ನವದೆಹಲಿ: ಭಾರತದ ಬಾಸ್ಮತಿ ಉದ್ಯಮದ ಆದಾಯವು ಈ ಹಣಕಾಸು ವರ್ಷದಲ್ಲಿ ಶೇ 4ರಷ್ಟು (ವರ್ಷದಿಂದ ವರ್ಷಕ್ಕೆ) ಬೆಳವಣಿಗೆಯಾಗಲಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟವಾದ ಸುಮಾರು 70,000 ಕೋಟಿ ರೂ.ಗಳಿಗೆ ತಲುಪಲಿದೆ ಎಂದು ವರದಿಯೊಂದು ಗುರುವಾರ ತಿಳಿಸಿದೆ.
ಕಳೆದ ಹಣಕಾಸು ವರ್ಷದಲ್ಲಿ ಶೇ 20ರಷ್ಟು ಆದಾಯ ವೃದ್ಧಿಯಾಗಿತ್ತು. ಆದರೆ, ಈ ವರ್ಷ ಈ ಪ್ರಮಾಣ ಕಡಿಮೆಯಾಗಲಿದೆ. ಆದಾಯ ಕಡಿಮೆಯಾದರೂ ಕನಿಷ್ಠ ರಫ್ತು ಬೆಲೆಯ (ಎಂಇಪಿ) ನಿಯಮ ರದ್ದತಿ, ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಗಳ ಕಾರಣದಿಂದಾಗಿ ಬಾಸ್ಮತಿ ಉದ್ಯಮದ ಆದಾಯವು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಲಿದೆ ಎಂದು ಕ್ರಿಸಿಲ್ ರೇಟಿಂಗ್ಸ್ ವರದಿ ತಿಳಿಸಿದೆ.
ಬಾಸ್ಮತಿ ಅಕ್ಕಿಯ ರಫ್ತು ಹೆಚ್ಚಿಸಲು ಎಂಇಪಿಯನ್ನು ತಕ್ಷಣವೇ ತೆಗೆದುಹಾಕುವುದಾಗಿ ಸರ್ಕಾರ ಕಳೆದ ವಾರ ಘೋಷಿಸಿದೆ. ದೇಶೀಯ ಮಾರುಕಟ್ಟೆಗೆ ಅಗತ್ಯವಿರುವಷ್ಟು ಬಾಸ್ಮತಿ ಅಕ್ಕಿಯು ಲಭ್ಯ ಇರುವುದನ್ನು ನೋಡಿಕೊಂಡು ಎಂಇಪಿಯನ್ನು ತೆಗೆದುಹಾಕಲಾಗಿದೆ.
ಭಾರತದಲ್ಲಿ ಬಾಸ್ಮತಿ ಅಕ್ಕಿಯ ಬೆಲೆ ಹೆಚ್ಚಾಗಿದ್ದರಿಂದ ರಫ್ತಿಗೆ ಕಡಿವಾಣ ಹಾಕಲು ತಾತ್ಕಾಲಿಕ ಕ್ರಮವಾಗಿ ಆಗಸ್ಟ್ 2023 ರಲ್ಲಿ ಬಾಸ್ಮತಿ ಅಕ್ಕಿಯ ಮೇಲೆ ಪ್ರತಿ ಟನ್ಗೆ 1,200 ಡಾಲರ್ ಎಂಇಪಿ ವಿಧಿಸಲಾಗಿತ್ತು. ವ್ಯಾಪಾರ ಸಂಸ್ಥೆಗಳು ಮತ್ತು ಮಧ್ಯಸ್ಥಗಾರರೊಂದಿಗಿನ ಚರ್ಚೆಯ ನಂತರ, ಇಷ್ಟು ದೊಡ್ಡ ಮೊತ್ತದ ಎಂಇಪಿಯಿಂದಾಗಿ ರಫ್ತು ಉದ್ಯಮಕ್ಕೆ ತೊಂದರೆಯಾಗುತ್ತಿದೆ ಎಂಬ ಆತಂಕದ ಮಧ್ಯೆ, ಸರ್ಕಾರವು ಅಕ್ಟೋಬರ್ 2023 ರಲ್ಲಿ ಎಂಇಪಿ ಬೆಲೆಯನ್ನು ಪ್ರತಿ ಮೆಟ್ರಿಕ್ ಟನ್ಗೆ 950 ಡಾಲರ್ಗೆ ಇಳಿಕೆ ಮಾಡಿತ್ತು. ಕ್ರಿಸಿಲ್ ವರದಿ ಪ್ರಕಾರ, ಎಂಇಪಿಯನ್ನು ತೆಗೆದುಹಾಕಿದ ನಂತರ ಉದ್ಯಮಗಳು ಈಗ ಎಂಇಪಿಗಿಂತ ಕಡಿಮೆ ಇರುವ ಬಾಸ್ಮತಿ ಅಕ್ಕಿ ರಫ್ತು ಮಾಡಲು ಸಾಧ್ಯವಾಗಲಿದೆ.
ಒಟ್ಟಾರೆ ಬಾಸ್ಮತಿ ಅಕ್ಕಿ ಮಾರಾಟದ ಪೈಕಿ ಶೇಕಡಾ 72 ರಷ್ಟಿರುವ ರಫ್ತು ಈ ಹಣಕಾಸು ವರ್ಷದಲ್ಲಿ ಶೇಕಡಾ 3-4 ರಷ್ಟು ಬೆಳೆಯುವ ಸಾಧ್ಯತೆಯಿದೆ ಎಂದು ಕ್ರಿಸಿಲ್ ರೇಟಿಂಗ್ಸ್ ನಿರ್ದೇಶಕ ನಿತಿನ್ ಕನ್ಸಾಲ್ ಹೇಳಿದ್ದಾರೆ. ಹೋಟೆಲ್, ರೆಸ್ಟೋರೆಂಟ್ ಮತ್ತು ಕೆಫೆ ವಲಯದಿಂದ ಹೆಚ್ಚಿನ ಬೇಡಿಕೆ, ಬೆಲೆ ಇಳಿಕೆ ಮತ್ತು ಕುಟುಂಬಗಳ ಆದಾಯದಲ್ಲಿ ಸ್ಥಿರವಾದ ಏರಿಕೆಯಿಂದಾಗಿ ದೇಶೀಯ ಬಾಸ್ಮತಿ ಮಾರಾಟವು ಶೇಕಡಾ 6 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಕನ್ಸಾಲ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಕ್ರಿಸಿಲ್ ರೇಟಿಂಗ್ಸ್ ತಂಡದ ನಾಯಕಿ ಸ್ಮೃತಿ ಸಿಂಗ್, ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ಬಾಸ್ಮತಿ ಅಕ್ಕಿ ಕಂಪನಿಗಳು ಈ ಹಣಕಾಸು ವರ್ಷದಲ್ಲಿ ತಮ್ಮ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಸಾಮರ್ಥ್ಯವನ್ನು ಶೇಕಡಾ 10 ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಹೇಳಿದರು.