ನವದೆಹಲಿ: ದೇಶದಲ್ಲೇ ಅತಿ ಹೆಚ್ಚು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇರುವ ರಾಜ್ಯ ಯಾವುದು ಗೊತ್ತಾ? ಆಂಧ್ರ ಪ್ರದೇಶ!! ವೈಸಿಪಿ ಅಧಿಕಾರದಲ್ಲಿರುವ ಆಂಧ್ರದಲ್ಲಿ ಲೀಟರ್ ಪೆಟ್ರೋಲ್ ಬೆಲೆ 109.87 ರೂ. ಮತ್ತು ಡೀಸೆಲ್ ಬೆಲೆ 97.6 ರೂ. ದಕ್ಷಿಣದಲ್ಲಿ ಕೇರಳ ಮತ್ತು ತೆಲಂಗಾಣದಲ್ಲಿ ಪೆಟ್ರೋಲ್ ಬೆಲೆ ಬಹುತೇಕ ಒಂದೇ ಶ್ರೇಣಿಯಲ್ಲಿದೆ. ಕಾಂಗ್ರೆಸ್ ಆಡಳಿತವಿರುವ ತೆಲಂಗಾಣ ರಾಜ್ಯದಲ್ಲಿ ಲೀಟರ್ ಪೆಟ್ರೋಲ್ ಬೆಲೆ ರೂ.107.39 ಮತ್ತು ಡೀಸೆಲ್ ಬೆಲೆ ರೂ.95.63 ಆಗಿದೆ. ಎಡಪಕ್ಷಗಳು ಅಧಿಕಾರದಲ್ಲಿರುವ ಕೇರಳದಲ್ಲಿ ಲೀಟರ್ ಪೆಟ್ರೋಲ್ ಬೆಲೆ ರೂ.107.54 ಮತ್ತು ಡೀಸೆಲ್ ಬೆಲೆ ರೂ.96.41 ಆಗಿದೆ. ಈ ರಾಜ್ಯಗಳಲ್ಲಿ ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಹೆಚ್ಚಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ತುಂಬಾ ಹೆಚ್ಚಿದೆ.
ವ್ಯಾಟ್ ಕಡಿಮೆ ಇರುವ ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂಧನ ದರಗಳು ಕಡಿಮೆ ಮಟ್ಟದಲ್ಲಿಯೇ ಇರುತ್ತವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಲೀಟರ್ ಪೆಟ್ರೋಲ್ ಬೆಲೆ ರೂ.82, ರೂ. 92.38 ಮಾತ್ರ. ಕಡಿಮೆ ಪೆಟ್ರೋಲ್ ಬೆಲೆ ಹೊಂದಿರುವ ರಾಜ್ಯಗಳು/ಯುಟಿಗಳ ಲಿಸ್ಟ್ನಲ್ಲಿ ದೆಹಲಿ (ಪ್ರತಿ ಲೀಟರ್‌ಗೆ ರೂ 94.76), ಗೋವಾ (ರೂ 95.19), ಮಿಜೋರಾಂ (ರೂ. 93.68) ಮತ್ತು ಅಸ್ಸೋಂ (ರೂ. 96.12) ಸೇರಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (ಪ್ರತಿ ಲೀಟರ್‌ಗೆ ರೂ. 78), ದೆಹಲಿ (ರೂ. 87.66) ಮತ್ತು ಗೋವಾ (ರೂ. 87.76) ಅಗ್ಗದ ಡೀಸೆಲ್ ಹೊಂದಿರುವ ರಾಜ್ಯಗಳು/ಯುಟಿಗಳ ಲಿಸ್ಟ್ನಲ್ಲಿ ಸೇರಿವೆ. ಇನ್ನು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ ರೂ.99.84 ಮತ್ತು ಡೀಸೆಲ್ ಬೆಲೆ ರೂ.85.93 ದಾಖಲಾಗಿದೆ.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಈ ರೀತಿ ದರ ಇವೆ: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿದೆ. ಲೀಟರ್ ಪೆಟ್ರೋಲ್ ಬೆಲೆ ಮಧ್ಯಪ್ರದೇಶದಲ್ಲಿ 106.45 ರೂ., ಬಿಹಾರದಲ್ಲಿ 105.16 ರೂ., ರಾಜಸ್ಥಾನದಲ್ಲಿ 104.86 ರೂ. ಮತ್ತು ಮಹಾರಾಷ್ಟ್ರದಲ್ಲಿ 104.19 ರೂ. ಛತ್ತೀಸ್‌ಗಢದಲ್ಲಿ ಪೆಟ್ರೋಲ್ ಬೆಲೆ ಸ್ವಲ್ಪ ಕಡಿಮೆಯಾಗಿದ್ದು 100.37 ರೂ. ಇದೆ.
