ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2024 -–25ನೇ ಸಾಲಿನ ಮಧ್ಯಂತರ ಬಜೆಟ್ ಅನ್ನು ಲೋಕಸಭೆಯಲ್ಲಿ ಮಂಡಿಸಿದರು. ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಮಧ್ಯಂತರ ಬಜೆಟ್ ಆಡಳಿತಾರೂಢ ಬಿಜೆಪಿಯ ಪ್ರಬಲ ಮಾನಸಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ ಎಂದು ಎಸ್ & ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ವರದಿಯಲ್ಲಿ ಹೇಳಲಾಗಿದೆ.
2019 ರ ಲೋಕಸಭಾ ಚುನಾವಣೆಗೂ ಮುಂಚಿನ ಮಧ್ಯಂತರ ಬಜೆಟ್ ಹಾಗೂ 2024ರ ಲೋಕಸಭಾ ಚುನಾವಣೆಗೂ ಮುನ್ನ ಇಂದು ಮಂಡಿಸಿರುವ 2024ನೇ ಸಾಲಿನ ಮಧ್ಯಂತರ ಬಜೆಟ್ ವಿಭಿನ್ನವಾಗಿದ್ದು, ಬಿಜೆಪಿಯ ಧ್ವನಿಯಲ್ಲಿ ಹೆಚ್ಚಿನ ರಾಜಕೀಯ ವಿಶ್ವಾಸವನ್ನು ಸೂಚಿಸುವಂತಿದೆ ಎಂದು ಎಸ್ ಅಂಡ್ ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ನೀಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಾಮಾಜಿಕ ಕಲ್ಯಾಣ ವಿಸ್ತರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಮೂಲಕ, ಜನಪ್ರೀಯ ಯೋಜನೆಗಳಿಂದ ದೂರ ಉಳಿದಿದೆ. ಈ ಮೂಲಕ 2024-25 ನೇ ಸಾಲಿನ ಮಧ್ಯಂತರ ಬಜೆಟ್ ಅನ್ನು ಸರ್ಕಾರದ ಕಾರ್ಯಕ್ಷಮತೆಯ ಕಾರ್ಡ್ ಆಗಿ ರೂಪಿಸಲಾಗಿದೆ ಎಂದು ಅದು ಬಣ್ಣಿಸಿದೆ. ಸಾರ್ವತ್ರಿಕ ಚುನಾವಣೆಗಳಿಗೆ ಮುಂಚಿತವಾಗಿ ಮತದಾರರ ಸ್ನೇಹಿ ಬಜೆಟ್ ನೀಡುವುದು ಆಯಾಯ ಸರ್ಕಾಗಳು ಮಾಡಿಕೊಂಡು ಬಂದಿರುವ ಸಂಪ್ರದಾಯವಾಗಿದೆ. ಈ ಬಾರಿಯ ಮಧ್ಯಂತರ ಬಜೆಟ್‌ನಲ್ಲಿ ಚುನಾವಣೆಗೂ ಒತ್ತು ನೀಡುತ್ತಾ, ಖಾಸಗಿ ಹೂಡಿಕೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಮೂಲಸೌಕರ್ಯ ವೆಚ್ಚಗಳ ಮೇಲೆ ತನ್ನ ನಿರಂತರ ಗಮನವನ್ನು ಸರ್ಕಾರ ನೀಡಿಕೊಂಡು ಬಂದಿರುವುದು ಗೊತ್ತಾಗುತ್ತದೆ. ನಿರಂತರ ಆರ್ಥಿಕ ಬೆಳವಣಿಗೆಯನ್ನು ಉಳಿಸಿಕೊಳ್ಳುವ ಮುಖೇನ ಭಾರತದ ಸ್ಪರ್ಧಾತ್ಮಕತೆಯನ್ನು ಮತ್ತಷ್ಟು ಬಲಗೊಳಿಸುವ ಕೆಲಸ ಮಾಡಿದೆ ಎಂದು ಎಸ್ ಅಂಡ್ ಪಿ ವರದಿಯಲ್ಲಿ ಹೇಳಲಾಗಿದೆ.
ಹಣಕಾಸು ಸಚಿವರು ವಾಸ್ತವಿಕ ಬಂಡವಾಳ ವೆಚ್ಚದಲ್ಲಿ ಶೇಕಡಾ 11 ರಷ್ಟು ಹೆಚ್ಚಳವನ್ನು ತೋರಿಸಿದರೂ 2023-24 ಬಜೆಟ್‌ನಲ್ಲಿನ ಬಂಡವಾಳ ವೆಚ್ಚದ ಬೆಳವಣಿಗೆಯ ಗುರಿ 33 ಶೇಕಡಾಕ್ಕಿಂತ ಕಡಿಮೆಯಾಗಿದೆ. ಅದೇನೇ ಇದ್ದರೂ, ಇದು ಸರ್ಕಾರದ ಮೂಲಸೌಕರ್ಯ ಹೂಡಿಕೆಯ ಕಾರ್ಯಸೂಚಿಯನ್ನು ಪ್ರಸ್ತುತ ಪಡಿಸಿದೆ. ಇನ್ನು GDP ಯಲ್ಲಿ ಬಂಡವಾಳ ಹೂಡಿಕೆಯ ಪಾಲನ್ನು ದಾಖಲೆಯ 3.4 ಪ್ರತಿಶತಕ್ಕೆ ತಂದು ನಿಲ್ಲಿಸಿರುವುದು ಗಮನಾರ್ಹ ಎಂದು ವರದಿಯಲ್ಲಿ ಹೇಳಲಾಗಿದೆ.
