ನವದೆಹಲಿ : ಆರ್ಡರ್ ಮಾಡಿದ ದಿನವೇ ಸರಕುಗಳನ್ನು ಗ್ರಾಹಕರಿಗೆ ತಲುಪಿಸಲು ಇ - ಕಾಮರ್ಸ್ ದೈತ್ಯ ಫ್ಲಿಪ್ಕಾರ್ಟ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ವಿಭಿನ್ನ ಶ್ರೇಣಿಯ ಹಲವಾರು ಸರಕುಗಳನ್ನು ಮೆಟ್ರೊ ಹಾಗೂ ಮೆಟ್ರೊ ಅಲ್ಲದ ನಗರಗಳಲ್ಲಿ ಆರ್ಡರ್ ಮಾಡಿದ ದಿನವೇ ಡೆಲಿವರಿ ಮಾಡಲು ಫ್ಲಿಪ್ಕಾರ್ಟ್ ಯೋಜನೆ ಹಾಕಿಕೊಂಡಿದೆ.
ಮಧ್ಯಾಹ್ನ 1 ಗಂಟೆಯೊಳಗೆ ಸರಕು ಆರ್ಡರ್ ಮಾಡಿದಲ್ಲಿ ಅದು ಅದೇ ದಿನ ಮಧ್ಯರಾತ್ರಿ 12 ಗಂಟೆಯೊಳಗೆ ಗ್ರಾಹಕರಿಗೆ ತಲುಪಲಿದೆ. ಅಹಮದಾಬಾದ್, ಬೆಂಗಳೂರು, ಭುವನೇಶ್ವರ, ಕೊಯಮತ್ತೂರು, ಚೆನ್ನೈ, ದೆಹಲಿ, ಗುವಾಹಟಿ, ಹೈದರಾಬಾದ್, ಇಂದೋರ್, ಜೈಪುರ, ಕೋಲ್ಕತಾ, ಲಖನೌ, ಲುಧಿಯಾನ, ಮುಂಬೈ, ನಾಗ್ಪುರ, ಪುಣೆ, ಪಾಟ್ನಾ, ರಾಯ್ಪುರ, ಸಿಲಿಗುರಿ ಮತ್ತು ವಿಜಯವಾಡ ಸೇರಿದಂತೆ ಇನ್ನಿತರ ನಗರಗಳಲ್ಲಿ ಫ್ಲಿಪ್ಕಾರ್ಟ್ ಈ ಸೌಲಭ್ಯ ಆರಂಭಿಸಲಿದೆ. ಹೊಸ ಯೋಜನೆಯು ಫೆಬ್ರವರಿಯಿಂದ ಆರಂಭವಾಗಲಿದ್ದು, ಅದರ ಮುಂದಿನ ದಿನಗಳಲ್ಲಿ ಇದನ್ನು ದೇಶದ ಮತ್ತಷ್ಟು ನಗರಗಳಿಗೆ ವಿಸ್ತರಿಸಲಾಗುವುದು.
