ನವದೆಹಲಿ: 2014ರಲ್ಲಿ ಕೇವಲ 5 ನಗರಗಳಿಗೆ ಸೀಮಿತವಾಗಿದ್ದ ಮೆಟ್ರೊ ರೈಲು ಸೇವೆಯನ್ನು ಕಳೆದ 10 ವರ್ಷಗಳಲ್ಲಿ ದೇಶದ 21 ನಗರಗಳಿಗೆ ವಿಸ್ತರಿಸಲಾಗಿದೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಸುದ್ದಿಗಾರರಿಗೆ ತಿಳಿಸಿದರು. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಳೆದ ದಶಕದಲ್ಲಿ 700 ಕಿಮೀನಷ್ಟು ಹೊಸ ಮೆಟ್ರೊ ಮಾರ್ಗ ನಿರ್ಮಿಸಲಾಗಿದ್ದು, ಒಟ್ಟು ಹಳಿಗಳ ಉದ್ದ 945 ಕಿಮೀಗೆ ತಲುಪಿದೆ ಎಂದು ಅವರು ಹೇಳಿದರು.
ಥಾಣೆಯಲ್ಲಿ ಸಮಗ್ರ ರಿಂಗ್ ಮೆಟ್ರೊ ರೈಲು ಯೋಜನೆ ಕಾರಿಡಾರ್ ಮತ್ತು ಪುಣೆ ಮತ್ತು ಬೆಂಗಳೂರಿನಲ್ಲಿ 78 ಕಿಮೀ ಉದ್ದದ ಮೆಟ್ರೊ ಜಾಲಗಳ ವಿಸ್ತರಣೆಯ ಮೂರು ಹೊಸ ಸಮೂಹ ಸಾರಿಗೆ ಯೋಜನೆಗಳ ಪ್ರಸ್ತಾಪಗಳಿಗೆ ಕ್ಯಾಬಿನೆಟ್ ಶುಕ್ರವಾರ ಅನುಮೋದನೆ ನೀಡಿದೆ. ಈ ಯೋಜನೆಗಳು ದೇಶದ ವಿಸ್ತರಿಸುತ್ತಿರುವ ಮೆಟ್ರೊ ಜಾಲಕ್ಕೆ ಬಹುದೊಡ್ಡ ಕೊಡುಗೆ ನೀಡಲಿವೆ. ಭಾರತದ ಮೆಟ್ರೊ ರೈಲು ವ್ಯವಸ್ಥೆ ಈಗಾಗಲೇ ಯುಎಸ್ಎ ಮತ್ತು ಚೀನಾ ನಂತರದ ವಿಶ್ವದ ಮೂರನೇ ಅತಿದೊಡ್ಡ ಮೆಟ್ರೊ ರೈಲು ಜಾಲವಾಗಿದೆ.
ಮೇಕ್ ಇನ್ ಇಂಡಿಯಾ ಉಪಕ್ರಮದ ಯಶಸ್ಸಿನ ಭಾಗವಾಗಿ ನಾವು ಶೀಘ್ರದಲ್ಲೇ ಯುಎಸ್ ಅನ್ನು ಮೀರಿಸಲಿದ್ದೇವೆ ಮತ್ತು ಚೀನಾದ ನಂತರ ಎರಡನೇ ಸ್ಥಾನಕ್ಕೇರಲಿದ್ದೇವೆ. ಗುರುಗ್ರಾಮ್, ಮನೇಸರ್ ಮತ್ತು ಧರುಹೆರಾ ಮತ್ತು ರಾಷ್ಟ್ರ ರಾಜಧಾನಿಯ ಉತ್ತರದಲ್ಲಿರುವ ಸೋನೆಪತ್ ಮತ್ತು ಪಾಣಿಪತ್ ಅನ್ನು ಸಂಪರ್ಕಿಸುವ ಉಳಿದ ಎರಡು ಆದ್ಯತೆಯ ಕಾರಿಡಾರ್ಗಳನ್ನು ಶೀಘ್ರದಲ್ಲೇ ಮಂಜೂರು ಮಾಡಲಾಗುವುದು ಎಂದು ಅವರು ಹೇಳಿದರು.
