ನಾವು ತೆರಿಗೆಗೆ ಒಳಪಡುವ ಆದಾಯದೊಳಗಿದ್ದೇವಾ?. ನಮ್ಮ ಕಂಪನಿ ನಮ್ಮ ಸಂಬಳದಿಂದ TDS ಕಡಿತಗೊಳಿಸುತ್ತಿದೆಯೇ?. ನಾವು ರಿಟರ್ನ್ಸ್ ಸಲ್ಲಿಸಬೇಕೇ/ ಬೇಡವೇ?. ಇದೇ ಮೊದಲ ಬಾರಿಗೆ ಐಟಿ ರಿಟರ್ನ್ಸ್ ಫೈಲ್ ಮಾಡುವವರಿಗೆ ಇಂಥ ಸಂದೇಹಗಳು ಸಹಜ. ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಏಪ್ರಿಲ್ 1, 2023ರಿಂದ ಮಾರ್ಚ್ 31, 2024ರವರೆಗೆ ಗಳಿಸಿದ ಆದಾಯಕ್ಕೆ ನಾವು ಈಗ ರಿಟರ್ನ್ಸ್ ಸಲ್ಲಿಸುತ್ತಿದ್ದೇವೆ ಎಂಬುದನ್ನು ನೆನಪಿಡಿ. ಆದಾಯವೆಂದರೆ ಕೇವಲ ಸಂಬಳವಲ್ಲ. ಬಡ್ಡಿ, ಮನೆ ಬಾಡಿಗೆ ಇತ್ಯಾದಿಗಳಿಂದ ನೀವು ಪಡೆಯುವ ಪ್ರತಿಯೊಂದು ರೂಪಾಯಿಯನ್ನೂ ನಿಮ್ಮ ಆದಾಯದ ಭಾಗವಾಗಿ ತೋರಿಸಬೇಕು. ಒಂದು ವೇಳೆ ಆದಾಯ ಬಂದರೂ ಅದನ್ನು ತೋರಿಸದೇ ಇದ್ದರೆ ಕಾನೂನು ತೊಡಕುಗಳು ಎದುರಾಗುತ್ತವೆ.
ದಾಖಲೆಗಳನ್ನು ಸಂಗ್ರಹಿಸಿ: ಮೊದಲು ತೆರಿಗೆ ಸಲ್ಲಿಸಲು ಬೇಕಾದ ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ. PAN, ಫಾರ್ಮ್-16, ಬ್ಯಾಂಕ್ ಖಾತೆ ವಿವರಗಳು (ಬಡ್ಡಿಗಾಗಿ), ನಿಮ್ಮ ಹೂಡಿಕೆಗಳಿಗೆ ಸಂಬಂಧಿಸಿದ ದಾಖಲೆಗಳು (PPF, NPS), TDS ಪ್ರಮಾಣಪತ್ರ, ಫಾರ್ಮ್-26AS ಸೇರಿದಂತೆ ಇತ್ಯಾದಿಗಳನ್ನು ಒಂದೆಡೆ ಸಂಗ್ರಹಿಸಿಟ್ಟುಕೊಳ್ಳಿ.
ನೋಂದಣಿ: ಹೊಸ ರಿಟರ್ನ್ಸ್ ಫೈಲ್ ಮಾಡುವವರು ಮೊದಲು Income Tax ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಪೋರ್ಟಲ್‌ನಲ್ಲಿ ಕೇಳಲಾದ ವಿವರ ನೀಡಬೇಕು. ಪ್ಯಾನ್, ನಿಮ್ಮ ಹೆಸರು, ವಿಳಾಸ, ಇ-ಮೇಲ್, ಫೋನ್ ಸಂಖ್ಯೆ ಇತ್ಯಾದಿ ಒದಗಿಸಬೇಕು. ಇವುಗಳನ್ನು OTPಗಳೊಂದಿಗೆ ಪರಿಶೀಲಿಸಬೇಕು. ನಂತರ ಪಾಸ್ವರ್ಡ್ ನಮೂದಿಸಿ ಮತ್ತು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ. ಅದರ ನಂತರವೇ ರಿಟರ್ನ್ಸ್ ಸಲ್ಲಿಸಬಹುದು.
