ದೇಶದಲ್ಲೇ ಅತಿ ದೊಡ್ಡ ಐಪಿಒಗೆ ವೇದಿಕೆ ಸಜ್ಜಾಗಿದೆ. ದಕ್ಷಿಣ ಕೊರಿಯಾದ ಪ್ರಮುಖ ಕಾರು ತಯಾರಕ ಹ್ಯುಂಡೈನ ಅಂಗಸಂಸ್ಥೆಯಾದ 'ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್' ನ IPO ಇಂದಿನಿಂದ ಪ್ರಾರಂಭವಾಗಿದೆ. ಪ್ರತಿ ಷೇರಿನ ಬೆಲೆ ಶ್ರೇಣಿ ರೂ.1865-1960 ಎಂದು ನಿಗದಿ ಮಾಡಲಾಗಿದೆ.
ಎಲ್ಐಸಿ (ರೂ. 21 ಸಾವಿರ ಕೋಟಿ) ನಂತರ, ಇದುವರೆಗಿನ ಅತಿ ದೊಡ್ಡ ಐಪಿಒ ಇದಾಗಿದೆ. ಹ್ಯುಂಡೈ ಗರಿಷ್ಠ ಬೆಲೆ ಶ್ರೇಣಿಯಲ್ಲಿ ಅಂದರೆ 27,870 ಕೋಟಿ ರೂ.ಗಳನ್ನು ಸಂಗ್ರಹಿಸಲು ನಿರ್ಧರಿಸಿದೆ. ನಾವು ಈ ಸ್ಟೋರಿಯಲ್ಲಿ ಹುಂಡೈ ಮೋಟಾರ್ IPO ಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳೋಣ.
IPO ಆರಂಭ ಮತ್ತು ಕೊನೆ ದಿನದ ವಿವರ: ಹುಂಡೈ ಮೋಟಾರ್ ಇಂಡಿಯಾದ IPO ಚಂದಾದಾರಿಕೆ ಪಡೆಯಲು ಅಕ್ಟೋಬರ್ 15 -17 ರವರೆಗೂ ಅವಕಾಶ ನೀಡಲಾಗಿದೆ. ಆಂಕರ್ ಹೂಡಿಕೆದಾರರಿಗೆ ಅಕ್ಟೋಬರ್ 14 ರಿಂದ IPO ಪ್ರಾರಂಭವಾಗಿದೆ. ಅಕ್ಟೋಬರ್ 18 ರಂದು ಷೇರುಗಳ ಹಂಚಿಕೆ ನಡೆಯಲಿದ್ದು, ಅಕ್ಟೋಬರ್ 21 ರಂದು ಅಲಾಟ್ ಆಗದ ಗ್ರಾಹಕರಿಗೆ ಮರುಪಾವತಿ ಮಾಡಲಾಗುತ್ತದೆ. ಈ ಷೇರುಗಳನ್ನು ಅಕ್ಟೋಬರ್ 22 ರಂದು ಬಿಎಸ್ಇ ಮತ್ತು ಎನ್ಎಸ್ಇಯಲ್ಲಿ ಪಟ್ಟಿ ಮಾಡಲಾಗುತ್ತದೆ.
ಇದನ್ನು ಓದಿ:ವಾರದ ಆರಂಭದಲ್ಲೇ ಏರಿಕೆಯೊಂದಿಗೆ ಶುಭಾರಂಭ ಮಾಡಿದ ಷೇರು ಮಾರುಕಟ್ಟೆ ; ಗಳಿಕೆ ಹಾದಿಯಲ್ಲಿ ನಿಫ್ಟಿ, ಸೆನ್ಸೆಕ್ಸ್
IPO ವಿವರಗಳು: ಹುಂಡೈ ಮೋಟಾರ್ ಇಂಡಿಯಾ ತನ್ನ IPO ಮೂಲಕ $3.3 ಬಿಲಿಯನ್ (ರೂ. 27,870.16 ಕೋಟಿ) ಸಂಗ್ರಹಿಸಲು ಯೋಜಿಸಿದೆ. ಈ IPO ನಲ್ಲಿ, ದಕ್ಷಿಣ ಕೊರಿಯಾದ ಮೂಲದ ಕಂಪನಿಯ 142,194,700 (14.22 ಕೋಟಿ) ಷೇರುಗಳನ್ನು ಅಥವಾ ಒಟ್ಟು ಹಿಡುವಳಿಯ 17.5 ಪ್ರತಿಶತವನ್ನು ಮಾರಾಟಕ್ಕೆ ಕೊಡುಗೆ (OFS) ಮಾರ್ಗದ ಮೂಲಕ ಚಿಲ್ಲರೆ ಮತ್ತು ಇತರ ಹೂಡಿಕೆದಾರರಿಗೆ ಮಾರಾಟ ಮಾಡುತ್ತಿದೆ.
