ನೀವು ವಿಮಾ ಪಾಲಿಸಿಯೊಂದನ್ನು ತೆಗೆದುಕೊಂಡ ನಂತರ, ಅದು ನಿಮ್ಮ ಅಗತ್ಯಗಳಿಗೆ ಸರಿ ಹೊಂದುತ್ತಿಲ್ಲ ಎಂಬುದು ಗೊತ್ತಾದಾಗ ಏನು ಮಾಡುವುದು? ಅದರಲ್ಲಿ ಉಲ್ಲೇಖಿಸಲಾದ ನಿಯಮಗಳು ನಿಮಗೆ ಇಷ್ಟವಾಗದಿದ್ದರೆ ಮಾಡುವುದೇನು? ಇದು ನಿಮ್ಮ ದೀರ್ಘಕಾಲೀನ ಉದ್ದೇಶಗಳ ಸಾಧನೆಗೆ ಪೂರಕವಾಗಿರದಿದ್ದರೆ ಏನು ಮಾಡುವುದು? ಹೀಗಾದಾಗ ಚಿಂತೆ ಮಾಡಬೇಕಿಲ್ಲ. ನೀವು ತೆಗೆದುಕೊಂಡ ಪಾಲಿಸಿಯನ್ನು 30 ದಿನಗಳಲ್ಲಿ ಮರಳಿಸಿ ಅದಕ್ಕೆ ರಿಫಂಡ್ ಕೂಡ ಪಡೆಯಬಹುದು. ಈ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ..
ಪಾಲಿಸಿದಾರರಿಗೆ ಹೆಚ್ಚಿನ ರಕ್ಷಣೆ ನೀಡುವ ಉದ್ದೇಶದಿಂದ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಕಾಲಕಾಲಕ್ಕೆ ನಿಯಮಗಳನ್ನು ಬದಲಾವಣೆ ಮಾಡುತ್ತಿದೆ. ವಿಮಾ ಪಾಲಿಸಿಯ ದಾಖಲೆಗಳನ್ನು ಸ್ವೀಕರಿಸಿದ 30 ದಿನಗಳ ಒಳಗೆ (ಫ್ರೀ-ಲುಕ್ ಅವಧಿ) ಮರುಪಾವತಿ ಅಥವಾ ರದ್ದತಿಯು ಇಂಥ ಹೊಸ ನಿಯಮದಲ್ಲಿ ಒಂದು ಪ್ರಮುಖ ನಿಯಮವಾಗಿದೆ. ಹೊಸ ಪಾಲಿಸಿ ತೆಗೆದುಕೊಂಡ ನಂತರ ಅದನ್ನು ಪರಿಶೀಲಿಸಲು ಪಾಲಿಸಿದಾರರಿಗೆ ನೀಡಲಾದ ಅವಧಿಯನ್ನು ಫ್ರೀ - ಲುಕ್ ಅವಧಿ ಎನ್ನಲಾಗುತ್ತದೆ. ಈ ಸೌಲಭ್ಯವು ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳನ್ನು ಪರಿಶೀಲಿಸಲು ನಿಮಗೆ ಸಹಾಯ ಮಾಡುತ್ತದೆ. ನಿಮಗೆ ಪಾಲಿಸಿ ಇಷ್ಟವಾಗದಿದ್ದರೆ, ನೀವು ಅದನ್ನು ಈ ಅವಧಿಯೊಳಗೆ ಹಿಂದಿರುಗಿಸಬಹುದು ಮತ್ತು ಪ್ರೀಮಿಯಂ ಅನ್ನು ಮರಳಿ ಪಡೆಯಬಹುದು. ಈ ಅವಧಿಯಲ್ಲಿ ನೀವು ಪಾಲಿಸಿಯನ್ನು ರದ್ದುಗೊಳಿಸಿದರೆ, ಕೆಲವು ವೆಚ್ಚ ಹೊರತುಪಡಿಸಿ ಪ್ರೀಮಿಯಂ ಅನ್ನು ನಿಮಗೆ ಮರು ಪಾವತಿಸಲಾಗುತ್ತದೆ.
ಯಾವ ಸಂದರ್ಭಗಳಲ್ಲಿ ಪಾಲಿಸಿ ಹಿಂದಿರುಗಿಸಬಹುದು?: ಫ್ರೀ - ಲುಕ್ ಅವಧಿಯಲ್ಲಿ ಅನೇಕ ಕಾರಣಗಳಿಗಾಗಿ ನೀವು ವಿಮಾ ಪಾಲಿಸಿಯನ್ನು ರದ್ದುಗೊಳಿಸಬಹುದು. ಪಾಲಿಸಿಯನ್ನು ವಿವರಿಸುವಾಗ ನೀಡಲಾದ ಮಾಹಿತಿಗಳಿಗಿಂತ ನೀವು ಅದನ್ನು ಸ್ವೀಕರಿಸಿದಾಗ ಪಾಲಿಸಿ ಡಾಕ್ಯುಮೆಂಟ್ ನಲ್ಲಿ ಉಲ್ಲೇಖಿಸಿರುವ ವಿವರಗಳು ಭಿನ್ನವಾಗಿರಬಹುದು. ವಿಮಾ ಕಂಪನಿಯವರು ನಿಮಗೆ ತಪ್ಪು ಮಾಹಿತಿ ನೀಡಿರಬಹುದು ಮತ್ತು ತಮ್ಮ ನಿಯಮವನ್ನು ನಿಮ್ಮ ಮೇಲೆ ಹೇರಬಹುದು. ಇಂಥ ಸಂದರ್ಭಗಳಲ್ಲಿ ನೀವು ಪಾಲಿಸಿಯನ್ನು ಹಿಂದಿರುಗಿಸಬಹುದು.