ದೃಢೀಕರಿಸಿ: ಫಾರ್ಮ್-16 ನೀವು ಕೆಲಸ ಮಾಡುತ್ತಿರುವ ಕಂಪನಿ ನೀಡುತ್ತದೆ. ಫಾರ್ಮ್-16 ದಾಖಲೆಗಳು ನಮೂನೆ-26ಎಎಸ್ ನೊಂದಿಗೆ ಹೊಂದಾಣಿಕೆಯಾಗಿರಬೇಕು. ನೀವು ನೀಡಿದ ಎಲ್ಲಾ ವಿನಾಯಿತಿ ವಿವರಗಳನ್ನು ನಮೂನೆ-16ರಲ್ಲಿ ದಾಖಲಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಇದರಲ್ಲಿ ನಮೂದಿಸಲಾದ TDS ವಿವರಗಳು ಫಾರ್ಮ್-26AS ನೊಂದಿಗೆ ಹೊಂದಿಕೆಯಾಗಬೇಕು. ಆಗ ಮಾತ್ರ ನೀವು ಯಾವುದೇ ತೊಂದರೆಯಿಲ್ಲದೆ ರಿಟರ್ನ್ಸ್ ಸಲ್ಲಿಸಲು ಸಾಧ್ಯ.
ವಿನಾಯಿತಿಗಳ ಬಗ್ಗೆ ಎಚ್ಚರ: ಆದಾಯ ತೆರಿಗೆ ವಿನಾಯಿತಿಗಳನ್ನು ಪಡೆಯಲು ನಿಮ್ಮ ಹೂಡಿಕೆಯ ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ನಮೂದಿಸಿ. ಸೆಕ್ಷನ್ 80ಸಿ ಅಡಿಯಲ್ಲಿ ಗರಿಷ್ಠ ರೂ.1,50,000 ವಿನಾಯಿತಿ ಲಭ್ಯ. ಎನ್‌ಪಿಎಸ್‌ನಲ್ಲಿ ಠೇವಣಿ ಮಾಡಿದ ಮೊತ್ತವನ್ನು ರೂ.50,000 ವರೆಗೆ ಕ್ಲೈಮ್ ಮಾಡಬಹುದು. ಆರೋಗ್ಯ ವಿಮಾ ಪಾಲಿಸಿಗೆ ಪಾವತಿಸಿದ ಪ್ರೀಮಿಯಂಗೆ ಸೆಕ್ಷನ್ 80D ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ. ಇದಲ್ಲದೇ ಗೃಹ ಸಾಲದ ಮೇಲಿನ ಬಡ್ಡಿಗೆ ರೂ.2 ಲಕ್ಷದವರೆಗೆ ವಿನಾಯಿತಿ ಇದೆ. ಸೆಕ್ಷನ್ 80TTA ಅಡಿಯಲ್ಲಿ ರೂ.10 ಸಾವಿರದವರೆಗಿನ ಉಳಿತಾಯ ಖಾತೆಯಲ್ಲಿ ಗಳಿಸಿದ ಬಡ್ಡಿಗೆ ವಿನಾಯಿತಿ ನೀಡಲಾಗಿದೆ. ಇವೆಲ್ಲವನ್ನೂ ಸರಿಯಾಗಿ ನಮೂದಿಸಬೇಕು. ಆಗ ಮಾತ್ರ ನಿಮ್ಮ ರಿಟರ್ನ್ಸ್ ಸರಿಯಾಗಿ ಸಲ್ಲಿಕೆಯಾಗುತ್ತದೆ.
