ಮುಂಬೈ : ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಐಸಿಐಸಿಐ ಬ್ಯಾಂಕ್ 11,059 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದ 9.648.2 ಕೋಟಿ ರೂ.ಗೆ ಹೋಲಿಸಿದರೆ ನಿವ್ವಳ ಲಾಭ ಶೇ 14.6ರಷ್ಟು ಏರಿಕೆಯಾಗಿದೆ.
ಈ ಬಗ್ಗೆ ಮಾತನಾಡಿದ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ (ಇಡಿ) ಸಂದೀಪ್ ಬಾತ್ರಾ, 2025 ರ ಮೊದಲ ತ್ರೈಮಾಸಿಕದಲ್ಲಿ ನಮ್ಮ ಗೃಹ ಹಣಕಾಸು ಅಂಗಸಂಸ್ಥೆಯಾದ ಐಸಿಐಸಿಐ ಹೋಮ್ ಫೈನಾನ್ಸ್ನಲ್ಲಿ ಸುಮಾರು 500 ಕೋಟಿ ರೂ. ಹೂಡಿಕೆ ಮಾಡಿದ್ದೇವೆ ಎಂದು ಹೇಳಿದರು.
ಬ್ಯಾಂಕಿನ ನಿವ್ವಳ ಬಡ್ಡಿ ಆದಾಯವು ಮೊದಲ ತ್ರೈಮಾಸಿಕದಲ್ಲಿ ಶೇಕಡಾ 7.3 ರಷ್ಟು ಏರಿಕೆಯಾಗಿ 19,552.9 ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ನಿವ್ವಳ ಬಡ್ಡಿ ಆದಾಯ 18,227 ಕೋಟಿ ರೂ. ಆಗಿತ್ತು.
ಬ್ಯಾಂಕಿನ ಒಟ್ಟು ಅನುತ್ಪಾದಕ ಆಸ್ತಿ ಶೇಕಡಾ 2.15 ರಷ್ಟಿದೆ. ನಿವ್ವಳ ಅನುತ್ಪಾದಕ ಆಸ್ತಿ (ಎನ್ಎನ್ಪಿಎ) ಕಳೆದ ವರ್ಷ ಇದ್ದ ಶೇಕಡಾ 0.42 ಕ್ಕೆ ಹೋಲಿಸಿದರೆ ಈ ವರ್ಷ ಶೇಕಡಾ 0.43 ರಷ್ಟಿದೆ. ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷಿತ ಭವಿಷ್ಯದ ನಷ್ಟಗಳನ್ನು ಪಾವತಿಸಲು ಸ್ವತ್ತುಗಳಾಗಿ ಮೀಸಲಿಟ್ಟ ನಿಧಿಗಳು ವರ್ಷದಿಂದ ವರ್ಷಕ್ಕೆ ಶೇಕಡಾ 3.1 ರಷ್ಟು ಏರಿಕೆಯಾಗಿ 1,332.2 ಕೋಟಿ ರೂ.ಗೆ ತಲುಪಿದೆ ಎಂದು ಬ್ಯಾಂಕ್ ಬಹಿರಂಗಪಡಿಸಿದೆ.
ಅವಧಿ-ಅಂತ್ಯದ ಠೇವಣಿಗಳು (ವರ್ಷದಿಂದ ವರ್ಷಕ್ಕೆ) ಶೇಕಡಾ 15.1 ರಷ್ಟು ಏರಿಕೆಯಾಗಿ 14,26,150 ಕೋಟಿ ರೂ.ಗೆ ತಲುಪಿದ್ದರೆ, ಸರಾಸರಿ ಠೇವಣಿಗಳು ತ್ರೈಮಾಸಿಕದಲ್ಲಿ ಶೇಕಡಾ 17.8 ರಷ್ಟು ಏರಿಕೆಯಾಗಿ 13,78,658 ಕೋಟಿ ರೂ.ಗೆ ತಲುಪಿದೆ. ದೇಶೀಯವಾಗಿ ಒಟ್ಟಾರೆ ಸಾಲ ನೀಡಿಕೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇಕಡಾ 15.9 ರಷ್ಟು ಏರಿಕೆಯಾಗಿ 11,88,587 ಕೋಟಿ ರೂ.ಗೆ ತಲುಪಿದೆ. ಸರಾಸರಿ ಚಾಲ್ತಿ ಖಾತೆಗಳ ಸಂಖ್ಯೆ ಶೇಕಡಾ 13.3 ರಷ್ಟು ಮತ್ತು ಸರಾಸರಿ ಉಳಿತಾಯ ಖಾತೆಗಳ ಸಂಖ್ಯೆ ಶೇಕಡಾ 8.2 ರಷ್ಟು ಹೆಚ್ಚಾಗಿದೆ.
ಮೊದಲ ತ್ರೈಮಾಸಿಕದಲ್ಲಿ 64 ಹೊಸ ಶಾಖೆಗಳ ಸೇರ್ಪಡೆಯೊಂದಿಗೆ, ಬ್ಯಾಂಕ್ 6,587 ಶಾಖೆಗಳು ಮತ್ತು 17,102 ಎಟಿಎಂಗಳು ಮತ್ತು ನಗದು ರಿಸೈಕ್ಲಿಂಗ್ ಯಂತ್ರಗಳ ಜಾಲವನ್ನು ಬ್ಯಾಂಕ್ ಹೊಂದಿದೆ. ತ್ರೈಮಾಸಿಕದಲ್ಲಿ, ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಶೂರೆನ್ಸ್ (ಐಸಿಐಸಿಐ ಲೈಫ್) ನ ವಾರ್ಷಿಕ ಪ್ರೀಮಿಯಂ ಶೇಕಡಾ 34.4 ರಷ್ಟು ಏರಿಕೆಯಾಗಿ 1,963 ಕೋಟಿ ರೂ.ಗೆ ತಲುಪಿದೆ.
ಇದನ್ನೂ ಓದಿ : ಜಮ್ಮು & ಕಾಶ್ಮೀರಕ್ಕೆ 6 ತಿಂಗಳಲ್ಲಿ 1 ಕೋಟಿಗೂ ಅಧಿಕ ಪ್ರವಾಸಿಗರ ಭೇಟಿ - Jammu Kashmir Tourism