ನವದೆಹಲಿ: ಕೇವಲ 23 ತಿಂಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಗ್ರ್ಯಾಂಡ್ ವಿಟಾರಾ ಕಾರುಗಳು ಮಾರಾಟವಾಗಿವೆ ಎಂದು ಮಾರುತಿ ಸುಜುಕಿ ಇಂಡಿಯಾ ಸೋಮವಾರ ಹೇಳಿದೆ. 2022ರಲ್ಲಿ ಬಿಡುಗಡೆಯಾದ ಈ ಮಾದರಿಯು ಎಸ್‌ಯುವಿಗಳ ಹೊಸ ಯುಗಕ್ಕೆ ನಾಂದಿ ಹಾಡಿದೆ. ಇದರಲ್ಲಿನ 'ಸ್ಟ್ರಾಂಗ್ ಹೈಬ್ರಿಡ್' ಮತ್ತು ಇದು 'ಎಸ್-ಸಿಎನ್‌ಜಿ' ಮಾದರಿಯಲ್ಲಿಯೂ ಲಭ್ಯವಿರುವುದರಿಂದ ಇದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದು ಕಂಪನಿ ತಿಳಿಸಿದೆ.
"ಸ್ಟ್ರಾಂಗ್ ಹೈಬ್ರಿಡ್ ವೈಶಿಷ್ಟ್ಯದೊಂದಿಗೆ ಗ್ರ್ಯಾಂಡ್ ವಿಟಾರಾ ತನ್ನ ವಿಭಾಗದಲ್ಲಿ ಕ್ರಾಂತಿಯನ್ನುಂಟು ಮಾಡಿದೆ. 'ಆಲ್ ಗ್ರಿಪ್' ತಂತ್ರಜ್ಞಾನವು ಎಸ್‌ಯುವಿಪ್ರಿಯರನ್ನು ಆಕರ್ಷಿಸಿದೆ" ಎಂದು ಮಾರುತಿ ಸುಜುಕಿ ಇಂಡಿಯಾದ ಮಾರ್ಕೆಟಿಂಗ್ ಮತ್ತು ಸೇಲ್ಸ್‌ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೋ ಬ್ಯಾನರ್ಜಿ ಹೇಳಿದರು.
"2024ರ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 12ರಷ್ಟು ಮಾರುಕಟ್ಟೆ ಪಾಲು ಹೊಂದಿರುವ ಗ್ರ್ಯಾಂಡ್ ವಿಟಾರಾ ಹೈಪರ್ ಆಕ್ಟಿವ್ ಮಿಡ್-ಎಸ್ ಯುವಿ ವಿಭಾಗದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ" ಎಂದು ಅವರು ತಿಳಿಸಿದರು.
ಬೆಲೆ ಮತ್ತು ವೈಶಿಷ್ಟ್ಯಗಳು: ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯ ಬೆಲೆ ರೂ.10.99 ಲಕ್ಷದಿಂದ ರೂ.20.1 ಲಕ್ಷಗಳವರೆಗೆ (ಎಕ್ಸ್ ಶೋರೂಂ) ಇದೆ. ಈ ಎಸ್ಯುವಿ 9.0 ಇಂಚಿನ ಸ್ಮಾರ್ಟ್ ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಂ, ಅರ್ಕಾಮಿಸ್ ಸೌಂಡ್ ಸಿಸ್ಟಮ್, 7.0 ಇಂಚಿನ ಫುಲ್ ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್, ಎಚ್‌ಯುಡಿ ಡಿಸ್ ಪ್ಲೇ, ವೈರ್‌ಲೆಸ್ ಚಾರ್ಜಿಂಗ್, ಆಂಬಿಯೆಂಟ್ ಲೈಟಿಂಗ್, 360 ಡಿಗ್ರಿ ಕ್ಯಾಮೆರಾ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ವಿತ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆನ್ಸ್, ಕನೆಕ್ಟೆಡ್ ಕಾರ್ ಟೆಕ್, ಆಟೋ ಎಲ್ಇಡಿ ಹೆಡ್ ಲ್ಯಾಂಪ್‌ಗಳು, ಪನೋರಮಿಕ್ ಸನ್ ರೂಫ್, 360-ಡಿಗ್ರಿ ಕ್ಯಾಮೆರಾ ಮತ್ತು ಇನ್ನೂ ಹೆಚ್ಚಿನ ಸೌಲಭ್ಯಗಳಿವೆ.
ಎಂಜಿನ್ ಮತ್ತು ಗೇರ್ ಬಾಕ್ಸ್: ಎಂಜಿನ್ ಮತ್ತು ಗೇರ್ ಬಾಕ್ಸ್ ಬಗ್ಗೆ ಹೇಳುವುದಾದರೆ, ಇದು ಎರಡು ಮಾದರಿಯ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. 1.5-ಲೀಟರ್ ಕೆ 15 ಸಿ ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ 103 ಬಿಹೆಚ್‌ಪಿ ಮತ್ತು 135 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಗೇರ್ ಬಾಕ್ಸ್ ಆಯ್ಕೆಗಳು 5-ಸ್ಪೀಡ್ ಮ್ಯಾನುವಲ್ ಅಥವಾ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಅನ್ನು ಒಳಗೊಂಡಿವೆ ಮತ್ತು ಇದು ಅನೇಕ ಮೋಡ್‌ಗಳೊಂದಿಗೆ ಎಡಬ್ಲ್ಯುಡಿಯನ್ನೂ ಸಹ ಪಡೆಯುತ್ತದೆ. ಮ್ಯಾನುವಲ್ ಟೈಪ್ಗೆ 21.1 ಕಿ.ಮೀ, ಅಟೊಮ್ಯಾಟಿಕ್ ಟೈಪ್ಗೆ 20.6 ಕಿ.ಮೀ ಮತ್ತು ಮ್ಯಾನುವಲ್ ಎಡಬ್ಲ್ಯುಡಿ ರೂಪಾಂತರಕ್ಕೆ 19.4 ಕಿ.ಮೀ ಮೈಲೇಜ್ ಹೊಂದಿದೆ.
ಅತ್ಯಧಿಕ ವಾಹನ ರಫ್ತು ಮಾಡಿದ ಮಾರುತಿ ಸುಜುಕಿ: ಏತನ್ಮಧ್ಯೆ, ಭಾರತದ ಆಟೋಮೊಬೈಲ್ ರಫ್ತು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇಕಡಾ 15.5ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಸಿಯಾಮ್) ಪ್ರಕಾರ, ಮಾರುಕಟ್ಟೆಯ ಅಗ್ರಗಣ್ಯ ಮಾರುತಿ ಸುಜುಕಿ ಇಂಡಿಯಾ ಈ ತ್ರೈಮಾಸಿಕದಲ್ಲಿ ಅತ್ಯಧಿಕ 69,962 ವಾಹನಗಳನ್ನು ರಫ್ತು ಮಾಡಿದೆ.
ಇದನ್ನೂ ಓದಿ: ಐಸಿಐಸಿಐ ಬ್ಯಾಂಕ್ಗೆ 11,059 ಕೋಟಿ ರೂ. ನಿವ್ವಳ ಲಾಭ: 64 ಹೊಸ ಶಾಖೆ ಆರಂಭ - ICICI Bank profit