ತೆಗೆದುಕೊಂಡ ವಿಮಾ ಪಾಲಿಸಿಯು ನಿಮ್ಮ ಆರ್ಥಿಕ ಸ್ಥಿತಿಗತಿಗೆ ಸೂಕ್ತವಲ್ಲದಿರಬಹುದು. ಉದಾಹರಣೆಗೆ, ಪೂರ್ಣ ರಕ್ಷಣೆಗೆ ಸೀಮಿತವಾಗಿರುವ ಟರ್ಮ್ ಪಾಲಿಸಿಯೊಂದನ್ನು ಪಡೆಯಲು ನೀವು ಬಯಸಿರಬಹುದು. ಆದರೆ, ನೀವು ಎಂಡೋಮೆಂಟ್ ಪಾಲಿಸಿ ಪಡೆದಿರಬಹುದು. ಇದು ಹೆಚ್ಚಿನ ಪ್ರೀಮಿಯಂ ಅನ್ನು ಹೊಂದಿರುತ್ತದೆ. ಈ ಸಂದರ್ಭದಲ್ಲಿ ಪಾಲಿಸಿ ನೀವು ಹಿಂದಿರುಗಿಸಬಹುದು.
ಪಾಲಿಸಿಯ ಕೆಲ ನೀತಿ ನಿಯಮಗಳನ್ನು ತಪ್ಪಾಗಿ ಅರ್ಥೈಸಲಾಗಿರಬಹುದು. ಈ ನಿಯಮಗಳು ಭವಿಷ್ಯದಲ್ಲಿ ನಿಮಗೆ ಸಮಸ್ಯೆಗಳನ್ನು ಉಂಟು ಮಾಡುತ್ತವೆ ಎಂದು ನೀವು ಭಾವಿಸಿದರೆ ನೀವು ಪಾಲಿಸಿಯನ್ನು ರದ್ದುಗೊಳಿಸಬಹುದು. ವಿಮಾದಾರ ಅಥವಾ ಸಲಹೆಗಾರರ ಸೇವೆಗಳಿಂದ ನೀವು ತೃಪ್ತರಾಗದಿದ್ದರೆ, ನಿಗದಿತ ಅವಧಿಯೊಳಗೆ ಪಾಲಿಸಿಯನ್ನು ನೀವು ಹಿಂದಿರುಗಿಸಬಹುದು.
ಏನು ಮಾಡಬೇಕು? : ಪಾಲಿಸಿಯನ್ನು ರದ್ದುಗೊಳಿಸುವ ಮೊದಲು, ಪಾಲಿಸಿ ಡಾಕ್ಯುಮೆಂಟ್ ಅನ್ನು ಸಂಪೂರ್ಣವಾಗಿ ಓದಿ. ವಿಮಾದಾರ ಕಂಪನಿಯು ರಿಫಂಡ್ ಮಾಡಲು ಏನಾದರೂ ಷರತ್ತುಗಳನ್ನು ವಿಧಿಸುತ್ತದೆಯೇ ಎಂಬುದನ್ನು ಮೊದಲು ಪರಿಶೀಲಿಸಿ. ಅದಕ್ಕೆ ಅನುಗುಣವಾಗಿ ನಿಮ್ಮ ನಿರ್ಧಾರವನ್ನು ವಿಮಾ ಕಂಪನಿಗೆ ತಿಳಿಸಿ. ಕೆಲವು ವಿಮಾ ಕಂಪನಿಗಳು ಪಾಲಿಸಿ ರದ್ದತಿಗಾಗಿ ಅರ್ಜಿ ನಮೂನೆಯನ್ನು ಒದಗಿಸುತ್ತವೆ. ಅದನ್ನು ತುಂಬಿ ಕಂಪನಿಗೆ ಸಲ್ಲಿಸಬೇಕಾಗುತ್ತದೆ.
