ನವದೆಹಲಿ: ಆಗಸ್ಟ್ ತಿಂಗಳಲ್ಲಿ ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (ಯುಪಿಐ) ವಹಿವಾಟುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಶೇಕಡಾ 41 ರಷ್ಟು ಏರಿಕೆಯಾಗಿ ದಾಖಲೆಯ 14.96 ಬಿಲಿಯನ್ಗೆ ತಲುಪಿವೆ ಎಂದು ರಾಷ್ಟ್ರೀಯ ಪಾವತಿ ನಿಗಮ (ಎನ್ ಪಿಸಿಐ) ಅಂಕಿ ಅಂಶಗಳು ಭಾನುವಾರ ತಿಳಿಸಿವೆ. ಹಾಗೆಯೇ ಒಟ್ಟು ವಹಿವಾಟಿನ ಮೊತ್ತ ವರ್ಷದಿಂದ ವರ್ಷಕ್ಕೆ 20.61 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಎನ್ಪಿಸಿಐ ಹೇಳಿದೆ.
ಜಾಗತಿಕ ಪಾವತಿ ಪ್ಲಾಟ್ಫಾರ್ಮ್ ಪೇ ಸೆಕ್ಯೂರ್ನ ಇತ್ತೀಚಿನ ಮಾಹಿತಿಯ ಪ್ರಕಾರ, ಪ್ರತಿ ಸೆಕೆಂಡಿಗೆ 3,729.1 ಯುಪಿಐ ವಹಿವಾಟುಗಳು ನಡೆದಿವೆ. ಇದು 2022 ರಲ್ಲಿ ದಾಖಲಾದ ಪ್ರತಿ ಸೆಕೆಂಡಿಗೆ 2,348 ವಹಿವಾಟುಗಳಿಗಿಂತ ಶೇಕಡಾ 58 ರಷ್ಟು ಹೆಚ್ಚಾಗಿದೆ. ಸದ್ಯ ಯುಪಿಐ ವಹಿವಾಟಿನ ಸಂಖ್ಯೆಯಲ್ಲಿ ಚೀನಾದ ಅಲಿಪೇ, ಪೇ ಪಾಲ್ ಮತ್ತು ಬ್ರೆಜಿಲ್ನ ಪಿಐಕ್ಸ್ ಅನ್ನು ಮೀರಿಸಿದೆ.
ಜುಲೈನಲ್ಲಿ, ಯುಪಿಐ ವಹಿವಾಟುಗಳು 20.6 ಲಕ್ಷ ಕೋಟಿ ರೂ.ಗಳನ್ನು ದಾಟಿತ್ತು. ಇದು ತಿಂಗಳೊಂದರಲ್ಲಿ ದಾಖಲಾದ ಗರಿಷ್ಠ ಯುಪಿಐ ವಹಿವಾಟು ಆಗಿದೆ. ಯುಪಿಐ ವಹಿವಾಟಿನ ಮೌಲ್ಯವು ಈ ಹಿಂದಿನ ಸತತ ಮೂರು ತಿಂಗಳುಗಳಲ್ಲಿ 20 ಲಕ್ಷ ಕೋಟಿ ರೂ.ಗಿಂತ ಮೇಲ್ಮಟ್ಟದಲ್ಲಿದೆ. ಪೇ ಸೆಕ್ಯೂರ್ ಪ್ರಪಂಚದಾದ್ಯಂತದ 40 ಉನ್ನತ ಪರ್ಯಾಯ ಪಾವತಿ ವಿಧಾನಗಳನ್ನು ಪರಿಶೀಲಿಸಿ ಅಂಕಿ ಅಂಶಗಳನ್ನು ಕ್ರೋಢಿಕರಿಸಿದೆ.
