ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ PFRDAಯಿಂದ ಭಾರತದಲ್ಲಿ ಪ್ರತಿ ವರ್ಷ ಅಕ್ಟೋಬರ್ 1 ರಂದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ದಿವಸವನ್ನು ಆಚರಿಸಲಾಗುತ್ತದೆ. ಇದು ಭಾರತದ ನಾಗರಿಕರಲ್ಲಿ ಪಿಂಚಣಿ ಮತ್ತು ನಿವೃತ್ತಿ ಯೋಜನೆ ಉತ್ತೇಜಿಸುವ ಗುರಿ ಹೊಂದಿದೆ. ನಿವೃತ್ತಿಯ ನಂತರ ಆರ್ಥಿಕ ಸ್ವಾತಂತ್ರ್ಯ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಕಾಯಿದೆ ಸೆಪ್ಟೆಂಬರ್ 19, 2013 ರಂದು ಅಂಗೀಕರಿಸಲಾಯಿತು.1 ಫೆಬ್ರವರಿ 1, 2014 ರಂದು ಈ ದಿನವನ್ನು ಆಚರಿಸುವಂತೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿತ್ತು. ಸರ್ಕಾರಿ ನೌಕರರು ಚಂದಾದಾರರಾಗಿರುವ NPS ಅನ್ನು PFRDA ನಿಯಂತ್ರಿಸುತ್ತಿದೆ. ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಖಾಸಗಿ ಸಂಸ್ಥೆಗಳು, ಅಸಂಘಟಿತ ವಲಯದ ಉದ್ಯೋಗಿಗಳು ಇದರ ಚಂದಾದಾರಾಗಿರುತ್ತಾರೆ.
NPS ದಿನದ ಆಚರಣೆಯ ಉದ್ದೇಶಗಳೇನು?: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ದಿನ ಹಲವಾರು ಗುರಿಗಳು ಮತ್ತು ಪ್ರಯೋಜನಗಳನ್ನು ಹೊಂದಿದೆ. ಜನರಿಗೆ ನಿವೃತ್ತಿ ಯೋಜನೆಗಳ ಲಾಭ ಮತ್ತು ಪ್ರಯೋಜನಗಳನ್ನು ತಿಳಿಸುವುದಲ್ಲದೇ, ಆ ಬಗ್ಗೆ ಶಿಕ್ಷಣ ನೀಡುವ ಮೂಲಕ ನಿವೃತ್ತಿಗಾಗಿ ಉಳಿತಾಯ ಪ್ರಾರಂಭಿಸಲು ಉತ್ತೇಜಿಸುತ್ತದೆ. ಈ ಮೂಲಕ ವೃದ್ದಾಪ್ಯದಲ್ಲಿ ಸುರಕ್ಷಿತ ಜೀವನ ನಡೆಸುಲು ಉಳಿತಾಯ ಮಾಡುವಂತೆ ಪ್ರೇರೇಪಿಸುವುದು ಈ ಯೋಜನೆಯ ಉದ್ದೇಶ ಮತ್ತು ಗುರಿಯಾಗಿದೆ.
ಎರಡು ರೀತಿಯ NPS ಖಾತೆಗಳಿವೆ:
• ಶ್ರೇಣಿ I NPS ಖಾತೆ: ಎನ್ಪಿಎಸ್ ಮೊದಲ ಹಂತದಲ್ಲಿ ಕನಿಷ್ಠ ಹೂಡಿಕೆಯಿಂದ ಯೋಜನೆ ಆರಂಭಿಸಬಹುದು. ಕೇವಲ 500ಗಳಿಂದ ನೀವು ಖಾತೆಯನ್ನು ತೆರೆಯಬಹುದು. ಈ ಖಾತೆಯಲ್ಲಿ ಹೂಡಿಕೆಗೆ ಯಾವುದೇ ಮಿತಿ ಇರುವುದಿಲ್ಲ. ಈ ಖಾತೆಯು ಠೇವಣಿದಾರರು 60 ತಲುಪುವವರೆಗೆ ಲಾಕ್ - ಇನ್ ಅವಧಿ ಇರುತ್ತದೆ. ಲಾಕ್ ಇನ್ ಅವಧಿ ಮುಕ್ತಾಯದ ನಂತರ ಸಂಚಿತ ಮೊತ್ತದ ಶೇ 60ರಷ್ಟು ಹಣವನ್ನು ಹಿಂಪಡೆಯಬಹುದು. ಮಾಸಿಕ ಪಿಂಚಣಿ ಪಡೆಯಲು ಪೂರೈಕೆದಾರರಿಂದ ವರ್ಷಾಶನ ಖರೀದಿಸಲು ಉಳಿದ ಶೇ 40ರಷ್ಟು ಹಣವನ್ನು ಬಳಸಬಹುದು.
• ಶ್ರೇಣಿ II NPS ಖಾತೆ: ಶ್ರೇಣಿ II ಖಾತೆಯು ಈಗಾಗಲೇ ಶ್ರೇಣಿ I ಖಾತೆಯನ್ನು ಹೊಂದಿರುವ ವ್ಯಕ್ತಿಗಳಿಗೆ ಲಭ್ಯವಿರುವ ಸ್ವಯಂ ಪ್ರೇರಿತ ಖಾತೆಯಾಗಿದೆ. ಶ್ರೇಣಿ II ಖಾತೆಯನ್ನು ತೆರೆಯಲು, ವ್ಯಕ್ತಿಗಳು ಕನಿಷ್ಠ 250 ರೂಪಾಯಿ ಠೇವಣಿ ಮಾಡಬೇಕಾಗುತ್ತದೆ.
