ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಆಗಸ್ಟ್ ನಲ್ಲಿ ಒಟ್ಟು 1.82 ಲಕ್ಷ ಕಾರುಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ತಿಂಗಳಲ್ಲಿ ಮಾರಾಟವಾಗಿದ್ದ 1.89 ಲಕ್ಷ ಸಂಖ್ಯೆಗೆ ಹೋಲಿಸಿದರೆ ಮಾರಾಟವು ಸುಮಾರು ಶೇಕಡಾ 3.9 ರಷ್ಟು (ವರ್ಷದಿಂದ ವರ್ಷಕ್ಕೆ) ಕಡಿಮೆಯಾಗಿದೆ. ಕಂಪನಿಯ ಒಟ್ಟು ದೇಶೀಯ ಮಾರಾಟವು (ಪ್ರಯಾಣಿಕರ ವಾಹನಗಳು, ಲಘು ವಾಣಿಜ್ಯ ವಾಹನಗಳು ಮತ್ತು ಒಇಎಂ ಸೇರಿದಂತೆ) ಶೇಕಡಾ 5.3 ರಷ್ಟು ಇಳಿಕೆಯಾಗಿ ಸುಮಾರು 1.56 ಲಕ್ಷ ಕಾರುಗಳಿಗೆ ತಲುಪಿದೆ.
ಮಾರುತಿ ಸುಜುಕಿ ಕಂಪನಿಯು ಆಗಸ್ಟ್ ನಲ್ಲಿ ದೇಶದಿಂದ 26,003 ಸಂಖ್ಯೆಯ ಕಾರುಗಳನ್ನು ರಫ್ತು ಮಾಡಿದೆ. ಕಳೆದ ವರ್ಷ 24,614 ಕಾರುಗಳನ್ನು ರಫ್ತು ಮಾಡಲಾಗಿತ್ತು. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಆಗಸ್ಟ್ ಅವಧಿಯಲ್ಲಿ, ಮಾರುತಿ ಸುಜುಕಿ ಇಂಡಿಯಾ ಒಟ್ಟು 8,78,691 ಸಂಖ್ಯೆಯ ಕಾರುಗಳನ್ನು ಮಾರಾಟ ಮಾಡಿದ್ದು, ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ 8,68,742 ಸಂಖ್ಯೆಯ ಕಾರುಗಳು ಮಾರಾಟವಾಗಿದ್ದವು.
ಮಾರುತಿ ಸುಜುಕಿ ಇಂಡಿಯಾ 1981 ರಲ್ಲಿ ಸ್ಥಾಪನೆಯಾಗಿತ್ತು. ಅದರ ಮುಂದಿನ ವರ್ಷ, 1982 ರಲ್ಲಿ ಭಾರತ ಸರ್ಕಾರ ಮತ್ತು ಜಪಾನ್ ನ ಪ್ರತಿಷ್ಠಿತ ಸುಜುಕಿ ಮೋಟಾರ್ ಕಾರ್ಪೊರೇಷನ್ (ಎಸ್ ಎಂಸಿ) ನಡುವೆ ಮಹತ್ವದ ಜಂಟಿ ಉದ್ಯಮ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಸುಮಾರು ಎರಡು ದಶಕಗಳ ನಂತರ, 2002 ರ ಹೊತ್ತಿಗೆ, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಎಸ್ ಎಂಸಿಯ ಅಂಗಸಂಸ್ಥೆಯಾಗಿ ಪರಿವರ್ತನೆಗೊಂಡಿತು.
ಏತನ್ಮಧ್ಯೆ, ಕಿಯಾ ಇಂಡಿಯಾ ಆಗಸ್ಟ್ ನಲ್ಲಿ ಭಾರತದಲ್ಲಿ 22,523 ಕಾರುಗಳನ್ನು ಮಾರಾಟ ಮಾಡಿದ್ದು, ಇದು ಕಳೆದ ವರ್ಷದ ಇದೇ ತಿಂಗಳಲ್ಲಿ ಮಾರಾಟವಾದ 19,219 ಕಾರುಗಳಿಗೆ ಹೋಲಿಸಿದರೆ ಶೇಕಡಾ 17.19 ರಷ್ಟು ಬೆಳವಣಿಗೆಯಾಗಿದೆ. 10,073 ಸಂಖ್ಯೆಯಷ್ಟು ಹೊಸ ಸೊನೆಟ್ ಕಾರುಗಳು ಮಾರಾಟವಾಗಿವೆ ಎಂದು ಕಂಪನಿ ತಿಳಿಸಿದೆ.
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಇಂಡಿಯಾ ಕಂಪನಿಯ ಕಾರುಗಳ ಮಾರಾಟವು ಆಗಸ್ಟ್ನಲ್ಲಿ ಶೇಕಡಾ 35 ರಷ್ಟು ಏರಿಕೆಯಾಗಿ 30,879 ಕ್ಕೆ ತಲುಪಿದೆ. ಎಸ್ ಯುವಿಗಳು ಮತ್ತು ಎಂಪಿವಿಗಳು ಕಂಪನಿಯ ಮಾರಾಟ ಸಂಖ್ಯೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತಲೇ ಇವೆ. ಇದು ಈ ಸೆಗ್ಮೆಂಟ್ ವಾಹನಗಳಿಗೆ ಹೆಚ್ಚುತ್ತಿರುವ ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ.
ಜೆಎಸ್ ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾದ ಕಾರುಗಳ ಚಿಲ್ಲರೆ ಮಾರಾಟವು ಆಗಸ್ಟ್ನಲ್ಲಿ ಶೇಕಡಾ 9 ರಷ್ಟು ಏರಿಕೆಯಾಗಿ 4,571 ಕ್ಕೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿಯು 4,185 ಕಾರುಗಳನ್ನು ಮಾರಾಟ ಮಾಡಿತ್ತು. ಸೆಪ್ಟೆಂಬರ್ 11 ರಂದು ಕಂಪನಿಯು ವಿಂಡ್ಸರ್ ಎಂಬ ಹೊಸ ಮಾದರಿಯನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ.
ಇದನ್ನೂ ಓದಿ : ಆಗಸ್ಟ್ನಲ್ಲಿ 14.96 ಬಿಲಿಯನ್ಗೆ ತಲುಪಿದ ಯುಪಿಐ ವಹಿವಾಟುಗಳ ಸಂಖ್ಯೆ: ಶೇ 41ರಷ್ಟು ಏರಿಕೆ - UPI transactions