ಡಿಜಿಟಲ್ ವಹಿವಾಟುಗಳಲ್ಲಿ ಭಾರತವು ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಭಾರತದಲ್ಲಿ ಈಗ ಶೇಕಡಾ 40 ಕ್ಕೂ ಹೆಚ್ಚು ಪಾವತಿಗಳನ್ನು ಡಿಜಿಟಲ್ ರೂಪದಲ್ಲಿ ಮಾಡಲಾಗುತ್ತದೆ ಮತ್ತು ಅವುಗಳಲ್ಲಿ ಹೆಚ್ಚಿನವುಗಳಿಗೆ ಯುಪಿಐ ಅನ್ನೇ ಬಳಸಲಾಗುತ್ತದೆ ಎಂದು ಸಂಶೋಧನೆಗಳು ತೋರಿಸಿವೆ.
ಈ ಕುರಿತು ಮಾತನಾಡಿದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ ಪಿಸಿಐ) ಸಿಇಒ ದಿಲೀಪ್ ಅಸ್ಬೆ, ಮುಂದಿನ 10 ರಿಂದ 15 ವರ್ಷಗಳಲ್ಲಿ ಯುಪಿಐ 100 ಬಿಲಿಯನ್ ವಹಿವಾಟುಗಳನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಯುಪಿಐ ಮೂಲಕ ಸಾಲ ನೀಡುವಿಕೆಯನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ಒಂದೆರಡು ವಾರಗಳಲ್ಲಿ ಈ ಕುರಿತಾದ ಜಾಹೀರಾತುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಅಧಿಕೃತ ಅಂಕಿಅಂಶಗಳ ಪ್ರಕಾರ, ಜೂನ್ನಲ್ಲಿ ಯುಪಿಐನಲ್ಲಿ 13.89 ಬಿಲಿಯನ್ ವಹಿವಾಟುಗಳು ದಾಖಲಾಗಿದ್ದು, ಈ ಸಂಖ್ಯೆ ಮೇ ತಿಂಗಳಲ್ಲಿ 14.04 ಬಿಲಿಯನ್ ಇತ್ತು. ಕನ್ಸಲ್ಟೆನ್ಸಿ ಸಂಸ್ಥೆ ಪಿಡಬ್ಲ್ಯೂಸಿ ಇಂಡಿಯಾ ವರದಿಯ ಪ್ರಕಾರ, ಯುಪಿಐ ವಹಿವಾಟಿನ ಸಂಖ್ಯೆ 2023-24ರಲ್ಲಿ ಇದ್ದ ಸುಮಾರು 131 ಬಿಲಿಯನ್ ನಿಂದ 2028-29 ರ ವೇಳೆಗೆ 439 ಬಿಲಿಯನ್ ಗೆ ಅಂದರೆ 3 ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇದು ಒಟ್ಟು ಚಿಲ್ಲರೆ ಡಿಜಿಟಲ್ ವಹಿವಾಟಿನ ಶೇಕಡಾ 91 ರಷ್ಟಾಗಲಿದೆ.
ಇತ್ತೀಚೆಗೆ ವಿಶ್ವದ ಹಲವಾರು ರಾಷ್ಟ್ರಗಳು ಯುಪಿಐ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಆಸಕ್ತಿ ತೋರಿಸಿದ್ದು, ಯುಪಿಐ ಮತ್ತು ರುಪೇ ಅನ್ನು ವಾಸ್ತವಿಕವಾಗಿ ಜಾಗತಿಕ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯನ್ನಾಗಿ ರೂಪಿಸುವತ್ತ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಯತ್ನಿಸುತ್ತಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇತ್ತೀಚೆಗೆ ಹೇಳಿದ್ದರು.
ಇದನ್ನೂ ಓದಿ : ಕಬ್ಬಿನಿಂದ ಎಥೆನಾಲ್ ಉತ್ಪಾದನೆ ಮೇಲಿನ ನಿರ್ಬಂಧ ತೆರವುಗೊಳಿಸಿದ ಕೇಂದ್ರ ಸರ್ಕಾರ - ethanol production