ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿರ್ಬಂಧಗಳಿಂದಾಗಿ ಪೇಟಿಎಂ ಕಾರ್ಯಾಚರಣೆಗಳ ಬಗ್ಗೆ ವ್ಯಕ್ತವಾದ ಕಳವಳಕ್ಕೆ ಕಂಪನಿಯ ಸಂಸ್ಥಾಪಕ ವಿಜಯಶೇಖರ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಶುಕ್ರವಾರ ವಿಜಯಶೇಖರ್ ಶರ್ಮಾ ಪ್ರತಿಕ್ರಿಯಿಸಿ, ''ಪೇಟಿಎಂ ಫೆಬ್ರವರಿ 29ರ ನಂತರವೂ ಎಂದಿನಂತೆ ಮುಂದುವರಿಯಲಿದೆ. ನಮ್ಮನ್ನು ಬೆಂಬಲಿಸುವ ಪ್ರತಿಯೊಬ್ಬ ಗ್ರಾಹಕರಿಗೂ ವಂದನೆಗಳು. ಪ್ರತಿ ಸವಾಲಿಗೂ ಪರಿಹಾರವಿದೆ. ನಾವು ನಿಯಮಗಳಿಗೆ ಅನುಸಾರವಾಗಿ ದೇಶಕ್ಕೆ ಸೇವೆ ಸಲ್ಲಿಸಲು ಬದ್ಧ. ಪಾವತಿ ವ್ಯವಸ್ಥೆಯಲ್ಲಿ ಭಾರತದ ಆವಿಷ್ಕಾರಗಳು ವಿಶ್ವಾದ್ಯಂತ ಮೆಚ್ಚುಗೆಗೆ ಪಾತ್ರವಾಗಿವೆ ಎಂದು ಬರೆದುಕೊಂಡಿದ್ದಾರೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (ಪಿಪಿಬಿಎಲ್) ಠೇವಣಿಗಳನ್ನು ಸ್ವೀಕರಿಸದಂತೆ ಮತ್ತು ಈ ತಿಂಗಳ 29ರ ನಂತರ ವ್ಯಾಲೆಟ್-ಫಾಸ್ಟ್‌ಟ್ಯಾಗ್‌ಗಳನ್ನು ಟಾಪ್ ಅಪ್ ಮಾಡದಂತೆ ಆರ್‌ಬಿಐ ನಿರ್ಬಂಧ ವಿಧಿಸಿದೆ. ಇದು ಸಾಲಗಳು, ವಿಮೆ ವಿತರಣೆ ಮತ್ತು ಈಕ್ವಿಟಿ ಬ್ರೋಕಿಂಗ್‌ನಂತಹ ಹಣಕಾಸು ಸೇವೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು Paytm ಗುರುವಾರ ಸ್ಪಷ್ಟಪಡಿಸಿದೆ. ಆಫ್‌ಲೈನ್ ವ್ಯಾಪಾರಿ ಪಾವತಿ ನೆಟ್‌ವರ್ಕ್ ಸೇವೆಗಳಾದ Paytm QR, Paytm ಸೌಂಡ್‌ಬಾಕ್ಸ್ ಮತ್ತು Paytm ಕಾರ್ಡ್ ಯಂತ್ರ ಹಾಗೆಯೇ ಮುಂದುವರಿಯುತ್ತದೆ. ಇದರ ಜೊತೆಗೆ ಹೊಸ ಆಫ್‌ಲೈನ್ ವ್ಯಾಪಾರಿಗಳನ್ನು ನೇಮಿಸಿಕೊಳ್ಳಲಾಗುವುದು ಎಂದು ಹೇಳಿದೆ.
ಇದನ್ನೂ ಓದಿ: ಸರ್ಕಾರಗಳು ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು, ಉಚಿತ ಕೊಡುಗೆಗಳಿಗೆ ಅಲ್ಲ: ರಘುರಾಮ್ ರಾಜನ್