ಮೆಟ್ರೊ ಮಾರ್ಗದ ಅಭಿವೃದ್ಧಿಯ ವೇಗ ಹೆಚ್ಚಾಗಿರುವುದನ್ನು ಪ್ರಸ್ತಾಪಿಸಿದ ಸಚಿವರು, 2014 ಕ್ಕಿಂತ ಮೊದಲು ಪ್ರತಿ ತಿಂಗಳು ಕೇವಲ ಸರಾಸರಿ 600 ಮೀಟರ್ ಮೆಟ್ರೋ ಮಾರ್ಗವನ್ನು ಮಾತ್ರ ನಿರ್ಮಿಸಲಾಗುತ್ತಿತ್ತು. ಕಳೆದ 10 ವರ್ಷಗಳಲ್ಲಿ ಈ ಸಂಖ್ಯೆ ಪ್ರತಿ ತಿಂಗಳು 6 ಕಿಮೀಗೆ ಅಂದರೆ 10 ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.
ಮೆಟ್ರೋ ಬೋಗಿಗಳನ್ನು ತಯಾರಿಸಲು ಭಾರತವು ನಾಲ್ಕು ಅತ್ಯಾಧುನಿಕ ಕಾರ್ಖಾನೆಗಳನ್ನು ಸ್ಥಾಪಿಸಿದೆ. ಇವು ಕಳೆದ ಐದು ವರ್ಷಗಳಲ್ಲಿ 1,000 ಕ್ಕೂ ಹೆಚ್ಚು ಮೆಟ್ರೋ ಬೋಗಿಗಳನ್ನು ಉತ್ಪಾದಿಸಿವೆ ಎಂದು ಸಚಿವ ಖಟ್ಟರ್ ಮಾಹಿತಿ ನೀಡಿದರು.
ಭಾರತವು ಈಗ ವಿಶ್ವದ ಇತರ ದೇಶಗಳಲ್ಲಿ ಕೂಡ ಮೆಟ್ರೋ ರೈಲು ವ್ಯವಸ್ಥೆ ನಿರ್ಮಿಸುತ್ತಿದೆ. ದೆಹಲಿ ಮೆಟ್ರೋ ರೈಲು ನಿಗಮವು ಪ್ರಸ್ತುತ ಬಾಂಗ್ಲಾದೇಶದಲ್ಲಿ ಮೆಟ್ರೋ ರೈಲು ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ ಮತ್ತು ಜಕಾರ್ತಾಗೆ ಮೆಟ್ರೊ ರೈಲು ಸಲಹಾ ಸೇವೆಗಳನ್ನು ಒದಗಿಸುತ್ತಿದೆ. ಇದಲ್ಲದೆ, ಇಸ್ರೇಲ್, ಸೌದಿ ಅರೇಬಿಯಾ, ಕೀನ್ಯಾ ಮತ್ತು ಎಲ್ ಸಾಲ್ವಡಾರ್ನಂತಹ ದೇಶಗಳು ಸಹ ತಮ್ಮ ಮೆಟ್ರೋ ಅಭಿವೃದ್ಧಿ ಯೋಜನೆಗಳಿಗಾಗಿ ಡಿಎಂಆರ್ಸಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಆಸಕ್ತಿ ತೋರಿಸಿವೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ಗ್ರಾಹಕರಿಂದ ಆಕ್ಷೇಪ: ಎಐ ರಚಿತ ಚಿತ್ರ ತೆಗೆದುಹಾಕಲು ನಿರ್ಧರಿಸಿದ ಜೊಮ್ಯಾಟೊ - Zomato AI Generated Food Images