IPO ಬೆಲೆ : ಹ್ಯುಂಡೈ ಮೋಟಾರ್ ಇಂಡಿಯಾ IPO ನಲ್ಲಿ ಪ್ರತಿ ಈಕ್ವಿಟಿ ಷೇರಿನ ಬೆಲೆ ರೂ.1,865 ರಿಂದ ರೂ.1,960 ಎಂದು ನಿಗದಿ ಮಾಡಿದೆ.
ಲಾಟ್ ಸೈಜ್: ಚಿಲ್ಲರೆ ಹೂಡಿಕೆದಾರರು ಕನಿಷ್ಠ ಒಂದು ಲಾಟ್ ಖರೀದಿಸುವ ಅಗತ್ಯವಿದೆ. ಒಂದು ಲಾಟ್ ಗಾತ್ರವು ಏಳು ಷೇರುಗಳನ್ನು ಒಳಗೊಂಡಿರಲಿದೆ. ಅಂದರೆ ಹೂಡಿಕೆದಾರರು ಪ್ರತಿ ಲಾಟ್‌ಗೆ 13,720 ರೂ. ಗರಿಷ್ಠ 14 ಲಾಟ್‌ಗಳನ್ನು ಖರೀದಿಸಬಹುದಾಗಿದೆ.
ಹುಂಡೈ ಉದ್ಯೋಗಿಗಳಿಗೆ ರಿಯಾಯಿತಿ: ಹ್ಯುಂಡೈ ಐಪಿಒ ಭಾಗವಾಗಿ, ಅರ್ಹ ಸಾಂಸ್ಥಿಕ ಹೂಡಿಕೆದಾರರಿಗೆ ಶೇಕಡಾ 50 ರಷ್ಟು ಷೇರುಗಳನ್ನು, ಸಾಂಸ್ಥಿಕವಲ್ಲದ ಹೂಡಿಕೆದಾರರಿಗೆ 15 ಶೇಕಡಾ ಷೇರುಗಳನ್ನು ಮತ್ತು ಉಳಿದ 35 ಶೇಕಡಾ ಷೇರುಗಳನ್ನು ಚಿಲ್ಲರೆ ಹೂಡಿಕೆದಾರರಿಗೆ ಹಂಚಿಕೆ ಮಾಡಲಾಗಿದೆ. ಕಂಪನಿಯು ತನ್ನ ಉದ್ಯೋಗಿಗಳಿಗೆ 7,78,400 ಈಕ್ವಿಟಿ ಷೇರುಗಳನ್ನು ಕಾಯ್ದಿರಿಸಿದೆ. ಪ್ರತಿ ಷೇರಿಗೆ ರೂ.183 ರಿಯಾಯಿತಿಯಲ್ಲಿ ಷೇರುಗಳನ್ನು ನೀಡಲಾಗುತ್ತಿದೆ.
ಗ್ರೇ ಮಾರುಕಟ್ಟೆ ಪ್ರೀಮಿಯಂ: GMP ಪ್ರೀಮಿಯಂ ಅನ್ನು ಪರಿಗಣಿಸಿದರೆ, ಹುಂಡೈ ಮೋಟಾರ್ ಷೇರುಗಳ ಮೌಲ್ಯವು ಹೆಚ್ಚಾಗುವ ಸಾಧ್ಯತೆಯಿದೆ. ಕಂಪನಿಯ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಿ ಹೂಡಿಕೆ ಮಾಡಬಹುದಾಗಿದೆ.
ಇದನ್ನು ಓದಿ:60 ಬಿಲಿಯನ್ ಡಾಲರ್ಗೆ ತಲುಪಲಿದೆ ಭಾರತದ ಆನ್ಲೈನ್ ಗೇಮಿಂಗ್ ಉದ್ಯಮ: ವರದಿ