ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿನ ಬಳಿಕ ಬಿಟ್‌ಕಾಯಿನ್ ಮೌಲ್ಯ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಇದೀಗ ಮೊದಲ ಬಾರಿಗೆ ಹೊಸ ದಾಖಲೆಯನ್ನೂ ಸೃಷ್ಟಿಸಿದೆ. ಬಿಟ್ ಕಾಯಿನ್ ಮೌಲ್ಯ ಇದೀಗ 1 ಲಕ್ಷ ಡಾಲರ್ಗೆ ಏರಿಕೆ ಕಂಡಿದೆ. ಈ ಬೆನ್ನಲ್ಲೇ ಮುಂದಿನ ತಿಂಗಳು ಅಧಿಕಾರ ಸ್ವೀಕಾರ ಮಾಡಲಿರುವ ಟ್ರಂಪ್ ಕ್ರಿಪ್ಟೋಕರೆನ್ಸಿ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ. ಅವರು ಚುನಾವಣೆ ಪ್ರಚಾರದ ವೇಳೆ ಕ್ರಿಪ್ಟೋಕರೆನ್ಸಿ ಬಲವರ್ದನೆಯ ಮಾತನಾಡಿದ್ದರು.
ಕ್ರಿಪ್ಟೋಕರೆನ್ಸಿಯು ಆರಂಭಿಕ ಏಷ್ಯನ್ ವ್ಯಾಪಾರದಲ್ಲಿ 102,700 ಡಾಲರ್ ಮುಟ್ಟಿದೆ. ಚುನಾವಣಾ ಪ್ರಚಾರ ವೇಳೆ ಮಾತನಾಡಿದ್ದ ಟ್ರಂಪ್ ಯುನೈಟೆಡ್ ಸ್ಟೇಟ್ಸ್ ಅನ್ನು ಬಿಟ್‌ಕಾಯಿನ್ ಮತ್ತು ಕ್ರಿಪ್ಟೋಕರೆನ್ಸಿ ರಾಜಧಾನಿಯನ್ನಾಗಿ ಮಾಡುವುದಾಗಿ ಘೋಷಿಸಿದ್ದರು. ಅವರ ಈ ಮಾತು ಅಮೆರಿಕನ್ ಅಧ್ಯಕ್ಷೀಯ ಚುನಾವಣೆ ಮೇಲೆ ಭಾರಿ ಪರಿಣಾಮ ಬೀರಿತ್ತು ಎಂದು ಹೇಳಲಾಗುತ್ತಿದೆ.
ಎಸ್ಇಸಿಗೆ ಅಟ್ಕಿನ್ಸ್: ಈ ಮೊದಲು ಬಿಟ್ ಕಾಯಿನ್ 1ಲಕ್ಷ ಡಾಲರ್ಗಿಂತ ಕಡಿಮೆ ಮೌಲ್ಯದಲ್ಲಿ ವ್ಯವಹಾರ ನಡೆಸುತ್ತಿತ್ತು. ಈ ನಡುವೆ ಕ್ರಿಪ್ಟೋ ಪ್ರತಿಪಾದಕ ಪಾಲ್ ಅಟ್ಕಿನ್ಸ್ ಅವರನ್ನು ಸೆಕ್ಯುರಿಟೀಸ್ & ಎಕ್ಸ್ಚೇಂಜ್ ಕಮಿಷನ್ನ ಅಧ್ಯಕ್ಷರನ್ನಾಗಿ ನೇಮಕ ಮಾಡುವ ನಿರ್ಧಾರವನ್ನು ಟ್ರಂಪ್ ಘೋಷಣೆ ಮಾಡಿದ ಬಳಿಕ ಕ್ರಿಫ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ಹೊಸ ಉತ್ಸಾಹ ಕಂಡು ಬಂದಿದೆ. ಪರಿಣಾಮ ಇಂದು ಬಿಟ್ ಕಾಯಿನ್ ಖರೀದಿ ಭರಾಟೆ ಕಂಡು ಬಂದಿದ್ದರಿಂದ ಇದರ ಮೌಲ್ಯ ಲಕ್ಷ ಡಾಲರ್ ಮೀರಿ ಮುಂದುವರೆದಿದೆ.
ಯಾರೀ ಅಟ್ಕಿನ್ಸ್: ಅಟ್ಕಿನ್ಸ್ 2002 ರಿಂದ 2008 ರವರೆಗೆ ಎಸ್ಇಸಿ ಆಯುಕ್ತರಾಗಿದ್ದು, 2009ರಲ್ಲಿ ಪಟೋಮಾಕ್ ಗ್ಲೋಬಲ್ ಪಾರ್ಟ್‌ನರ್ಸ್ ಸಂಸ್ಥೆ ಸ್ಥಾಪಿಸಿದರು. ಇದು ಬ್ಯಾಂಕಿಂಗ್, ಟ್ರೇಡಿಂಗ್ ಮತ್ತು ಕ್ರಿಪ್ಟೋಕರೆನ್ಸಿ ಸಂಸ್ಥೆಯಾಗಿದೆ.
