ನವದೆಹಲಿ: ರೈಲ್ವೆ ಇಲಾಖೆಯಲ್ಲಿ ನಿರುಪಯುಕ್ತವಾಗಿ ಬಿದ್ದಿರುವ ಗುಜರಿ (ಸ್ಕ್ರಾಪ್) ವಸ್ತುಗಳ ಮಾರಾಟದಿಂದಲೇ ಉತ್ತರ ರೈಲ್ವೆ ಇಲಾಖೆ 603 ಕೋಟಿ ರೂ ಆದಾಯಗಳಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಈ ನಿರುಪಯುಕ್ತ ವಸ್ತುಗಳಲ್ಲಿ ರೈಲಿನ ಬಿಡಿಭಾಗಗಳು, ಸ್ಲೀಪರ್ಸ್ ಹಾಗು ರೈಲ್ವೆ ಲೈನ್ ಹತ್ತಿರವಿರುವ ಟೈ ಬಾರ್ಗಳಿವೆ ಎಂದು ಇಲಾಖೆ ಮಾಹಿತಿ ನೀಡಿದೆ.
ಭಾರತೀಯ ರೈಲ್ವೆಯ ಜೆಲ್ಲಾ ವಲಯದ ರೈಲ್ವೆ ಮತ್ತು ಉತ್ಪಾದನಾ ಘಟಕದಲ್ಲಿ ಅತೀ ಹೆಚ್ಚು ಸ್ಕ್ರಾಪ್ ವಸ್ತುಗಳನ್ನು ಹೆಚ್ಚಿನ ಮೌಲ್ಯಕ್ಕೆ ಮಾಡುವಲ್ಲಿ ಉತ್ತರ ರೈಲ್ವೆ ಮೊದಲ ಸ್ಥಾನದಲ್ಲಿದೆ. 2023-24ರ ಆರ್ಥಿಕ ವರ್ಷದಲ್ಲಿ 603.79 ಕೋಟಿ ರೂ ಮೌಲ್ಯದ ವಸ್ತುಗಳ ಮಾರಾಟ ಮಾಡಲಾಗಿತ್ತು. ಈ ಮೂಲಕ ತಮ್ಮ ವಾರ್ಷಿಕ ಮಾರಾಟ ಗುರಿ 500 ಕೋಟಿ ರೂ ಮೀರಿಸಿದೆ ಎಂದು ಉತ್ತರ ರೈಲ್ವೆಯ ಜನರಲ್ ಮ್ಯಾನೇಜರ್ ಶೋಭನಾ ಚೌಧರಿ ತಿಳಿಸಿದರು.
ಪ್ರಸ್ತುತ ಆರ್ಥಿಕ ವರ್ಷದಲ್ಲಿ 100 ಕೋಟಿ, 200 ಕೋಟಿ, 300 ಕೋಟಿ ಮತ್ತು 400 ಕೋಟಿ ಸ್ಕ್ರಾಪ್ ಮಾರಾಟ ಮಾಡಿದ ಮೊದಲ ವಲಯ ರೈಲ್ವೆ ಎಂಬ ದಾಖಲೆಯನ್ನು ಉತ್ತರ ರೈಲ್ವೆ ಹೊಂದಿದೆ. ಸ್ಕ್ರಾಪ್‌ಗಳ ಮಾರಾಟದಿಂದ ಆದಾಯ ಬರುವ ಜತೆಗೆ ರೈಲ್ವೆ ಆವರಣ ಶುಚಿಯಾಗುತ್ತದೆ. ರೈಲ್ವೆ ಲೈನ್‌ಗಳ ಸಮೀಪ ಬಿದ್ದಿರುವ ಕಬ್ಬಿಣದ ತುಂಡುಗಳು, ಸ್ಲೀಪರ್ಸ್ ಮತ್ತು ಟೈಪ್ ಬಾರ್ಗಳು ಅಪಾಯ ಹೆಚ್ಚಿಸುತ್ತವೆ ಎಂದು ಅವರು ಹೇಳಿದರು.
ಸ್ಕ್ರಾಪ್ ವಸ್ತುಗಳ ಹೊರತಾಗಿ ಸಿಬ್ಬಂದಿಯ ಪಾಳು ಬಿದ್ದಿರುವ ವಸತಿ ಗೃಹ, ಕ್ಯಾಬಿನ್ಸ್, ಶೆಡ್ ಮತ್ತು ವಾಟರ್ ಟ್ಯಾಂಕ್‌ಗಳ ವಿಲೇವಾರಿ ಮಾಡುವ ಕೆಲಸವನ್ನೂ ರೈಲ್ವೆ ತೆಗೆದುಕೊಂಡಿತು. ಇದರಿಂದ ಆದಾಯ ಕೈಸೇರುವ ಜತೆಗೆ ಕಿಡಿಗೇಡಿಗಳಿಂದ ದುರುಪಯೋಗವಾಗುತ್ತಿದ್ದ ಈ ಜಾಗಗಳು ಇದೀಗ ಬಳಕೆಗೆ ಲಭ್ಯವಾಗಲಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ 2024: E-EPIC ಎಂದರೇನು, ಯಾರು ಅರ್ಹರು, ಡೌನ್‌ಲೋಡ್ ಮಾಡುವುದು ಹೇಗೆ?