ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ (2024-25) ಜುಲೈ 11ರ ವೇಳೆಗೆ ದೇಶದ ನೇರ ತೆರಿಗೆ ಸಂಗ್ರಹವು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 19.5ರಷ್ಟು ಏರಿಕೆಯಾಗಿ 5.74 ಲಕ್ಷ ರೂ.ಗೆ ತಲುಪಿದೆ ಎಂದು ಆದಾಯ ತೆರಿಗೆ ಇಲಾಖೆ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳು ತಿಳಿಸಿವೆ.
ಏಪ್ರಿಲ್ 1 ರಿಂದ ಜುಲೈ 11 ರವರೆಗೆ ನಿವ್ವಳ ಕಾರ್ಪೊರೇಟ್ ತೆರಿಗೆ ಸಂಗ್ರಹವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 12.5 ರಷ್ಟು ಏರಿಕೆಯಾಗಿ 2.1 ಲಕ್ಷ ಕೋಟಿ ರೂ.ಗೆ ತಲುಪಿದ್ದರೆ, ಸೆಕ್ಯುರಿಟೀಸ್ ವಹಿವಾಟು ತೆರಿಗೆ ಸೇರಿದಂತೆ ವೈಯಕ್ತಿಕ ಆದಾಯ ತೆರಿಗೆ ಶೇಕಡಾ 24 ರಷ್ಟು ಏರಿಕೆಯಾಗಿ 3.64 ಲಕ್ಷ ಕೋಟಿ ರೂ.ಗೆ ತಲುಪಿದೆ.
ರಿಫಂಡ್ಗೂ ಮುಂಚಿತವಾಗಿ ಒಟ್ಟು ನೇರ ತೆರಿಗೆ ಸಂಗ್ರಹವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 23.2 ರಷ್ಟು ಏರಿಕೆಯಾಗಿ 6.45 ಲಕ್ಷ ರೂ.ಗೆ ತಲುಪಿದೆ ಎಂದು ಅಂಕಿ ಅಂಶಗಳು ತೋರಿಸಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಏಪ್ರಿಲ್ 1 ರಿಂದ ಜುಲೈ 11 ರ ನಡುವೆ ನೇರ ತೆರಿಗೆ ಮರುಪಾವತಿಯಲ್ಲಿ ಶೇಕಡಾ 64.5 ರಷ್ಟು ಹೆಚ್ಚಳವಾಗಿದ್ದು, ರಿಫಂಡ್ 70,902 ಕೋಟಿ ರೂ. ಗೆ ತಲುಪಿದೆ.
ಜುಲೈ 3 ರಂದು 2024-15 ರ ಪೂರ್ಣ ಬಜೆಟ್ ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗುತ್ತಿದೆ. ನೇರ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿರುವುದು ದೇಶದ ವಿತ್ತೀಯ ಕೊರತೆಯನ್ನು ನಿಯಂತ್ರಿಸಲು ಸಹಾಯಕವಾಗಲಿದೆ.
ಸರ್ಕಾರಕ್ಕೆ ಆರ್ಬಿಐ ಪಾವತಿಸಿದ 2.11 ಲಕ್ಷ ಕೋಟಿ ರೂ.ಗಳ ಭಾರಿ ಮೊತ್ತದ ಲಾಭಾಂಶ ಮತ್ತು ದೃಢವಾದ ನೇರ ತೆರಿಗೆ ಮತ್ತು ಜಿಎಸ್ಟಿ ಸಂಗ್ರಹವು ಬೆಳವಣಿಗೆಯ ಗತಿಯನ್ನು ವೇಗಗೊಳಿಸುವ ಮತ್ತು ಬಡವರಿಗಾಗಿ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವ ನೀತಿಗಳೊಂದಿಗೆ ಮುಂದುವರಿಯಲು ಹಣಕಾಸು ಸಚಿವರಿಗೆ ಅನುಕೂಲ ಮಾಡಿಕೊಡಲಿದೆ.
ವಿತ್ತೀಯ ಕೊರತೆಯು 2020-21ರಲ್ಲಿ ಜಿಡಿಪಿಯ ಶೇಕಡಾ 9 ಕ್ಕಿಂತ ಹೆಚ್ಚಾಗಿತ್ತು. ಇದನ್ನು 2024-25ರ ಗುರಿಯ ಮಟ್ಟವಾದ ಶೇಕಡಾ 5.1 ಕ್ಕೆ ಇಳಿಸಲಾಗಿದೆ. ಇದು ಆರ್ಥಿಕತೆಯ ಮೂಲಭೂತ ಅಂಶಗಳನ್ನು ಬಲಪಡಿಸಿದೆ. ಎಸ್ &ಪಿ ಗ್ಲೋಬಲ್ ರೇಟಿಂಗ್ ಭಾರತದ ಸಾರ್ವಭೌಮ ರೇಟಿಂಗ್ ದೃಷ್ಟಿಕೋನವನ್ನು 'ಸ್ಥಿರ' ದಿಂದ 'ಸಕಾರಾತ್ಮಕ' ಕ್ಕೆ ಏರಿಸಿದೆ. ದೇಶದ ಸುಧಾರಿತ ಹಣಕಾಸು ಮತ್ತು ಬಲವಾದ ಆರ್ಥಿಕ ಬೆಳವಣಿಗೆಯನ್ನು ಅದು ಉಲ್ಲೇಖಿಸಿದೆ.
ಲೋಕಸಭಾ ಚುನಾವಣೆಗೆ ಮುನ್ನ ಮಧ್ಯಂತರ ಬಜೆಟ್ ಮಂಡಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಗ 2024-25 ರ ಪೂರ್ಣ ಬಜೆಟ್ ಮಂಡಿಸಲಿದ್ದಾರೆ. ಮಧ್ಯಮ ವರ್ಗದವರಿಗೆ ಕೊಂಚ ನಿರಾಳತೆ ನೀಡುವ ನಿಟ್ಟಿನಲ್ಲಿ ಸಚಿವೆ ಸೀತಾರಾಮನ್ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಇದರಿಂದ ಗ್ರಾಹಕರ ಕೈಯಲ್ಲಿ ಹೆಚ್ಚು ಹಣ ಉಳಿಯುವಂತಾಗುತ್ತದೆ ಮತ್ತು ಇದು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಬೇಡಿಕೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಇದನ್ನೂ ಓದಿ : ಜೂನ್ನಲ್ಲಿ 16 ಲಕ್ಷ ದ್ವಿಚಕ್ರ ವಾಹನ ಮಾರಾಟ: ಕಾರು ಮಾರಾಟ ಶೇ 11 ರಷ್ಟು ಇಳಿಕೆ - two wheeler sales