆರೆದ ಪುಸ್ತಕವಾಗಿದೆ. ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಈಗಾಗಲೇ ಸೆಬಿಗೆ ಸಲ್ಲಿಸಲಾಗಿದೆ. ನಾವು ಹಣಕಾಸಿನ ವ್ಯವಹಾರದ ಎಲ್ಲ ದಾಖಲೆಗಳನ್ನು ಬಹಿರಂಗಪಡಿಸಲು ಹಿಂಜರಿಯುವುದಿಲ್ಲ. ಇದಲ್ಲದೆ, ಸಂಪೂರ್ಣ ಪಾರದರ್ಶಕತೆಯ ಹಿತದೃಷ್ಟಿಯಿಂದ, ಸೂಕ್ತ ಸಮಯದಲ್ಲಿ ಈ ಬಗ್ಗೆ ವಿವರವಾದ ಮಾಹಿತಿ ನೀಡಲಾಗುವುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾಧವಿ ಪುರಿ ಬುಚ್ ಅವರು 2017ರಲ್ಲಿ ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿಯ (SEBI) ಪೂರ್ಣಸಮಯದ ಸದಸ್ಯರಾಗಿದ್ದು, ಬಳಿಕ ಮಾರ್ಚ್ 2022ರಲ್ಲಿ ಅಧ್ಯಕ್ಷರಾಗಿದ್ದಾರೆ.