ನವದೆಹಲಿ: ಭಾರತೀಯ ಷೇರು ಪೇಟೆಯ ಸೂಚ್ಯಂಕಗಳು ಕಳೆದ ವಾರದಿಂದ ತಮ್ಮ ಏರಿಳಿತವನ್ನು ಮುಂದುವರೆಸಿವೆ. ಆದ್ರೆ, ಸೋಮವಾರದ ಷೇರು ಮಾರುಕಟ್ಟೆಯ ಆರಂಭಿಕ ವ್ಯವಹಾರದಲ್ಲಿ ಸೂಚ್ಯಂಕಗಳು ಸಾರ್ವಕಾಲಿಕ ಜಿಗಿತ ಕಂಡಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಕೇಂದ್ರ ಸಚಿವ ಸಂಪುಟದ ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ನಂತರ, ಸರ್ಕಾರ ರಚನೆಯಲ್ಲಿ ಸುಗಮ ಪರಿವರ್ತನೆಯು ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಬೀರಿದೆ.
ವರದಿ ಬರೆಯುವ ಸಮಯದಲ್ಲಿ, ಸೆನ್ಸೆಕ್ಸ್ 76,890.34 ಅಂಕ (ಶೇ. 0.3 ಶೇಕಡಾ) ಮತ್ತು ನಿಫ್ಟಿ 23,372 ಅಂಕ (ಶೇ. 0.4) ಏರಿಕೆ ಕಂಡಿದೆ. ಇಂದಿನ ಆರಂಭಿಕ ಹಂತದಲ್ಲಿ ಕ್ರಮವಾಗಿ ಬಿಎಸ್ಇ ಸೆನ್ಸೆಕ್ಸ್ 76,960.96 ಪಾಯಿಂಟ್ಸ್ ಮತ್ತು ಎನ್ಎಸ್ಇ ನಿಫ್ಟಿ 23,411.90 ಪಾಯಿಂಟ್ಸ್ ತಮ್ಮ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದೆ. ಬಹುತೇಕ ಪ್ರಮುಖ ವಲಯಗಳ ಷೇರುಗಳ ಸೂಚ್ಯಂಕಗಳು ಗ್ರೀನ್ ಆಗಿರುವುದು ಕಂಡುಬಂದಿದೆ.
ಹೂಡಿಕೆದಾರರು ಮುಂಬರುವ US ಫೆಡ್ ಬಡ್ಡಿದರ ನಿರ್ಧಾರ, ಭಾರತದ ಹಣದುಬ್ಬರ ಡೇಟಾ (ಚಿಲ್ಲರೆ ಮತ್ತು ಸಗಟು ಎರಡೂ) ಮತ್ತು ಹೊಸ ಸರ್ಕಾರದ ನಿರ್ಧಾರಗಳ ಮೇಲೆ ಕಣ್ಣು ನೆಟ್ಟಿದೆ ಎಂದು ಹೇಳುತ್ತಾರೆ ವಿಶ್ಲೇಷಕರು. ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ ಮಂತ್ರಿಗಳಿಗೆ ಸಚಿವಾಲಯದ ಖಾತೆಗಳ ಹಂಚಿಕೆ ಮಾಡುವುದು ಸಹ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಮಾತುಗಳು ಷೇರುಪೇಟೆ ವಲಯದಲ್ಲಿ ಕೇಳಿ ಬರುತ್ತಿದೆ.
ಭಾರತದ ಚಿಲ್ಲರೆ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇಕಡಾ 4.83 ಕ್ಕೆ ಇಳಿದಿದೆ. ಮಾರ್ಚ್‌ನಲ್ಲಿ ಶೇಕಡಾ 4.85ರಷ್ಟು ಕಡಿಮೆಯಾಗಿದೆ. ಆದಾಗ್ಯೂ, ಗ್ರಾಹಕ ಆಹಾರದ ಬೆಲೆ ಹಣದುಬ್ಬರವು ಕಳೆದ ತಿಂಗಳು ಶೇ 8.52 ರಿಂದ ಶೇ 8.70 ಕ್ಕೆ ಏರಿದೆ. ಭಾರತದಲ್ಲಿನ ಚಿಲ್ಲರೆ ಹಣದುಬ್ಬರವು ಆರ್‌ಬಿಐನ 2-6 ಪ್ರತಿಶತದಷ್ಟು ಸರಿಯಾದ ಮಟ್ಟದಲ್ಲಿದೆ. ಆದರೆ, ಮಾದರಿ ದರವು 4 ಶೇಕಡಾ ಸನ್ನಿವೇಶಕ್ಕಿಂತ ಮೇಲಿದೆ.
