ನ್ಯೂಯಾರ್ಕ್ : ಕ್ರಿಪ್ಟೋಕರೆನ್ಸಿ ಬೆಲೆಗಳು ಮತ್ತು ಷೇರುಗಳ ವಿಚಾರದಲ್ಲಿ ಬಿಟ್ಕಾಯಿನ್ ಮಂಗಳವಾರ ಸಕ್ರಿಯವಾಗಿ ವಹಿವಾಟು ನಡೆಸಿದೆ. ಬಿಟ್ಕಾಯಿನ್ ಮೌಲ್ಯ ನವೆಂಬರ್ 2021 ರ ನಂತರ ಇದೇ ಮೊದಲ ಬಾರಿಗೆ 57,000 ಡಾಲರ್ಗಿಂತ ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ. ಬಿಟ್ ಕಾಯಿನ್ ಮಂಗಳವಾರ ಬೆಳಗ್ಗೆ ಒಂದು ಹಂತದಲ್ಲಿ 57,430 ಡಾಲರ್ ತಲುಪಿದ ನಂತರ 57,000 ಡಾಲರ್ ಗಿಂತ ಮೇಲ್ಮಟ್ಟದಲ್ಲಿಯೇ ವಹಿವಾಟು ನಡೆಸಿತು.
ಇದು 2021 ರ ಅಂತ್ಯದಲ್ಲಿದ್ದ ಮೌಲ್ಯಕ್ಕಿಂತ ಹೆಚ್ಚಾಗಿದೆ. ಕಾಯಿನ್ ಡೆಸ್ಕ್ ಅಂಕಿಅಂಶಗಳ ಪ್ರಕಾರ, ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿಯಾಗಿರುವ ಬಿಟ್ ಕಾಯಿನ್ ಕಳೆದ 24 ಗಂಟೆಗಳಲ್ಲಿ ಸುಮಾರು 11 ಪ್ರತಿಶತದಷ್ಟು ಏರಿಕೆಯಾಗಿದೆ ಎಂದು ಇನ್ವೆಸ್ಟರ್ಸ್ ಬಿಸಿನೆಸ್ ಡೈಲಿ ವರದಿ ಮಾಡಿದೆ.
ಇದಲ್ಲದೆ, ಫೆಬ್ರವರಿ ಮಧ್ಯದ ಬಿಟ್ ಕಾಯಿನ್ನ ಮಾರುಕಟ್ಟೆ ಬಂಡವಾಳವು ಎರಡು ವರ್ಷಗಳಲ್ಲಿ ಮೊದಲ ಬಾರಿಗೆ 1 ಟ್ರಿಲಿಯನ್ ಡಾಲರ್ ದಾಟಿದೆ. ಬಿಟ್ ಕಾಯಿನ್ ಈ ವರ್ಷ ಇಲ್ಲಿಯವರೆಗೆ ಶೇಕಡಾ 34 ರಷ್ಟು ಏರಿಕೆ ಕಂಡಿದೆ. ಜನವರಿ ಆರಂಭದಲ್ಲಿ ಸ್ಪಾಟ್ ಬಿಟ್ ಕಾಯಿನ್ ಇಟಿಎಫ್ ಪ್ರಾರಂಭವಾದ ನಂತರ ಬಿಟ್ ಕಾಯಿನ್ ಮೌಲ್ಯದಲ್ಲಿ ಗಮನಾರ್ಹ ಏರಿಕೆಯಾಗಿದೆ.
ಮಂಗಳವಾರ ಬೆಳಗ್ಗೆವರೆಗಿನ 24 ಗಂಟೆಗಳಲ್ಲಿ ಎಥೆರಿಯಮ್ ಶೇಕಡಾ 6.8 ರಷ್ಟು ಏರಿಕೆಯಾಗಿದ್ದು, ಸುಮಾರು 3,280 ಡಾಲರ್ ಮಟ್ಟದಲ್ಲಿ ವಹಿವಾಟು ನಡೆಸಿದೆ. ಇದು ಏಪ್ರಿಲ್ 2022 ರ ನಂತರದ ಅತ್ಯುತ್ತಮ ಮಟ್ಟವಾಗಿದೆ. ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಇಟಿಎಚ್ 3,289 ಡಾಲರ್ ಗೆ ಏರಿಕೆಯಾಗಿದೆ. ನಂ.2 ಕ್ರಿಪ್ಟೋ ಆಗಿರುವ ಇಟಿಎಚ್ 2024 ರಲ್ಲಿ ಸುಮಾರು 44 ಪ್ರತಿಶತದಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಬಿಟ್ ಕಾಯಿನ್ (ಬಿಟಿಸಿ) ಇದೊಂದು ಕ್ರಿಪ್ಟೋಕರೆನ್ಸಿಯಾಗಿದೆ. ಯಾವುದೇ ಒಬ್ಬ ವ್ಯಕ್ತಿ, ಗುಂಪು ಅಥವಾ ಘಟಕದ ನಿಯಂತ್ರಣದ ಹೊರಗೆ ಹಣವಾಗಿ ಮತ್ತು ಪಾವತಿಯ ರೂಪವಾಗಿ ಬಳಸುವಂತೆ ವಿನ್ಯಾಸಗೊಳಿಸಲಾದ ವರ್ಚುವಲ್ ಕರೆನ್ಸಿ ಇದಾಗಿದೆ. ಇದರಿಂದಾಗಿ ಹಣಕಾಸು ವಹಿವಾಟುಗಳಲ್ಲಿ ಮೂರನೇ ವ್ಯಕ್ತಿಯ ಪಾಲ್ಗೊಳ್ಳುವಿಕೆ ಬೇಕಾಗುವುದಿಲ್ಲ.
ಬಿಟ್ ಕಾಯಿನ್ ಅನ್ನು 2009 ರಲ್ಲಿ ಅನಾಮಧೇಯ ಡೆವಲಪರ್ ಅಥವಾ ಡೆವಲಪರ್ಗಳ ಗುಂಪು ಸತೋಶಿ ನಕಾಮೊಟೊ ಎಂಬ ಹೆಸರನ್ನು ಬಳಸಿಕೊಂಡು ಸಾರ್ವಜನಿಕರಿಗೆ ಪರಿಚಯಿಸಿತು. ಅಂದಿನಿಂದ ಇದು ವಿಶ್ವದ ಅತ್ಯಂತ ಪ್ರಸಿದ್ಧ ಕ್ರಿಪ್ಟೋಕರೆನ್ಸಿಯಾಗಿದೆ. ಇದರ ಜನಪ್ರಿಯತೆಯು ಅನೇಕ ಇತರ ಕ್ರಿಪ್ಟೋಕರೆನ್ಸಿಗಳ ಸೃಷ್ಟಿಗೆ ಸ್ಫೂರ್ತಿ ನೀಡಿದೆ.
ಇದನ್ನೂ ಓದಿ : 4 ಸಾವಿರ ಕೋಟಿ ರೂ. ವೆಚ್ಚದ ವಿನ್ಫಾಸ್ಟ್ ಇವಿ ಘಟಕಕ್ಕೆ ಶಂಕುಸ್ಥಾಪನೆ