ಅಷ್ಟು ಮಾತ್ರವಲ್ಲದೇ, ಅಟ್ಕಿನ್ಸ್, 2017 ರಿಂದ ಡಿಜಿಟಲ್ ಸ್ವತ್ತುಗಳ ಬಳಕೆ ಉತ್ತೇಜಿಸುವ ಡಿಜಿಟಲ್ ಚೇಂಬರ್ ಆಫ್ ಕಾಮರ್ಸ್‌ನ ಸಹ ಅಧ್ಯಕ್ಷರೂ ಆಗಿ ಕೆಲಸ ಮಾಡಿದ್ದಾರೆ. ಅಟ್ಕಿನ್ಸ್ ಕ್ರಿಪ್ಟೋಕರೆನ್ಸಿಯ ಸಾಮಾನ್ಯ ಜ್ಞಾನದ ನಿಯಮಾವಳಿ ಹೊಂದಿರುವ ನಾಯಕ ಎಂಬುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಅಲ್ಲದೇ ಅವರು ಬಂಡವಾಳ ಮಾರುಕಟ್ಟೆಯ ಸ್ಥಿರತೆ, ನವೀನತೆಗೆ ಬದ್ಧರಾಗಿದ್ದಾರೆ ಎಂದು ಟ್ರಂಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಜಿಟಲ್ ಸ್ವತ್ತುಗಳು ಮತ್ತು ಇತರ ಆವಿಷ್ಕಾರಗಳು ಅಮೆರಿಕವನ್ನು ಹಿಂದೆಂದಿಗಿಂತಲೂ ಉತ್ತಮವಾಗಿಸಲು ನಿರ್ಣಾಯಕವಾಗಿವೆ. 2022ರ ಮಾರುಕಟ್ಟೆಯ ವೈಫಲ್ಯಕ್ಕೆ ಕಾರಣರಾದ ಗ್ಯಾರಿ ಜೆನ್ಸ್ಲರ್ ಅವರ ನೀತಿಯನ್ನು ಬದಲಾಯಿಸಲಾಗುತ್ತದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಟ್ರಂಪ್ ಯೂ ಟರ್ನ್: ಒಮ್ಮೆ ಕ್ರಿಪ್ಟೋಕರೆನ್ಸಿಗಳನ್ನು "ಹಗರಣ" ಎಂದು ಬ್ರಾಂಡ್ ಮಾಡಿದ್ದ ಟ್ರಂಪ್ ಬಳಿಕ ತಮ್ಮ ನಿಲುವನ್ನು ಬದಲಾಯಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಬಿಟ್ ಕಾಯಿನ್ ಪರ ಚುನಾವಣಾ ಪ್ರಚಾರದ ವೇಳೆ ವಕಾಲತ್ತು ಸಹ ವಹಿಸಿದ್ದರು ಎಂಬುದು ಗಮನಾರ್ಹ. ಅಷ್ಟೇ ಅಲ್ಲತಮ್ಮ ಮಕ್ಕಳು ಮತ್ತು ಉದ್ಯಮಿಗಳೊಂದಿಗೆ ವರ್ಲ್ಡ್ ಲಿಬರ್ಟಿ ಫೈನಾನ್ಶಿಯಲ್ ಎಂಬ ಡಿಜಿಟಲ್ ಕರೆನ್ಸಿ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.
ಟ್ರಂಪ್ ಅಮೆರಿಕದ ಪ್ರಸಿದ್ಧ ಉದ್ಯಮಿ ನಂಬರ್ ಒನ್ ಶ್ರೀಮಂತ ಎಲೋನ್ ಮಸ್ಕ್ ಆಪ್ತ ಸ್ನೇಹಿತರಾಗಿದ್ದಾರೆ. ಅಷ್ಟೇ ಅಲ್ಲ ಫೆಡರಲ್ ಗವರ್ನಮೆಂಟ್ ನಲ್ಲಿ ಆಗುತ್ತಿರುವ ಭಾರಿ ವೆಚ್ಚವನ್ನು ಕಡಿಮೆ ಮಾಡಲು ನಿರ್ಧರಿಸಿರುವ ಡೊನಾಲ್ಡ್ ಟ್ರಂಪ್, ಎಲೋನ್ ಮಸ್ಕ್ ಅವರಿಗೆ ಯುಎಸ್ ಸರ್ಕಾರದಲ್ಲಿ ವೆಚ್ಚವನ್ನು ಕಡಿಮೆಗೊಳಿಸುವ ಸಮಿತಿಯನ್ನು ಸ್ಥಾಪಿಸುವ ಜವಾಬ್ದಾರಿಯನ್ನು ವಹಿಸಿದ್ದಾರೆ. ಮಸ್ಕ್ ಈ ಹಿಂದೆ $2 ಟ್ರಿಲಿಯನ್ ವೆಚ್ಚವನ್ನು ಕಡಿತಗೊಳಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಟ್ರಂಪ್ ಮಸ್ಕ್ಗೆ ಅತಿದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ.
ಮತ್ತೊಂದು ಕಡೆ ಟ್ರಂಪ್, ಕ್ರಿಪ್ಟೋ ಉದ್ಯಮದ ಮೇಲಿನ ನಿಬಂಧನೆಗಳನ್ನು ಹಿಂಪಡೆಯುವ ಉದ್ದೇಶ ಇಟ್ಟುಕೊಂಡಿದ್ದು, ಹೂಡಿಕೆದಾರರು ಡಿಜಿಟಲ್ ಕರೆನ್ಸಿ ಮತ್ತು ಸಂಬಂಧಿತ ಸ್ಟಾಕ್‌ಗಳ ಕುರಿತು ಅರ್ಥೈಸಿಕೊಳ್ಳಲು ಮುಂದಾಗಿದ್ದಾರೆ.
ಇದನ್ನೂ ಓದಿ: ದೇಶದ GDPಯಲ್ಲಿ ಕರ್ನಾಟಕವೇ ಫಸ್ಟ್, ಇದಕ್ಕೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ: ಸಿಎಂ