ನವದೆಹಲಿ: 37.5 ಕೋಟಿ ಏರ್‌ಟೆಲ್ ಗ್ರಾಹಕರ ಖಾಸಗಿ ಮಾಹಿತಿಯನ್ನು ಕದ್ದು ಡಾರ್ಕ್ ವೆಬ್ನಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂಬ ಆರೋಪಗಳನ್ನು ಭಾರ್ತಿ ಏರ್‌ಟೆಲ್ ಅಲ್ಲಗಳೆದಿದೆ. ಡಾರ್ಕ್ ವೆಬ್ನಲ್ಲಿ 37.5 ಕೋಟಿ ಭಾರತೀಯ ಬಳಕೆದಾರರ ಡೇಟಾವನ್ನು ಮಾರಾಟಕ್ಕೆ ಇಡಲಾಗಿದೆ ಎಂಬ ಆರೋಪವು ಪಟ್ಟಭದ್ರ ಹಿತಾಸಕ್ತಿಗಳಿಂದ ಏರ್ಟೆಲ್ನ ಹೆಸರು ಕೆಡಿಸುವ ಹತಾಶ ಪ್ರಯತ್ನದ ಹೊರತಾಗಿ ಬೇರೇನೂ ಅಲ್ಲ ಎಂದು ಕಂಪನಿ ಹೇಳಿದೆ.
37.5 ಕೋಟಿ ಏರ್ ಟೆಲ್ ಬಳಕೆದಾರರ ಫೋನ್ ಸಂಖ್ಯೆ, ಇಮೇಲ್, ವಿಳಾಸ, ಹುಟ್ಟಿದ ದಿನಾಂಕ, ತಂದೆಯ ಹೆಸರು ಮತ್ತು ಆಧಾರ್ ಸಂಖ್ಯೆ ಸೇರಿದಂತೆ ಎಲ್ಲ ಖಾಸಗಿ ವಿವರಗಳು ಡಾರ್ಕ್ ವೆಬ್ನಲ್ಲಿ ಮಾರಾಟಕ್ಕೆ ಲಭ್ಯವಿವೆ ಎಂದು ಹೇಳಲಾಗಿತ್ತು. ಆದರೆ ಈ ಆರೋಪಗಳನ್ನು ದೃಢೀಕರಿಸಲು ಸಾಧ್ಯವಾಗಿಲ್ಲ.
— airtel India (@airtelindia) July 5, 2024
"ಏರ್‌ಟೆಲ್ ಗ್ರಾಹಕರ ಡೇಟಾವನ್ನು ಹ್ಯಾಕ್ ಮಾಡಲಾಗಿದೆ ಎಂಬ ಆರೋಪದ ವರದಿಗಳು ಕೇಳಿ ಬರುತ್ತಿವೆ. ಈ ಬಗ್ಗೆ ನಾವು ಸಮಗ್ರ ತನಿಖೆ ನಡೆಸಿದ್ದೇವೆ ಮತ್ತು ಏರ್‌ಟೆಲ್ ಕಡೆಯಿಂದ ಯಾವುದೇ ಗ್ರಾಹಕರ ಮಾಹಿತಿ ಸೋರಿಕೆಯಾಗಿಲ್ಲ ಎಂಬುದು ನಮಗೆ ಖಚಿತವಾಗಿದೆ" ಎಂದು ಏರ್‌ಟೆಲ್ ವಕ್ತಾರರು ಶುಕ್ರವಾರ ಐಎಎನ್ಎಸ್ಗೆ ತಿಳಿಸಿದರು.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಡಾರ್ಕ್ ವೆಬ್ ಇನ್ಫಾರ್ಮರ್ ಹ್ಯಾಂಡಲ್ ಪ್ರಕಾರ- 'ಕ್ಸೆನ್ಜೆನ್' (xenZen) ಎಂದು ಗುರುತಿಸಲ್ಪಟ್ಟ ಆರೋಪಿಯು ಡಾರ್ಕ್ ವೆಬ್ನ ಬ್ರೀಚ್ ಫೋರಂಸ್ ಎಂಬ ಸಮುದಾಯದಲ್ಲಿ ಏರ್‌ಟೆಲ್ ಬಳಕೆದಾರರ ಡೇಟಾವನ್ನು ಮಾರಾಟ ಮಾಡುವುದಾಗಿ ಹೇಳಿಕೊಂಡಿದ್ದಾನೆ. ಈ ಮಾಹಿತಿಗೆ 50 ಸಾವಿರ ಡಾಲರ್ ಬೆಲೆ ನಿಗದಿಪಡಿಸಲಾಗಿದೆ ಎಂದು ಹೇಳಲಾಗಿದೆ.
ಜಿಯೋ ಮತ್ತು ವೊಡಾಫೋನ್ ಐಡಿಯಾದಂತಹ ಇತರ ಪ್ರಮುಖ ಭಾರತೀಯ ಟೆಲಿಕಾಂ ಕಂಪನಿಗಳ ಚಂದಾದಾರರ ಡೇಟಾಬೇಸ್ಗಳನ್ನು ಕಳವು ಮಾಡಲಾಗಿತ್ತು ಎಂದು ಈ ಹಿಂದೆ ಅನೇಕ ಬಾರಿ ಆರೋಪಿಸಲಾಗಿದೆ. ವೈಯಕ್ತಿಕ ಮಾಹಿತಿಯ ಸೋರಿಕೆಯಿಂದ ಅಂಥ ವ್ಯಕ್ತಿಯ ಐಡೆಂಟಿಟಿ ದುರುಪಯೋಗವಾಗಬಹುದು, ಆತನಿಗೆ ಹಣಕಾಸು ವಂಚನೆಯಾಗಬಹುದು ಅಥವಾ ಅನಗತ್ಯ ಮಾರ್ಕೆಟಿಂಗ್ ಕರೆಗಳು ಬರಲಾರಂಭಿಸುವುದು ಸೇರಿದಂತೆ ಇನ್ನೂ ಹಲವಾರು ವಿನಾಶಕಾರಿ ಪರಿಣಾಮಗಳು ಎದುರಾಗಬಹುದು.
ನೀವು ಏರ್‌ಟೆಲ್ ಬಳಕೆದಾರರಾಗಿರಲಿ ಅಥವಾ ಇಲ್ಲದಿರಲಿ, ಭಾರತೀಯ ಕಂಪನಿಗಳಿಗೆ ಸೇರಿದ ಡೇಟಾ ಈ ಹಿಂದೆ ಸೋರಿಕೆಯಾಗಿದೆ ಅಥವಾ ಹ್ಯಾಕ್ ಮಾಡಲಾಗಿದೆ ಎಂಬುದನ್ನು ಗಮನಿಸುವುದು ಮುಖ್ಯ. ಹೀಗಾಗಿ ನಿಮ್ಮ ಡೇಟಾವನ್ನು ಸುರಕ್ಷಿತವಾಗಿಡಲು ನೀವು ಸೈಬರ್ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ.
ಇದನ್ನೂ ಓದಿ : 5 ವರ್ಷದಲ್ಲಿ ಬೆಂಗಳೂರಿನ ವಸತಿ ಕಟ್ಟಡಗಳ ಬೆಲೆ ಶೇ 57ರಷ್ಟು ಹೆಚ್ಚಳ - Bengaluru Residential Prices