"ಮೆಟ್ರೋ ನಗರಗಳು ಮಾತ್ರವಲ್ಲದೇ ಮೆಟ್ರೋ ಅಲ್ಲದ ನಗರಗಳ ಗ್ರಾಹಕರು ಕೂಡ ಫ್ಲಿಪ್ಕಾರ್ಟ್ನಲ್ಲಿ ಶಾಪಿಂಗ್ ಮಾಡಲು ಇಷ್ಟಪಡುತ್ತಾರೆ ಎಂಬುದನ್ನು ಗಮನಿಸಿ 20 ನಗರಗಳಲ್ಲಿ ಆರ್ಡರ್ ಮಾಡಿದ ದಿನವೇ ಡೆಲಿವರಿ ನೀಡಲು ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ" ಎಂದು ಫ್ಲಿಪ್ಕಾರ್ಟ್ ಗ್ರೂಪ್ನ ಕಸ್ಟಮರ್ ಎಕ್ಸ್ಪೀರಿಯನ್ಸ್ ಮತ್ತು ರೀಕಾಮರ್ಸ್ ವ್ಯವಹಾರದ ಹಿರಿಯ ಉಪಾಧ್ಯಕ್ಷ, ಪೂರೈಕೆ ಸರಪಳಿ ಮುಖ್ಯಸ್ಥ ಹೇಮಂತ್ ಬದ್ರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಂಪನಿಯ ಪ್ರಕಾರ, ಈ ಸೌಲಭ್ಯದಿಂದ ಒಂದೇ ದಿನದಲ್ಲಿ ಮೊಬೈಲ್ ಫೋನ್ಗಳು, ಫ್ಯಾಷನ್, ಸೌಂದರ್ಯ ಉತ್ಪನ್ನಗಳು, ಜೀವನಶೈಲಿ, ಪುಸ್ತಕಗಳು, ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ಸ್ನಂಥ ಉತ್ಪನ್ನಗಳು ಒಂದೇ ದಿನದಲ್ಲಿ ಗ್ರಾಹಕರಿಗೆ ತಲುಪಲಿವೆ.
ಮುಂಚೂಣಿಯಲ್ಲಿ ಫ್ಲಿಪ್ಕಾರ್ಟ್: ವಾಲ್ಮಾರ್ಟ್ ಒಡೆತನದ ಫ್ಲಿಪ್ಕಾರ್ಟ್ ಭಾರತದ ಇ - ಕಾಮರ್ಸ್ ವಿಭಾಗದಲ್ಲಿ ಶೇಕಡಾ 48 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ ಎಂದು ಅಲೈಯನ್ಸ್ ಬರ್ನ್ಸ್ಟೈನ್ ಹೊಸ ವರದಿಯಲ್ಲಿ ತಿಳಿಸಿದೆ. ಸಾಫ್ಟ್ಬ್ಯಾಂಕ್ ಬೆಂಬಲಿತ ಮೀಶೋ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಇ - ಕಾಮರ್ಸ್ ಪ್ಲಾಟ್ಫಾರ್ಮ್ ಆಗಿ ಹೊರಹೊಮ್ಮಿದರೆ, ಫ್ಲಿಪ್ಕಾರ್ಟ್ ಬಳಕೆದಾರರು ವರ್ಷದಿಂದ ವರ್ಷಕ್ಕೆ ಶೇಕಡಾ 21 ರಷ್ಟು ಬೆಳೆದಿದ್ದಾರೆ.
ಮೀಶೋ ಶೇ 32ರಷ್ಟು ಬೆಳವಣಿಗೆ ದಾಖಲಿಸಿದ್ದರೆ, ಅಮೆಜಾನ್ ಶೇ 13ರಷ್ಟು ಬಳಕೆದಾರರ ಪ್ರಮಾಣದಲ್ಲಿ ಬೆಳವಣಿಗೆ ಸಾಧಿಸಿದೆ ಎಂದು ವರದಿ ಹೇಳಿದೆ. ಫ್ಯಾಷನ್ ಇ - ಕಾಮರ್ಸ್ನಲ್ಲಿ ರಿಲಯನ್ಸ್ ಗ್ರೂಪ್ ಒಡೆತನದ ಅಜಿಯೋ ಬಳಕೆದಾರರ ಸಂಖ್ಯೆ ವೇಗವಾಗಿ ವೃದ್ಧಿಯಾಗುತ್ತಿದೆ ಮತ್ತು ಸುಮಾರು ಶೇಕಡಾ 30ರಷ್ಟು ಮಾರುಕಟ್ಟೆ ಪಾಲು ಹೊಂದಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ : 200 ಕೋಟಿ ರೂ. ಬ್ಯಾಂಕ್ ಸಾಲ ವಂಚನೆ: ಹಲವೆಡೆ ಇಡಿ ದಾಳಿ, ಪರಿಶೀಲನೆ