ಈ ಫಾರ್ಮ್ನಲ್ಲಿ ನಿಮ್ಮ ಪಾಲಿಸಿ ಸಂಖ್ಯೆ, ಹೆಸರು, ವಿಳಾಸ, ಪಾಲಿಸಿ ದಾಖಲೆಯನ್ನು ಸ್ವೀಕರಿಸಿದ ದಿನಾಂಕ, ರದ್ದತಿಗೆ ಕಾರಣದಂತಹ ಎಲ್ಲ ಪ್ರಮುಖ ವಿವರಗಳನ್ನು ನಮೂದಿಸಿ. ರದ್ದತಿ ಅರ್ಜಿಯೊಂದಿಗೆ ಪಾಲಿಸಿಯ ಮೂಲ ದಾಖಲೆಯನ್ನು ಲಗತ್ತಿಸಲು ಮರೆಯಬೇಡಿ. ಪಾಲಿಸಿ ರದ್ದತಿಗೆ ಸಂಬಂಧಿಸಿದ ಮಾಹಿತಿಯನ್ನು ವಿಮಾ ಕಂಪನಿ ಸೇವಾ ಕೇಂದ್ರ ಮತ್ತು ಏಜೆಂಟರಿಗೆ ನೀಡಿ. ಈ ಎಲ್ಲ ವಿವರಗಳನ್ನು ಸೂಕ್ತವಾಗಿ ಪರಿಶೀಲನೆ ಮಾಡಿ.
ಕಂಪನಿಯು ಯಾವೆಲ್ಲ ಶುಲ್ಕಗಳನ್ನು ಕಡಿತ ಮಾಡಬಹುದು?: ನಿಮ್ಮ ಪಾಲಿಸಿ ರದ್ದತಿ ಅರ್ಜಿಯನ್ನು ಸ್ವೀಕರಿಸಿದ ನಂತರ ವಿಮಾ ಕಂಪನಿ ಅರ್ಜಿಯನ್ನು ಪರಿಗಣಿಸುತ್ತದೆ. ನಿಯಮಗಳ ಪ್ರಕಾರ, ಕೆಲವು ಶುಲ್ಕಗಳನ್ನು (ವೈದ್ಯಕೀಯ ಪರೀಕ್ಷೆಗಳು, ಸ್ಟ್ಯಾಂಪ್ ಡ್ಯೂಟಿ, ರಿಸ್ಕ್ ಪ್ರೀಮಿಯಂ) ಕಡಿತಗೊಳಿಸಿದ ನಂತರ ಉಳಿದ ಮೊತ್ತವನ್ನು ನಿಮಗೆ ಮರುಪಾವತಿ ಮಾಡಲಾಗುತ್ತದೆ. ಫ್ರೀ - ಲುಕ್ ಅವಧಿಯಲ್ಲಿ ವಿಮಾ ಪಾಲಿಸಿಯನ್ನು ರದ್ದುಗೊಳಿಸುವ ಅವಕಾಶವು ವಿಮಾ ನಿಯಂತ್ರಕದಿಂದ ಪಾಲಿಸಿದಾರರಿಗೆ ನೀಡಲಾಗಿರುವ ಹಕ್ಕಾಗಿದೆ. ನಿಮ್ಮ ವಿಮಾ ಅಗತ್ಯಗಳನ್ನು ಮರುಪರಿಶೀಲಿಸಲು ಮತ್ತು ಪಾಲಿಸಿಯನ್ನು ಆಯ್ಕೆ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ.
ಸೂಚನೆ: ಈಟಿವಿ ಭಾರತ್ ನಲ್ಲಿ ಪ್ರಕಟವಾಗುವ ಜಾಹೀರಾತುಗಳು ವಿಭಿನ್ನ ದೇಶಗಳ ಉದ್ಯಮಗಳು ಮತ್ತು ಸಂಸ್ಥೆಗಳಿಂದ ಬರುತ್ತವೆ. ಕೆಲವು ಜಾಹೀರಾತುಗಳನ್ನು ಓದುಗರ ಆದ್ಯತೆಗಳ ಆಧಾರದ ಮೇಲೆ ಪ್ರಕಟಿಸಲಾಗಿರುತ್ತದೆ. ಯಾವುದೇ ಉತ್ಪನ್ನವನ್ನು ಖರೀದಿಸುವ ಮೊದಲು ಓದುಗರು ಸೂಕ್ತ ಕಾಳಜಿ ವಹಿಸಬೇಕು ಮತ್ತು ಉತ್ಪನ್ನಗಳು ಅಥವಾ ಸೇವೆಗಳ ಬಗ್ಗೆ ಸೂಕ್ತ ವಿಚಾರಣೆಗಳನ್ನು ಮಾಡಬೇಕು. ಅಂತಹ ಉತ್ಪನ್ನಗಳು / ಸೇವೆಗಳ ಗುಣಮಟ್ಟ ಅಥವಾ ದೋಷಗಳಿಗೆ ಈಟಿವಿ ಭಾರತ್ ಜವಾಬ್ದಾರನಾಗಿರುವುದಿಲ್ಲ.
ಇದನ್ನೂ ಓದಿ : ಇಳಿಕೆಯತ್ತ ಷೇರು ಮಾರುಕಟ್ಟೆ: ಸೆನ್ಸೆಕ್ಸ್ 264 ಅಂಕ ಕುಸಿತ, 26,179ಕ್ಕೆ ತಲುಪಿದ ನಿಫ್ಟಿ - STOCK MARKET TODAY