ಆದಾಗ್ಯೂ, ಏಪ್ರಿಲ್ 2024 ರಿಂದ ಪ್ರಾರಂಭವಾಗುವ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಗೆ ಸ್ಥಿರ ಹೂಡಿಕೆಯ ಕೊಡುಗೆಯು ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆಗಳಿಲ್ಲ. ಇನ್ನೊಂದು ಕಡೆ ಏರುತ್ತಿರುವ ಆಹಾರ ಬೆಲೆಗಳು, ಹೆಚ್ಚಿದ ಬಡ್ಡಿದರಗಳು ಮತ್ತು ದೀರ್ಘಕಾಲದ ಬಾಹ್ಯ ಅಪಾಯಗಳು ಆರ್ಥಿಕತೆ ಮೇಲೆ ಕರಿನೆರಳಿದ್ದಂತೆ. ಹಲವು ಅಡೆ ತಡೆಗಳ ಮಧ್ಯೆಯೂ ಭಾರತದ ಜಿಡಿಪಿ ಬೆಳವಣಿಯನ್ನು ಎಸ್ ಅಂಡ್ ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ಶೇ 6.3ರಷ್ಟು ಜಿಡಿಪಿ ಬೆಳವಣಿಗೆ ಇರಲಿದೆ ಎಂದು ಅಂದಾಜಿಸಿದೆ.
ವಿತ್ತೀಯ ಬಲವರ್ಧನೆಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರವು ತನ್ನ ವಿತ್ತೀಯ ಕೊರತೆಯನ್ನು 2023-24 ರಲ್ಲಿ GDP ಯ 5.8 ಶೇಕಡಾದಿಂದ 5.1ಕ್ಕೆ ಇಳಿಕೆ ಮಾಡುವ ಗುರಿಯನ್ನು ಹೊಂದಿದೆ. ಇದು ಆಕ್ರಮಣಕಾರಿ ಗುರಿ ಆಗಿದೆ ಎಂದು ಎಸ್ ಅಂಡ್ ಪಿ ವಿಶ್ಲೇಷಣೆ ಮಾಡಿದೆ. ಚುನಾವಣೆಯ ನಂತರ ಅಂತಿಮ ಬಜೆಟ್‌ನಲ್ಲಿ ನಿಜವಾದ ಹಣಕಾಸಿನ ಕೊರತೆಯ ಗುರಿಯನ್ನು ಪರಿಷ್ಕರಣೆ ಆಗುವ ಸಾಧ್ಯತೆ ಇದೆ. ಈ ಅಂಶವನ್ನು ವರದಿಯಲ್ಲಿ ಗಮನಿಸಲಾಗಿದೆ.
ಪ್ರಧಾನ ಮಂತ್ರಿ ಗತಿ ಶಕ್ತಿ ಅಡಿಯಲ್ಲಿ ಅಭಿವೃದ್ಧಿಯನ್ನು ಮುಂದುವರಿಸಲು ನಿರ್ಧರಿಸುವ ಕೇಂದ್ರ ಸರ್ಕಾರದ ನಿರ್ಧಾರ ಧನಾತ್ಮಕವಾಗಿಯೇ ಇವೆ. ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಭಾರತದ ಭಾಗವಹಿಸುವಿಕೆಯನ್ನು ಇನ್ನಷ್ಟು ಹೆಚ್ಚಿಸಲು ಮತ್ತು ಜಾಗತಿಕವಾಗಿ ಹೊಸ ವ್ಯಾಪಾರ ಮಾರ್ಗಗಳನ್ನು ಅಭಿವೃದ್ಧಿಪಡಿಸಲು ಸರ್ಕಾರವು ಯೋಜಿತ ಗುರಿಯನ್ನೇ ಹಾಕಿಕೊಂಡಿದೆ. ರೈಲ್ವೆ ಮತ್ತು ಬಂದರು ಕಾರಿಡಾರ್‌ಗಳ ಘೋಷಣೆ ಹಾಗೂ ಹೆಚ್ಚಿನ ಟ್ರಾಫಿಕ್ ಸಾಂದ್ರತೆಯ ಕಾರಿಡಾರ್ ಯೋಜನೆಗಳು ಭಾರತದ ಅಭಿವೃದ್ಧಿಯಲ್ಲಿ ನಿರ್ಣಾಯಕವಾಗಿವೆ.