ನವದೆಹಲಿ: ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳನ್ನು (General Insurance Companies) ವಿಲೀನಗೊಳಿಸುವ ಯಾವುದೇ ಪ್ರಸ್ತಾಪ ಪರಿಗಣನೆಯಲ್ಲಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.
ಮೂರು ಪಿಎಸ್ಯು ಸಾಮಾನ್ಯ ವಿಮಾ ಕಂಪನಿಗಳಾದ ಓರಿಯಂಟಲ್ ಇನ್ಶೂರೆನ್ಸ್, ನ್ಯಾಷನಲ್ ಇನ್ಶೂರೆನ್ಸ್ ಮತ್ತು ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಗಳಿಗೆ 2019-20ರಿಂದ 2021-22ರ ಅವಧಿಯಲ್ಲಿ 17,450 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗಿದೆ ಎಂದು ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
"ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳ ವಿಲೀನಕ್ಕೆ ಪ್ರಸ್ತುತ ಯಾವುದೇ ಪ್ರಸ್ತಾಪವು ಸರ್ಕಾರದ ಪರಿಗಣನೆಯಲ್ಲಿಲ್ಲ" ಎಂದು ಚೌಧರಿ ಹೇಳಿದರು.
2018-19ರ ಬಜೆಟ್ನಲ್ಲಿ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಈ ಮೂರು ಕಂಪನಿಗಳನ್ನು ವಿಲೀನಗೊಳಿಸಿ ಒಂದೇ ಕಂಪನಿಯನ್ನಾಗಿಸುವುದಾಗಿ ಘೋಷಿಸಿದ್ದರು. ಆದಾಗ್ಯೂ, ಈ ಕಂಪನಿಗಳ ಕಳಪೆ ಆರ್ಥಿಕ ಸ್ಥಿತಿ ಸೇರಿದಂತೆ ವಿವಿಧ ಕಾರಣಗಳಿಂದಾಗಿ ವಿಲೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
ಎಂಎಸ್ಎಂಇ ವಲಯದಲ್ಲಿನ ಅನುತ್ಪಾದಕ ಆಸ್ತಿಗಳ ಕುರಿತ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಚೌಧರಿ, ಮಾರ್ಚ್ 31, 2024 ರ ವೇಳೆಗೆ ಈ ವಲಯಕ್ಕೆ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳ (ಎಸ್ ಸಿಬಿ) ಒಟ್ಟು ಸಾಲ ಬಾಕಿ 28.04 ಲಕ್ಷ ಕೋಟಿ ರೂ. ಆಗಿದ್ದು, ಅದರಲ್ಲಿ ಅನುತ್ಪಾದಕ ಆಸ್ತಿ 1.25 ಲಕ್ಷ ಕೋಟಿ ರೂ. ಆಗಿದೆ. ಎಂಎಸ್ಎಂಇ ವಲಯದ ಎಸ್ಸಿಬಿಗಳ ಒಟ್ಟು ಎನ್ಪಿಎ ಶೇಕಡಾ 4.46 ರಷ್ಟಿದ್ದರೆ, ಒಟ್ಟು ಸಾಲಗಳು ಮತ್ತು ಮುಂಗಡಗಳು ಶೇಕಡಾ 2.74ರಷ್ಟಿದೆ ಎಂದು ಅವರು ಹೇಳಿದರು.
ಲಾಭದಾಯಕ ವ್ಯವಹಾರಗಳತ್ತ ಗಮನ ಹರಿಸುವಂತೆ ಹಣಕಾಸು ಸಚಿವಾಲಯವು ಸರ್ಕಾರಿ ಸ್ವಾಮ್ಯದ ಸಾಮಾನ್ಯ ವಿಮಾ ಕಂಪನಿಗಳಿಗೆ ಸೂಚಿಸಿದೆ. ಮೂರು ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳಾದ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್, ಓರಿಯಂಟಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಮತ್ತು ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಗೆ ಸರ್ಕಾರ ಇತ್ತೀಚೆಗೆ 7,250 ಕೋಟಿ ರೂ.ಗಳನ್ನು ಕಂತುಗಳಲ್ಲಿ ನೀಡಿದೆ. ಸರ್ಕಾರಿ ಸ್ವಾಮ್ಯದ ನಾಲ್ಕು ಸಾಮಾನ್ಯ ವಿಮಾ ಕಂಪನಿಗಳ ಪೈಕಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಮಾತ್ರ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಲಿಸ್ಟಿಂಗ್ ಆಗಿದೆ. ಉಳಿದ ಮೂರು ಕಂಪನಿಗಳು ಸಂಪೂರ್ಣವಾಗಿ ಸರ್ಕಾರದ ಒಡೆತನದಲ್ಲಿವೆ.
ಇದನ್ನೂ ಓದಿ: ಮಹಿಳಾ ಅಧಿಕಾರಿಗೆ ನಿಂದಿಸಿದ ಆರೋಪ: ಪಶ್ಚಿಮ ಬಂಗಾಳ ಸಚಿವ ಅಖಿಲ್ ಗಿರಿ ರಾಜೀನಾಮೆ - Bengal Minister Resigns