ತಜ್ಞರು ಹೇಳುವುದೇನು?: "ವಿಶೇಷವಾಗಿ ಹೂಡಿಕೆದಾರರು ಮುಂಬರುವ US ಫೆಡ್ ಸಭೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಚುನಾವಣೋತ್ತರ ಕುಸಿತದ ನಂತರದ ಚೇತರಿಕೆಯು ಭಾಗವಹಿಸುವ ಹೂಡಿಕೆದಾರರಲ್ಲಿ ಸ್ಥಿತಿಸ್ಥಾಪಕತ್ವ ಸೂಚಿಸುತ್ತದೆ" ಎಂದು ರೆಲಿಗೇರ್ ಬ್ರೋಕಿಂಗ್ ಲಿ ಸಂಸ್ಥೆಯ ತಜ್ಞ ಅಜಿತ್ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.
"ಇದೀಗ ಐಟಿ ಮತ್ತು ಎಫ್‌ಎಂಸಿಜಿಯಂತಹ ವಲಯಗಳ ಏರಿಕೆ ಕಾಣುವ ಸಾಧ್ಯತೆಯಿದೆ. ಆದರೆ, ಟ್ರೆಡರ್ಸ್ ಜಾಗರೂಕರಾಗಿರಬೇಕು ಮತ್ತು ಬೆಂಚ್‌ಮಾರ್ಕ್‌ಗೆ ಅನುಗುಣವಾಗಿ ಚಲಿಸುವ ಷೇರುಗಳ ಮೇಲೆ ಗಮನ ಕೇಂದ್ರೀಕರಿಸಬೇಕು" ಎಂದು ಮಿಶ್ರಾ ತಿಳಿಸಿದರು.
"ಮುಂದಿನ ವಾರದ ಗಮನವು ಹಣಕಾಸು, ರಕ್ಷಣಾ ಕ್ಷೇತ್ರ, ರಸ್ತೆಗಳು, ಇಂಧನ, ವಾಣಿಜ್ಯ ಮತ್ತು ರೈಲ್ವೆಗಳಂತಹ ಪ್ರಮುಖ ಷೇರುಗಳು ಏರಿಳಿತ ಜಾಸ್ತಿ ಇರುತ್ತದೆ. ವಾರಾಂತ್ಯದಲ್ಲಿ ಮಾರುಕಟ್ಟೆಯಲ್ಲಿ ಏರಿಳಿತ ಕಂಡುಬರಲಿದೆ" ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ, ಹೇಳಿದ್ದಾರೆ.
ಚುನಾವಣಾ ಫಲಿತಾಂಶದ ದಿನ ಆಗಿದ್ದೇನು?: ಚುನಾವಣಾ ಫಲಿತಾಂಶದ ದಿನವಾದ ಜೂನ್ 4 ರಂದು, ಬಿಜೆಪಿ ನಿರೀಕ್ಷಿತ ಸ್ಥಾನಗಳು ಬಾರದೇ ಇರುವ ಹಿನ್ನೆಲೆ, ಸೆನ್ಸೆಕ್ಸ್ 4,389.73 ಪಾಯಿಂಟ್‌ಗಳು ಮತ್ತು ನಿಫ್ಟಿ 1,379.40 ಪಾಯಿಂಟ್‌ಗಳ ಕುಸಿದಾಗ ಮಾರುಕಟ್ಟೆಯ ಚಿತ್ರವು ಸಂಪೂರ್ಣ ಕೆಂಪುಮಯವಾಗಿತ್ತು. ಲೋಕಸಭೆಯ ಫಲಿತಾಂಶಗಳನ್ನು ಪ್ರಕಟಿಸಿದ ದಿನದಂದು ಭಾರತೀಯ ಷೇರುಗಳು ರಕ್ತದೋಕುಳಿಯನ್ನು ಕಂಡವು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟವು (ಎನ್‌ಡಿಎ) ಅನುಕೂಲಕರ ಬಹುಮತವನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಆ ನಂತರ ಷೇರು ಮಾರುಕಟ್ಟೆಯ ಎಲ್ಲಾ ಸೂಚ್ಯಂಕಗಳು ಚೇತರಿಕೆ ಕಾಣಲು ಆರಂಭಿಸಿದವು. ಇದೀಗ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ಜಿಗಿತ ಕಂಡಿವೆ.
ಇದನ್ನೂ ಓದಿ: ನೀವು ಬೇಗನೆ ಕೋಟ್ಯಧಿಪತಿ ಆಗಲು ಬಯಸುವಿರಾ?: 15x15x15 ನಿಯಮ ಅನುಸರಿಸಿ! - 15x15x15 Investing Rule