ನವದೆಹಲಿ: 2024ರಲ್ಲಿ ಜೂನ್‌ವರೆಗೆ ಒಂದು ಕೋಟಿಗೂ ಹೆಚ್ಚು ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ. ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಕೇಂದ್ರಾಡಳಿತ ಪ್ರದೇಶದ ಪ್ರವಾಸೋದ್ಯಮ ವಲಯವು ಅಭೂತಪೂರ್ವ ಬೆಳವಣಿಗೆ ಕಂಡಿದೆ ಎಂದು ಹೇಳಿದರು.
2020ರಲ್ಲಿ 34,70,834 ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಆಗಿನಿಂದಲೂ ಪ್ರವಾಸಿಗರ ಸಂಖ್ಯೆಯಲ್ಲಿ ನಿರಂತರವಾದ ಏರಿಕೆ ಕಂಡುಬಂದಿದೆ ಎಂದು ಅವರು ಹೇಳಿದರು.
2021ರಲ್ಲಿ ಈ ಸಂಖ್ಯೆ 1,13,14,884 ಆಗಿದ್ದರೆ, 2022ರಲ್ಲಿ 1,88,64,332 ಆಗಿತ್ತು. ಕಳೆದ ವರ್ಷ ಪ್ರವಾಸಿಗರ ಸಂಖ್ಯೆ 2,11,24,874ಕ್ಕೆ ಏರಿಕೆಯಾಗಿತ್ತು. ಇನ್ನು ಈ ವರ್ಷದ ಜೂನ್ ವರೆಗೆ 1,08,41,009 ಪ್ರವಾಸಿಗರು ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ.
ಪ್ರವಾಸೋದ್ಯಮ ನೀತಿ 2020 ಮತ್ತು ಜಮ್ಮು ಮತ್ತು ಕಾಶ್ಮೀರ ಕೈಗಾರಿಕಾ ನೀತಿ 2021ರ ಅಡಿಯಲ್ಲಿ ಪ್ರವಾಸೋದ್ಯಮದಲ್ಲಿ ಗಮನಾರ್ಹ ಸುಧಾರಣೆಯ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ವರದಿ ಮಾಡಿದೆ ಎಂದು ಸಚಿವರು ಮಾಹಿತಿ ನೀಡಿದರು.
ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯಲ್ಲಿ ಒಟ್ಟಾರೆ ಸುಧಾರಣೆಯ ನಂತರ, ಜಮ್ಮು ಮತ್ತು ಕಾಶ್ಮೀರಕ್ಕೆ ಕಳೆದ ನಾಲ್ಕು ವರ್ಷಗಳಿಂದ ಪ್ರವಾಸಿಗರ ಆಗಮನ ಹೆಚ್ಚಾಗಿದೆ ಮತ್ತು ಇದು ಈ ಉದ್ಯಮದೊಂದಿಗೆ ನೇರ ಅಥವಾ ಪರೋಕ್ಷವಾಗಿ ಸಂಪರ್ಕ ಹೊಂದಿರುವ ಸಾವಿರಾರು ಜನರ ಜೀವನೋಪಾಯಕ್ಕೆ ಸಹಾಯ ಮಾಡಿದೆ.
ಹೆಚ್ಚುತ್ತಿರುವ ಪ್ರವಾಸಿಗರಿಗೆ ಸ್ಥಳಾವಕಾಶ ಕಲ್ಪಿಸಲು ಮತ್ತು ಸ್ಥಳೀಯರಿಗೆ ಪ್ರವಾಸೋದ್ಯಮ ಕ್ಷೇತ್ರದ ಆರ್ಥಿಕ ಲಾಭಗಳನ್ನು ತಲುಪಿಸಲು ಸರ್ಕಾರವು ಹೋಂ ಸ್ಟೇಗಳಿಗಾಗಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಜಮ್ಮು ಮತ್ತು ಕಾಶ್ಮೀರ ಚಲನಚಿತ್ರ ನೀತಿ -2021 ಮತ್ತು ಹೌಸ್ ಬೋಟ್ ನೀತಿ -2020 ರ ಅಡಿಯಲ್ಲಿ ಸರ್ಕಾರವು 75 ಆಫ್-ಬೀಟ್ ತಾಣಗಳನ್ನು ಗುರುತಿಸಿದೆ ಎಂದು ಸಚಿವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ಪ್ರವಾಸೋದ್ಯಮ ವೇಗ ಪಡೆದುಕೊಂಡಿದೆ ಮತ್ತು ಗುರೆಜ್, ಕೇರನ್, ತೀತ್ವಾಲ್ ಮತ್ತು ಆರ್.ಎಸ್.ಪುರದಂತಹ ಇಲ್ಲಿಯವರೆಗೆ ಅಪರಿಚಿತ ಸ್ಥಳಗಳನ್ನು ಪ್ರವಾಸಿಗರಿಗಾಗಿ ಮುಕ್ತಗೊಳಿಸಲಾಗಿದೆ. ಅಲ್ಲದೆ ರಾಜ್ಯವು ಸಾಹಸ ಕ್ರೀಡೆ ಮತ್ತು ಗಾಲ್ಫ್ ಪ್ರವಾಸೋದ್ಯಮದಲ್ಲಿಯೂ ಉತ್ತಮ ಸಾಧನೆ ಮಾಡುತ್ತಿದೆ ಎಂದು ರೈ ಉತ್ತರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಜಾಗತಿಕ ಪಾಸ್ಪೋರ್ಟ್ ಸೂಚ್ಯಂಕದಲ್ಲಿ ಏರಿಕೆ ಕಂಡ ಭಾರತ; 58 ದೇಶಗಳಿಗೆ ವೀಸಾ ಮುಕ್ತ ಪ್ರವೇಶ - Indians visa free entry