ನವದೆಹಲಿ: ಬೆಂಗಳೂರು ಮೂಲದ ಫ್ಲಿಪ್ಕಾರ್ಟ್ ಸಂಸ್ಥೆಯ ಆಡಳಿತ ಮಂಡಳಿಗೆ ಸಹ ಸಂಸ್ಥಾಪಕ ಬಿನ್ನಿ ಬನ್ಸಾಲ್, ರಾಜೀನಾಮೆ ನೀಡುವ ಮೂಲಕ ಅಧಿಕೃತವಾಗಿ ಹೊರ ನಡೆದಿದ್ದಾರೆ. ಈ ಮೂಲಕ 16 ವರ್ಷಗಳ ನಂಟನ್ನು ಅಂತ್ಯಗೊಳಿಸಿದ್ದಾರೆ. ಸಂಸ್ಥೆಯ ಮತ್ತೊಬ್ಬ ಸಹ ಸಂಸ್ಥಾಪಕನಾಗಿದ್ದ ಸಚಿನ್ ಬನ್ಸಾಲ್ 2018ರಲ್ಲಿಯೇ ತಾವು ಕಟ್ಟಿದ್ದ ಇ - ಕಾಮರ್ಸ್ ಸಂಸ್ಥೆಯ ಆಡಳಿತ ಮಂಡಳಿಯಿಂದ ಹೊರ ನಡೆದಿದ್ದರು. ಫ್ಲಿಪ್ಕಾರ್ಟ್ ತೊರೆದ ಸಚಿನ್ ನವಿ'' ಎಂಬ ಹಣಕಾಸು ಸೇವೆ ಒದಗಿಸುವ ಸಂಸ್ಥೆಯನ್ನು ಸ್ಥಾಪಿಸಿದ್ದರು.
'ಫ್ಲಿಪ್ಕಾರ್ಟ್ ಸಂಸ್ಥೆಯು ಪ್ರಬಲ ನಾಯಕತ್ವದೊಂದಿಗೆ ದೃಢವಾದ ಸ್ಥಾನದಲ್ಲಿದೆ. ಆತ್ಮವಿಶ್ವಾಸದೊಂದಿಗೆ ಅದರ ಮುಂದಿನ ಹಾದಿ ಸ್ಪಷ್ಟವಾಗಿದೆ. ಕಂಪನಿಯು ಸಮರ್ಥರ ಕೈಯಲಿದೆ ಎಂದು ತಿಳಿದು, ಇದೀಗ ನಾನು ಆ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ' ಎಂದು ಬಿನ್ನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆ, ಗ್ರಾಹಕರಿಗಾಗಿ ಅನುಭವ ರೂಪಾಂತರಿಸುವ ಪ್ರಯತ್ನ ಮುಂದುವರೆಸಲಿ ಎಂದು ತಂಡಕ್ಕೆ ಹಾರೈಸುತ್ತೇನೆ. ಉದ್ಯಮಕ್ಕೆ ನನ್ನ ಬಲವಾದ ಬೆಂಬಲ ಇರಲಿದೆ ಎಂದಿದ್ದಾರೆ. ಸಂಸ್ಥೆಯು ಅದ್ಬುತ ಚಿಂತನೆ ಮತ್ತು ಹೆಚ್ಚಿನ ಪರಿಶ್ರಮದ ಫಲವಾಗಿದೆ. ಭಾರತೀಯರ ಶಾಪಿಂಗ್ ಹೇಗೆ ಮಾಡುತ್ತದೆ ಎಂಬುದನ್ನು ಪರಿವರ್ತಿಸಲು ಬದ್ದವಾಗಿರುವ ತಂಡದಿಂದ ನಿರ್ಮಾಣವಾಗಿದೆ ಎಂದು ಫ್ಲಿಪ್ಕಾರ್ಟ್ ಗ್ರೂಪ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆ, ಬಿನ್ನಿ ಅವರ ಮುಂದಿನ ಉದ್ಯಮಕ್ಕೆ ಶುಭ ಹಾರೈಸಿದ್ದು, ಭಾರತದ ಚಿಲ್ಲರೆ ಪರಿಸರ ವ್ಯವಸ್ಥೆಯಲ್ಲಿ ಬಿನ್ನಿ ಅವರ ಆಳವಾದ ಪ್ರಭಾವಕ್ಕೆ ಧನ್ಯವಾದಗಳನ್ನು ತಿಳಿಸಿದೆ. ಈ ತಿಂಗಳ ಆರಂಭದಲ್ಲಿ ಬಿನ್ನಿ, 'ಒಪ್ಪೊಡೋರ್' ಎಂಬ ಹೊಸ ಉದ್ಯಮವನ್ನು ಘೋಷಿಸಿದ್ದಾರೆ. ಇದು ಇಕಾಮರ್ಸ್ ಸಂಸ್ಥೆಗಳ ಕಾರ್ಯಾಚರಣೆಯನ್ನು ಜಾಗತಿಕವಾಗಿ ವಿಸ್ತರಿಸಲು ಸಹಾಯ ಮಾಡಲಾಗಿದೆ. ವರದಿ ಅನುಸಾರ ಒಪ್ಪೊಡೋರ್ ಆರಂಭಿಕವಾಗಿ ಅಮೆರಿಕ, ಕೆನಡಾ, ಮೆಕ್ಸಿಕೊ, ಯುಕೆ, ಜರ್ಮನಿ, ಸಿಂಗಾಪೂರ್, ಜಪಾನ್ ಮತ್ತು ಆಸ್ಟ್ರೇಲಿಯಾದ ಇ ಕಾಮರ್ಸ್ ಕಂಪನಿಗಳನ್ನು ಗುರಿಯಾಗಿಸಿದೆ.
ಕಳೆದ ವರ್ಷ ಬನ್ಸಾಲ್ ಫ್ಲಿಪ್ಕಾರ್ಟ್ನಲ್ಲಿನ ತಮ್ಮ ಉಳಿಕೆ ಷೇರುಗಳನ್ನು ಮಾರಾಟ ಮಾಡಿ 1- 1.5 ಬಿಲಿಯನ್ ಡಾಲರ್ ಗಳಿಸಿದ್ದರು. 2007ರಲ್ಲಿ ಬಿನ್ನಿ ಬನ್ಸಾಲ್ ಮತ್ತು ಸಚಿನ್ ಬನ್ಸಾಲ್ ಬೆಂಗಳೂರಿನಲ್ಲಿ ಫ್ಲಿಪ್ಕಾರ್ಟ್ ಎಂಬ ಇ ಕಾಮರ್ಸ್ ಸಂಸ್ಥೆಯನ್ನು ಪ್ರಾರಂಭಿಸಿದ್ದರು. ಇದನ್ನು 2018ರಲ್ಲಿ ವಾಲ್ಮಾರ್ಟ್ 16 ಬಿಲಿಯನ್ ನೀಡಿ ಖರೀದಿಸಿತು. ಇದರ ಬೆನ್ನಲ್ಲೇ ಸಚಿನ್ ಸಂಸ್ಥೆಗೆ ರಾಜೀನಾಮೆ ನೀಡಿದ್ದರು. (ಐಎಎನ್ಎಸ್)
ಇದನ್ನೂ ಓದಿ: 3 ಟ್ರಿಲಿಯನ್ ಡಾಲರ್ ತಲುಪಿದ ಮೈಕ್ರೋಸಾಫ್ಟ್ ಮಾರುಕಟ್ಟೆ ಮೌಲ್ಯ