ಗಡುವಿನ ಬಗ್ಗೆ ಎಚ್ಚರ ವಹಿಸಿ: ಜುಲೈ 31 ಸಾಮಾನ್ಯವಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನ. ಕೆಲವು ಅನಿರೀಕ್ಷಿತ ಸಂದರ್ಭಗಳಲ್ಲಿ, ಸರ್ಕಾರ ಈ ಗಡುವನ್ನು ವಿಸ್ತರಿಸಬಹುದು. ದಂಡದ ಶುಲ್ಕದೊಂದಿಗೆ ಡಿಸೆಂಬರ್ವರೆಗೆ ರಿಟರ್ನ್ಸ್ ಸಲ್ಲಿಸಬಹುದು. ಸಾಧ್ಯವಾದಷ್ಟು ಈ ತಿಂಗಳ ಅಂತ್ಯದೊಳಗೆ ರಿಟರ್ನ್ಸ್ ಸಲ್ಲಿಸುವುದು ಉತ್ತಮ. ತಡವಾಗಿ ಫೈಲಿಂಗ್ ಮಾಡುವುದರಿಂದ ದೀರ್ಘಾವಧಿಯ ಲಾಭ, ನಷ್ಟದ ತಿಳಿದುಕೊಳ್ಳುವ ಅವಕಾಶವನ್ನು ಕಳೆದುಕೊಳ್ಳುತ್ತೀರಿ.
ದಾಖಲೆಗಳು ಜೋಪಾನ: ಫಾರ್ಮ್-16, ಫಾರ್ಮ್-26ಎಎಸ್, ವಾರ್ಷಿಕ ಮಾಹಿತಿ ವರದಿ (ಎಐಎಸ್) ಮತ್ತು ನಿಮ್ಮ ರಿಟರ್ನ್ಸ್ ಸೇರಿ ನೀವು ಸಲ್ಲಿಸಿದ ಎಲ್ಲಾ ದಾಖಲೆಗಳನ್ನು ಜೋಪಾನವಾಗಿ ಕಾಯ್ದಿಟ್ಟುಕೊಳ್ಳಿ. ಡಿಜಿಟಲ್ ರೂಪದಲ್ಲಿದ್ದರೆ ಎಲ್ಲವನ್ನೂ ಒಂದೇ ಸ್ಥಳದಲ್ಲಿ ಶೇಖರಿಸಿ. ಸಾಧ್ಯವಾದಾಗಲೆಲ್ಲಾ ಇವೆಲ್ಲವೂ ನಿಮಗೆ ಲಭ್ಯವಿರಬೇಕು. ಯಾವುದೇ ಸಾಲವನ್ನು ತೆಗೆದುಕೊಳ್ಳುವಾಗ ಕನಿಷ್ಠ ಎರಡರಿಂದ ಮೂರು ವರ್ಷಗಳ ಫಾರ್ಮ್-16 ಫೈಲಿಂಗ್ ಮತ್ತು ರಿಟರ್ನ್ಸ್ ಪುರಾವೆಗಳನ್ನು ಕೇಳಲಾಗುತ್ತದೆ. ಆದ್ದರಿಂದ, ನೀವು ತೆರಿಗೆ ಪಾವತಿಸದಿದ್ದರೂ, ನಿಮ್ಮ ಆದಾಯಕ್ಕೆ ಅನುಗುಣವಾಗಿ ರಿಟರ್ನ್ಸ್ ಸಲ್ಲಿಸುವುದು ಉತ್ತಮ. ರಿಟರ್ನ್ಸ್ ಸಲ್ಲಿಕೆಯನ್ನು ಕೇವಲ ಶಾಸನಬದ್ಧ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಎಂದು ಪರಿಗಣಿಸಬಾರದು. ಇದು ನಿಮ್ಮ ಆರ್ಥಿಕ ಶಿಸ್ತಿಗೆ ಮನ್ನಣೆಯನ್ನೂ ನೀಡುತ್ತದೆ.
ಇದನ್ನೂ ಓದಿ: ಜುಲೈನಲ್ಲಿ ₹7,900 ಕೋಟಿ ಎಫ್ಪಿಐ ಹೂಡಿಕೆ: ₹1.16 ಲಕ್ಷ ಕೋಟಿ ತಲುಪಿದ ಎಫ್ಪಿಐ ಬಂಡವಾಳ - FPI