ನವದೆಹಲಿ: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ಮಾರ್ಚ್ 2024 ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ 3,757 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ತ್ರೈಮಾಸಿಕದಲ್ಲಿ ಬ್ಯಾಂಕಿನ ಲಾಭ ಶೇಕಡಾ 18 ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕು 3,175 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.
ಈ ತ್ರೈಮಾಸಿಕದಲ್ಲಿ ಬ್ಯಾಂಕಿನ ಒಟ್ಟು ಆದಾಯವು 34,025 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಕೆನರಾ ಬ್ಯಾಂಕ್ ನಿಯಂತ್ರಕ ಫೈಲಿಂಗ್ ನಲ್ಲಿ ತಿಳಿಸಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಸಂಸ್ಥೆಯ ಒಟ್ಟು ಆದಾಯ 28,807 ಕೋಟಿ ರೂ. ಆಗಿತ್ತು. ಹಾಗೆಯೇ ಈ ತ್ರೈಮಾಸಿಕದಲ್ಲಿ ಬ್ಯಾಂಕಿನ ಬಡ್ಡಿ ಆದಾಯ 28,807 ಕೋಟಿ ರೂ.ಗೆ ಏರಿಕೆಯಾಗಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ 23,910 ಕೋಟಿ ರೂ. ಆಗಿತ್ತು.
ಮುಂಬರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೆ ಒಳಪಟ್ಟು 2023-24ನೇ ಸಾಲಿಗೆ ಷೇರುದಾರರಿಗೆ ತಲಾ 10 ರೂ.ಗಳ ಮುಖಬೆಲೆಯ ಪ್ರತಿ ಷೇರಿಗೆ 16.10 ರೂ.ಗಳ (ಅಂದರೆ 161 ಪ್ರತಿಶತ) ಲಾಭಾಂಶ ನೀಡುವಂತೆ ಬ್ಯಾಂಕಿನ ಆಡಳಿತ ಮಂಡಳಿಯು ಶಿಫಾರಸು ಮಾಡಿದೆ.
ಆಸ್ತಿ ಗುಣಮಟ್ಟದ ದೃಷ್ಟಿಯಿಂದ, ಬ್ಯಾಂಕಿನ ಒಟ್ಟು ಅನುತ್ಪಾದಕ ಆಸ್ತಿಗಳು (ಎನ್ಪಿಎ) ಮಾರ್ಚ್ 31, 2024 ರ ವೇಳೆಗೆ ಒಟ್ಟು ಮುಂಗಡಗಳ ಶೇಕಡಾ 4.23 ಕ್ಕೆ ಇಳಿದಿದೆ. ಇದು ಮಾರ್ಚ್ 2023 ರ ಅಂತ್ಯದ ವೇಳೆಗೆ ಶೇಕಡಾ 5.35 ರಷ್ಟಿತ್ತು. ನಿವ್ವಳ ಎನ್ಪಿಎಗಳು 2024 ರ ಅಂತ್ಯದ ವೇಳೆಗೆ ಶೇಕಡಾ 1.73 ರಿಂದ ಶೇಕಡಾ 1.27 ಕ್ಕೆ ಇಳಿದಿದೆ.
ಇದರ ಪರಿಣಾಮವಾಗಿ ಪಾವತಿಯಾಗದ ಸಾಲಗಳ ಪ್ರಮಾಣವು ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ನಿಗದಿಪಡಿಸಿದ 2,399 ಕೋಟಿ ರೂ.ಗಳಿಂದ 2,280 ಕೋಟಿ ರೂ.ಗೆ ಇಳಿದಿದೆ. ಕೆನರಾ ಬ್ಯಾಂಕ್ ಷೇರುಗಳು ಬುಧವಾರ ಬಿಎಸ್ಇಯಲ್ಲಿ ತಲಾ 593 ರೂ. ದರದಲ್ಲಿ ವಹಿವಾಟು ನಡೆಸುತ್ತಿದ್ದವು.
ಭಾರತದ ಜಿಡಿಪಿ ಬೆಳವಣಿಗೆ ಶೇ 8ಕ್ಕೆ ತಲುಪುವ ಸಾಧ್ಯತೆ: 2023-24ರಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು ಶೇಕಡಾ 8 ಕ್ಕೆ ತಲುಪುವ ಸಾಧ್ಯತೆಯಿದೆ ಎಂದು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ವಿ ಅನಂತ ನಾಗೇಶ್ವರನ್ ಬುಧವಾರ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 2024-25ರಲ್ಲಿ ಶೇಕಡಾ 7 ರಷ್ಟು ಜಿಡಿಪಿ ಬೆಳವಣಿಗೆಯ ದರವನ್ನು ನಿರೀಕ್ಷಿಸುವುದಾಗಿ ಹೇಳಿದರು. ಹಣದುಬ್ಬರವು ನಿಯಂತ್ರಣದಲ್ಲಿರುವ ನಿರೀಕ್ಷೆಯಿದೆ ಮತ್ತು ದೇಶವು ಸ್ಥಿರವಾದ ಹಣದುಬ್ಬರವಲ್ಲದ ಬೆಳವಣಿಗೆಯ ಹಾದಿಯನ್ನು ಅನುಸರಿಸುವ ಸ್ಥಾನದಲ್ಲಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ : ಭಾರತದಲ್ಲಿ 23.4 ಕೋಟಿ ತಲುಪಿದ ಟ್ರೂಕಾಲರ್ ಬಳಕೆದಾರರ ಸಂಖ್ಯೆ: ನಿವ್ವಳ ಆದಾಯ ಶೇ 8ರಷ್ಟು ಹೆಚ್ಚಳ - truecaller