ಇನ್ನು ಮಮತಾ ಬ್ಯಾನರ್ಜಿ ಅವರ ರಾಜಕೀಯ ಪಕ್ಷ ಟಿಎಂಸಿ ಅಧಿಕಾರದಲ್ಲಿರುವ ಬಂಗಾಳದಲ್ಲಿ ಲೀಟರ್ ಪೆಟ್ರೋಲ್ ಬೆಲೆ 103.93 ರೂ. ನವೀನ್ ಪಟ್ನಾಯಕ್ ಅವರ ಪಕ್ಷ ಅಧಿಕಾರದಲ್ಲಿರುವ ಒಡಿಶಾದಲ್ಲಿ ಪೆಟ್ರೋಲ್ ಬೆಲೆ ರೂ.101.04 ಆಗಿದ್ದರೆ, ಡಿಎಂಕೆ ಆಡಳಿತವಿರುವ ತಮಿಳುನಾಡಿನಲ್ಲಿ ರೂ. 100.73 ಆಗಿದೆ. ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ, ಛತ್ತೀಸ್‌ಗಢ ಮತ್ತು ಬಿಹಾರದಲ್ಲಿ ಸರಾಸರಿ ಡೀಸೆಲ್ ಬೆಲೆ ರೂ.92 ರಿಂದ ರೂ.93 ರಷ್ಟಿದೆ.
ರೂ.2 ಇಳಿಕೆ.. ರೂ.33 ಸಾವಿರ ಕೋಟಿ ನಷ್ಟ!: ಕಳೆದ ವಾರ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 2 ರೂಪಾಯಿ ಇಳಿಸಿದೆ. ಇದಾದ ಬಳಿಕ ಇಂಧನ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಆದರೆ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ದರಗಳು ಅತ್ಯಧಿಕವಾಗಿ ಮುಂದುವರಿದಿರುವುದು ಗಮನಾರ್ಹ. ಆಯಾ ರಾಜ್ಯ ಸರ್ಕಾರಗಳು ಮಾರಾಟ ತೆರಿಗೆ ಮತ್ತು ವ್ಯಾಟ್ ಕಡಿತಕ್ಕೆ ಮುಂದಾಗಿದ್ದರೆ ಈ ದರಗಳು ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುವ ಸಾಧ್ಯತೆ ಇದೆ.
ಚುನಾವಣಾ ಸಮಯದಲ್ಲಿ ಕೇಂದ್ರ ಸರ್ಕಾರದ ಉಪಕ್ರಮದಿಂದಾಗಿ ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಲಾ 2 ರೂ. ಕಡಿಮೆ ಆಗಿದೆ. ಆದರೆ ಈ ನಿರ್ಧಾರದಿಂದ ಶ್ರೀಸಾಮಾನ್ಯರಿಗೆ ಕೊಂಚ ನೆಮ್ಮದಿ ಸಿಗಲಿದೆ. ಆದರೆ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಭಾರಿ ನಷ್ಟ ಅನುಭವಿಸಲಿವೆ. ಎಷ್ಟರಮಟ್ಟಿಗೆ ಅಂದ್ರೆ.. ಈ ಬಾರಿ ವಾರ್ಷಿಕ ಆದಾಯದಲ್ಲಿ ಸುಮಾರು ರೂ.33 ಸಾವಿರ ಕೋಟಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.
ಓದಿ: ಗ್ರಾಹಕರಿಗೆ ಶುಭಸುದ್ದಿ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 2 ರೂಪಾಯಿ ಇಳಿಕೆ