ನವದೆಹಲಿ: ಭಾರತದ ಮ್ಯೂಚುವಲ್ ಫಂಡ್ ಎಸ್ಐಪಿ ಹೂಡಿಕೆಯು ಜುಲೈನಲ್ಲಿ ಅತಿ ಹೆಚ್ಚು 23,332 ಕೋಟಿ ರೂ.ಗಳಿಗೆ ತಲುಪಿದೆ. ಜೂನ್ನಲ್ಲಿ ಇದು 21,262 ಕೋಟಿ ರೂ. ಆಗಿತ್ತು. ವ್ಯವಸ್ಥಿತ ಹೂಡಿಕೆ ಯೋಜನೆಗಳಲ್ಲಿ (ಎಸ್ಐಪಿ) ಇತ್ತೀಚೆಗೆ ಹೆಚ್ಚಿನ ಬಂಡವಾಳ ಹರಿದು ಬಂದಿರುವುದರಿಂದ ಒಟ್ಟು ಮ್ಯೂಚುವಲ್ ಫಂಡ್ ಉದ್ಯಮದ ನಿರ್ವಹಣೆಯಲ್ಲಿರುವ ಸ್ವತ್ತುಗಳು (ಎಯುಎಂ) (Assets Under Management) ಜುಲೈನಲ್ಲಿ 64.69 ಲಕ್ಷ ಕೋಟಿಗೆ ತಲುಪಿದೆ.
ಎಎಂಎಫ್ಐ (ಅಸೋಸಿಯೇಷನ್ ಆಫ್ ಮ್ಯೂಚುವಲ್ ಫಂಡ್ಸ್ ಇನ್ ಇಂಡಿಯಾ) ಅಂಕಿಅಂಶಗಳ ಪ್ರಕಾರ, ಈಕ್ವಿಟಿ ಫಂಡ್ಗಳಲ್ಲಿನ ಒಟ್ಟು ಒಳಹರಿವು ಕಳೆದ ತಿಂಗಳಲ್ಲಿ ಶೇಕಡಾ 8.6 ರಷ್ಟು ಕುಸಿದು 37,113.4 ಕೋಟಿ ರೂ.ಗೆ ತಲುಪಿದೆ. ಇದು ಜೂನ್ನಲ್ಲಿ 40,608.19 ಕೋಟಿ ರೂ. ಆಗಿತ್ತು. ಓಪನ್ ಎಂಡೆಡ್ ಇಕ್ವಿಟಿ ಫಂಡ್ಗಳಲ್ಲಿನ ಒಳಹರಿವು ಸತತ 41 ನೇ ತಿಂಗಳು ಏರಿಕೆಯಲ್ಲಿದೆ. ಜುಲೈನಲ್ಲಿ ಸೆನ್ಸೆಕ್ಸ್ ಶೇಕಡಾ 3.43 ಮತ್ತು ನಿಫ್ಟಿ ಶೇಕಡಾ 3.92 ರಷ್ಟು ಏರಿಕೆಯಾಗಿರುವುದು ಕೂಡ ಗಮನಾರ್ಹ.
ಚಿಲ್ಲರೆ ಹೂಡಿಕೆದಾರರು ಮ್ಯೂಚುವಲ್ ಫಂಡ್ಗಳಲ್ಲಿ ನಿರಂತರ ಹೂಡಿಕೆ ಮಾಡುತ್ತಿರುವುದರಿಂದ ಉದ್ಯಮದ ಬೆಳವಣಿಗೆಯ ದರ ಸಕಾರಾತ್ಮಕವಾಗಿದೆ ಎಂದು ಎಎಂಎಫ್ಐ ಮುಖ್ಯ ಕಾರ್ಯನಿರ್ವಾಹಕ ವೆಂಕಟ್ ಚಲಸಾನಿ ಹೇಳಿದ್ದಾರೆ. ಪ್ರಸ್ತುತ, ಮ್ಯೂಚುವಲ್ ಫಂಡ್ಗಳು ಚಿಲ್ಲರೆ ಹೂಡಿಕೆದಾರರ ಹಣಕಾಸು ಹೂಡಿಕೆಯ ಪ್ರಮುಖ ಭಾಗವಾಗಿವೆ.
ವಲಯ ಮತ್ತು ವಿಷಯಾಧಾರಿತ ನಿಧಿಗಳಲ್ಲಿ (sectoral and thematic funds) ಗರಿಷ್ಠ ಹೂಡಿಕೆ ಕಂಡುಬರುತ್ತಿದೆ. ಜುಲೈನಲ್ಲಿ ಈ ವಿಭಾಗದಲ್ಲಿ 18,386.35 ಕೋಟಿ ರೂ.ಗಳ ನಿವ್ವಳ ಹೂಡಿಕೆ ಬಂದಿದೆ.
ಜುಲೈನಲ್ಲಿ ಡೆಬ್ಟ್ ಮ್ಯೂಚುವಲ್ ಫಂಡ್ಗಳಲ್ಲಿ 1,19,587.60 ಕೋಟಿ ರೂ.ಗಳ ನಿವ್ವಳ ಒಳಹರಿವು ಕಂಡುಬಂದಿದೆ. ಇದಕ್ಕೆ ವ್ಯತಿರಿಕ್ತವಾಗಿ ಜೂನ್ನಲ್ಲಿ 1,07,357.62 ಕೋಟಿ ರೂ.ಗಳ ನಿವ್ವಳ ಹೊರಹರಿವು ಇತ್ತು. ಅಲ್ಪಾವಧಿಯ ಲಿಕ್ವಿಡ್ ಫಂಡ್ ವಿಭಾಗದಲ್ಲಿ 70,060.88 ಕೋಟಿ ರೂ., ಮನಿ ಮಾರ್ಕೆಟ್ ಫಂಡ್ಗಳಿಗೆ 28,738.03 ಕೋಟಿ ರೂ. ಹರಿದು ಬಂದಿದೆ.
ಜುಲೈ ಪೂರ್ಣ ತಿಂಗಳಲ್ಲಿ ಎಫ್ ಪಿಐಗಳು ಈಕ್ವಿಟಿ ಮತ್ತು ಡೆಬ್ಟ್ ಫಂಡ್ಗಳಲ್ಲಿ 54,727 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಎನ್ಎಸ್ಡಿಎಲ್ ಅಂಕಿಅಂಶಗಳ ಪ್ರಕಾರ, ಎಫ್ ಪಿಐಗಳು ಜುಲೈನಲ್ಲಿ ಈಕ್ವಿಟಿಯಲ್ಲಿ 32,364 ಕೋಟಿ ರೂ ಮತ್ತು ಡೆಬ್ಟ್ ನಿಧಿಗಳಲ್ಲಿ 22,363 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.
ಇದನ್ನೂ ಓದಿ : ಭಾರತೀಯ ಶಾಕಾಹಾರಿ ಊಟಕ್ಕೆ ಬೇಡಿಕೆ: ಪಾಕಿಸ್ತಾನದ ಕರಾಚಿಯಲ್ಲಿ ಹೊಸ ಟ್ರೆಂಡ್ - Indian Food in Karachi