ಅರ್ಹತೆ: 18-70 ವರ್ಷ ವಯಸ್ಸಿನ ಭಾರತದ ಯಾವುದೇ ವೈಯಕ್ತಿಕ ನಾಗರಿಕ NPSಗೆ ಸೇರಬಹುದು.
ತೆರಿಗೆ ಪ್ರಯೋಜನಗಳು; ಸೆಕ್ಷನ್ 80 CCD(1) ಅಡಿ ಸಂಬಳದ ಶೇ10 ವರೆಗೆ ತೆರಿಗೆ ಕಡಿತ (ಮೂಲ + DA) ಒಟ್ಟಾರೆ ಸೀಲಿಂಗ್ ರೂ. ಸೆಕ್ಷನ್ 80 ಸಿಸಿಇ ಅಡಿಯಲ್ಲಿ 1.50 ಲಕ್ಷ ರೂ. ವರೆಗೂ ವಿನಾಯಿತಿ ಪಡೆದುಕೊಳ್ಳಬಹುದು.
ಸೆಕ್ಷನ್ 80 CCD(1B) ಅಡಿ ₹50,000 ವರೆಗೆ ತೆರಿಗೆ ಕಡಿತವು ಒಟ್ಟಾರೆ ಸೀಲಿಂಗ್ ಸೆಕ್ಷನ್ 80 ಸಿಸಿಇ ಅಡಿಯಲ್ಲಿ 1.50 ಲಕ್ಷ ರೂ.ವರೆಗೂ ವಿನಾಯಿತಿ ಪಡೆದುಕೊಳ್ಳಬಹುದು.
ಏನೆಲ್ಲ ಬದಲಾವಣೆ?: ಆಗಸ್ಟ್ 24, 2024 ರಂದು NDA ಸರ್ಕಾರವು ಹೊಸ "ಏಕೀಕೃತ ಪಿಂಚಣಿ ಯೋಜನೆ" (UPS) ಅನ್ನು ಅನಾವರಣಗೊಳಿಸಿತು, ಇದು ಮೂಲಭೂತವಾಗಿ ಹಳೆಯ ಪಿಂಚಣಿ ಯೋಜನೆಯನ್ನೇ ಹೋಲುತ್ತದೆ. ಮತ್ತು ಸರ್ಕಾರಿ ನೌಕರರು ಅವರ ಕೊನೆಯ ವೇತನ ಡ್ರಾದ ಶೇ 50ರಷ್ಟನ್ನು ಜೀವಮಾನದ ಮಾಸಿಕ ಪ್ರಯೋಜನವಾಗಿ ಖಾತರಿಪಡಿಸುತ್ತದೆ.
ಅಟಲ್ ಬಿಹಾರಿ ವಾಜಪೇಯಿ ಸರ್ಕಾರವು ಪರಿಚಯಿಸಿದ ಭಾರತದ ನಾಗರಿಕ ಸೇವಾ ಪಿಂಚಣಿ ವ್ಯವಸ್ಥೆಯ 21 ವರ್ಷಗಳ ಸುಧಾರಣೆಯನ್ನು ಇದು ರದ್ದುಗೊಳಿಸಿತು.
ಆಗಸ್ಟ್ 24, 2024 ರಂದು ಕ್ಯಾಬಿನೆಟ್ ಅನುಮೋದಿಸಿದ ಏಕೀಕೃತ ಪಿಂಚಣಿ ಯೋಜನೆಗಳು ಸರ್ಕಾರಿ ನೌಕರರು ಮರಣಹೊಂದಿದಾಗ ಅವರ ಪಿಂಚಣಿಯ ಶೇ 60ರಷ್ಟು ಹಣಕ್ಕೆ ಸಮಾನವಾದ ಕುಟುಂಬ ಪಿಂಚಣಿಯನ್ನು ಅಧಿಕೃತವಾಗಿ ಖಾತರಿಪಡಿಸುತ್ತದೆ, ಜೊತೆಗೆ ಗ್ರಾಚ್ಯುಟಿ ಪ್ರಯೋಜನಗಳ ಜೊತೆಗೆ ಒಂದು ದೊಡ್ಡ ಮೊತ್ತದ ನಿವೃತ್ತಿ ಪ್ರಯೋಜನಗಳನ್ನು ನೀಡುತ್ತದೆ.
ಕನಿಷ್ಠ ಪಿಂಚಣಿ; ಕನಿಷ್ಠ 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸುವ ವ್ಯಕ್ತಿಗಳಿಗೆ ತಿಂಗಳಿಗೆ 10,000 ನೀಡುವ ಯೋಜನೆ ಇದಾಗಿದೆ.
ಹೀಗಿದೆ ಅಂಕಿ- ಅಂಶ: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) 2023 - 24 ರ ಹಣಕಾಸು ಸಾಲಿನಲ್ಲಿ ಚಂದಾದಾರರು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳಗೊಂಡಿದ್ದಾರೆ. ಮಾರ್ಚ್ 2024 ರ ಹೊತ್ತಿಗೆ 73,555,721 ದಷ್ಟು ಚಂದಾದಾರರಾಗಿದ್ದಾರೆ. ಮಾರ್ಚ್ 2023 ಕ್ಕೆ ಹೋಲಿಸಿದರೆ ಇದು ಶೇ 16.28ರಷ್ಟು ಬೆಳವಣಿಗೆ ಕಂಡಿದೆ ಎಂದು ಅಂಕಿ- ಅಂಶಗಳು ಸೂಚಿಸುತ್ತಿವೆ.