ನವದೆಹಲಿ: 2023-24ರ ಆರ್ಥಿಕ ವರ್ಷದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ದ ಅಧೀನದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ನಾಕಾಗಳಲ್ಲಿ ಒಟ್ಟಾರೆ 54,811.13 ಕೋಟಿ ರೂ. ಟೋಲ್ ಶುಲ್ಕ ಸಂಗ್ರಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಸಂಸತ್ತಿಗೆ ಮಾಹಿತಿ ನೀಡಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ರಾಜ್ಯಸಭೆಗೆ ನೀಡಿದ ಉತ್ತರದಲ್ಲಿ, ಟೋಲ್ ಶುಲ್ಕಗಳನ್ನು ಶೇ 2.55ರಷ್ಟು ಹೆಚ್ಚಿಸಿದ್ದರಿಂದ ಈ ಬಾರಿ ಕಳೆದ ವರ್ಷಕ್ಕಿಂತ 1,400 ಕೋಟಿ ರೂ. ಅಧಿಕ ಟೋಲ್ ಶುಲ್ಕ ಸಂಗ್ರವಾಗಿದೆ ಎಂದು ಹೇಳಿದರು.
2023-24ರ ಹಣಕಾಸು ವರ್ಷದಲ್ಲಿ ಎನ್ಎಚ್ಎಐ ಅಧೀನದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ ಪ್ಲಾಜಾಗಳಲ್ಲಿ ಒಟ್ಟು 54,811.13 ಕೋಟಿ ರೂ. ಶುಲ್ಕ ಸಂಗ್ರಹಿಸಲಾಗಿತ್ತು. ಕಳೆದ ಐದು ವರ್ಷಗಳಲ್ಲಿ ಟೋಲ್ ಶುಲ್ಕ ದರಗಳನ್ನು ಐದು ಬಾರಿ ಪರಿಷ್ಕರಿಸಲಾಗಿದೆ ಮತ್ತು 2023-24ರ ಹಣಕಾಸು ವರ್ಷಕ್ಕೆ ಹೋಲಿಸಿದರೆ ಸರಾಸರಿ ಶೇ 2.55ರಷ್ಟು ಶುಲ್ಕ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಕಳೆದ ವರ್ಷದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆಗಾಗಿ 6,523 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಹೆಚ್ಚಿನ ವಾಹನ ದಟ್ಟಣೆ ಇರುವ ರಾಷ್ಟ್ರೀಯ ಹೆದ್ದಾರಿಗಳು ಮತ್ತು ದೆಹಲಿ-ಮೀರತ್ ಎಕ್ಸ್ಪ್ರೆಸ್ ವೇ, ಟ್ರಾನ್ಸ್-ಹರಿಯಾಣ, ಈಸ್ಟರ್ನ್ ಪೆರಿಫೆರಲ್ ಎಕ್ಸ್ಪ್ರೆಸ್ ವೇ ಮುಂತಾದ ರಾಷ್ಟ್ರೀಯ ಎಕ್ಸ್ಪ್ರೆಸ್ವೇ ಗಳಲ್ಲಿ ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆಯನ್ನು (ಎಟಿಎಂ) ಸ್ಥಾಪಿಸಲಾಗಿದೆ ಎಂದು ಗಡ್ಕರಿ ಮಾಹಿತಿ ನೀಡಿದರು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ (ಎಕ್ಸ್ಪ್ರೆಸ್ವೇಗಳು ಸೇರಿದಂತೆ) ಒಟ್ಟು ರಸ್ತೆ ಅಪಘಾತಗಳು ಮತ್ತು ಸಾವುನೋವುಗಳ ಸಂಖ್ಯೆಯ ಬಗ್ಗೆ ಮಾಹಿತಿ ನೀಡಿದ ಸಚಿವರು, 2022ರಲ್ಲಿ ಎಲ್ಲಾ ರಸ್ತೆಗಳಲ್ಲಿ 4,61,312 ಅಪಘಾತಗಳು ಸಂಭವಿಸಿವೆ (ರಾಷ್ಟ್ರೀಯ ಹೆದ್ದಾರಿಗಳಲ್ಲಿ 1,51,997 ಸೇರಿದಂತೆ) ಮತ್ತು ಆ ವರ್ಷದಲ್ಲಿ 1,68,491 ಜನರು (ಎನ್ಎಚ್ಗಳಲ್ಲಿ 61,038 ಸೇರಿದಂತೆ) ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ.
ಜಾಗೃತಿ, ಎಂಜಿನಿಯರಿಂಗ್ (ರಸ್ತೆಗಳು ಮತ್ತು ವಾಹನಗಳು), ಕಾನೂನು ಮತ್ತು ತುರ್ತು ಆರೈಕೆಯ ಆಧಾರದ ಮೇಲೆ ರಸ್ತೆ ಸುರಕ್ಷತೆಯ ಸಮಸ್ಯೆಯನ್ನು ಪರಿಹರಿಸಲು ಬಹುಮುಖಿ ಕಾರ್ಯತಂತ್ರವನ್ನು ರೂಪಿಸಲಾಗಿದೆ. ಹಸಿರು ಹೆದ್ದಾರಿ ನೀತಿ 2015ರ ಪ್ರಕಾರ ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಎನ್ಎಚ್ಎಐ ಇಲ್ಲಿಯವರೆಗೆ 402.28 ಲಕ್ಷ ಸಸ್ಯಗಳನ್ನು ಯಶಸ್ವಿಯಾಗಿ ನೆಟ್ಟಿದೆ ಎಂದು ಸಚಿವರು ಹೇಳಿದರು.