ನವದೆಹಲಿ: ಕಾರ್ಪೊರೇಟ್ ಸಂಸ್ಥೆಗಳು 2024-25ರ ಮೌಲ್ಯಮಾಪನ ವರ್ಷದ (ಅಸೆಸ್ಮೆಂಟ್ ಇಯರ್) ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ಕೊನೆಯ ದಿನಾಂಕವನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ವಿಸ್ತರಿಸಿದೆ ಎಂದು ಹಣಕಾಸು ಸಚಿವಾಲಯ ಶನಿವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 119 ರ ಅಡಿಯಲ್ಲಿ ಹೊರಡಿಸಲಾದ ಹೊಸ ಸಿಬಿಡಿಟಿ ಅಧಿಸೂಚನೆಯ ಪ್ರಕಾರ, ಕಾರ್ಪೊರೇಟ್ ಕಂಪನಿಗಳು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಹೊಸ ಗಡುವನ್ನು ನವೆಂಬರ್ 15, 2024ಕ್ಕೆ ವಿಸ್ತರಿಸಲಾಗಿದೆ. ಈ ಹಿಂದೆ ಅಕ್ಟೋಬರ್ 31 ಕ್ಕೆ ಗಡುವು ನಿಗದಿಪಡಿಸಲಾಗಿತ್ತು. ಈ ಷರತ್ತು ಮೌಲ್ಯಮಾಪನ ವರ್ಷಕ್ಕೆ ಲೆಕ್ಕಪರಿಶೋಧನಾ ವರದಿಗಳನ್ನು ಸಲ್ಲಿಸಬೇಕಾದ ನಿರ್ದಿಷ್ಟ ವರ್ಗದ ತೆರಿಗೆದಾರರಿಗೆ ಅನ್ವಯವಾಗುತ್ತದೆ.
ಲೆಕ್ಕಪರಿಶೋಧನಾ ವರದಿಗಳನ್ನು ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲು ಸಿಬಿಡಿಟಿ ನಿರ್ಧರಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ವರದಿಗಳನ್ನು ಸಲ್ಲಿಸುವ ಗಡುವನ್ನು ಈ ವರ್ಷದ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 7 ಕ್ಕೆ ಮುಂದೂಡಲಾಗಿತ್ತು.
ಸುತ್ತೋಲೆಯ ಪ್ರಕಾರ, ಎಲೆಕ್ಟ್ರಾನಿಕ್ ಮೂಲಕ ಅಗತ್ಯ ವರದಿಗಳನ್ನು ಸಲ್ಲಿಸುವಲ್ಲಿ ತೆರಿಗೆದಾರರು ಮತ್ತು ಇತರ ಮಧ್ಯಸ್ಥಗಾರರು ಸಮಸ್ಯೆಗಳನ್ನು ಎದುರಿಸಿರುವುದು ಕಂಡು ಬಂದ ನಂತರ ಸಿಬಿಡಿಟಿಯು ಲೆಕ್ಕಪರಿಶೋಧನಾ ವರದಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸುವ ನಿರ್ಧಾರ ಕೈಗೊಂಡಿದೆ. ಆದಾಯ ತೆರಿಗೆ ಕಾಯ್ದೆ, 1961 ರ ನಿಬಂಧನೆಗಳ ಅಡಿಯಲ್ಲಿ ಲೆಕ್ಕಪರಿಶೋಧನಾ ವರದಿಗಳನ್ನು ಸಲ್ಲಿಸಬೇಕಾದ ಮೂಲ ಗಡುವಿನೊಳಗೆ ವರದಿ ಸಲ್ಲಿಸಲು ಅನೇಕ ವ್ಯಕ್ತಿಗಳು ಮತ್ತು ಸಂಸ್ಥೆಗಳು ತೊಂದರೆಗಳನ್ನು ಎದುರಿಸುತ್ತಿವೆ.
ಈಗ ದಿನಾಂಕ ವಿಸ್ತರಣೆಯಿಂದಾಗಿ ಈ ತೆರಿಗೆದಾರರಿಗೆ ತಮ್ಮ ಎಲೆಕ್ಟ್ರಾನಿಕ್ ಫೈಲಿಂಗ್ಗಳನ್ನು ಪೂರ್ಣಗೊಳಿಸಲು ಹೆಚ್ಚುವರಿ ಸಮಯ ಸಿಗಲಿದೆ. ಅನಗತ್ಯ ಒತ್ತಡ ಅಥವಾ ದಂಡ ಪಾವತಿಸದೆ ನಿಯಮಾನುಸಾರವಾಗಿ ತೆರಿಗೆ ಫೈಲ್ ಮಾಡಲು ಇದರಿಂದ ಅನುಕೂಲವಾಗಲಿದೆ.
ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಯು ಹಣಕಾಸು ಸಚಿವಾಲಯದ ಆದಾಯ ತೆರಿಗೆ ಇಲಾಖೆಯ ಒಂದು ಭಾಗವಾಗಿದೆ. ಒಂದೆಡೆ, ಸಿಬಿಡಿಟಿ ಭಾರತದಲ್ಲಿ ನೇರ ತೆರಿಗೆಗಳ ನೀತಿ ಮತ್ತು ಯೋಜನೆಗೆ ಅಗತ್ಯವಾದ ಆದಾಯ ತಂದು ಕೊಟ್ಟರೆ. ಮತ್ತೊಂದೆಡೆ ಇದು ಆದಾಯ ತೆರಿಗೆ ಇಲಾಖೆಯ ಮೂಲಕ ನೇರ ತೆರಿಗೆ ಕಾನೂನುಗಳ ಆಡಳಿತದ ಜವಾಬ್ದಾರಿಯನ್ನು ಸಹ ಹೊಂದಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ರ ಕೇಂದ್ರ ಬಜೆಟ್ನಲ್ಲಿ ಘೋಷಿಸಿದಂತೆ ಆದಾಯ ತೆರಿಗೆ ಕಾಯ್ದೆ, 1961 (ಕಾಯ್ದೆ) ಯ ಸಮಗ್ರ ಪರಿಶೀಲನೆಯ ಮೇಲ್ವಿಚಾರಣೆಗಾಗಿ ಸಿಬಿಡಿಟಿ ಆಂತರಿಕ ಸಮಿತಿಯನ್ನು ರಚಿಸಿದೆ.
ಇದನ್ನೂ ಓದಿ : 3ನೇ ದಿನಕ್ಕೆ ಕಾಲಿಟ್ಟ ರೈತರ ರಸ್ತೆತಡೆ: ಅತಿಯಾದರೆ ಯಾವುದೂ ಒಳ್ಳೆಯದಲ್ಲ ಎಂದ ಪಂಜಾಬ್ ಸಿಎಂ