ನವದೆಹಲಿ: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಯೂನಿಯನ್ ಮೇ 21ರಂದು ಕೇಂದ್ರ ಕಾರ್ಮಿಕ ಆಯುಕ್ತರಿಗೆ ಎರಡನೇ ಪತ್ರ ಬರೆದು, ಸದ್ಯ ನಡೆಯುತ್ತಿರುವ ಕಾರ್ಯಾಚರಣೆಯ ಬಿಕ್ಕಟ್ಟಿನ ಕುರಿತು ವಿವರಿಸಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದೆ. ಏರ್ ಇಂಡಿಯಾ ನೌಕರರ ಸಂಘದ ಅಧ್ಯಕ್ಷ ಕೆ.ಕೆ.ವಿಜಯಕುಮಾರ್ ಅವರು ಕೇಂದ್ರ ಕಾರ್ಮಿಕ ಆಯುಕ್ತ ಓಂಕಾರ್ ಶರ್ಮಾ ಅವರಿಗೆ ಪತ್ರ ಬರೆದಿದ್ದಾರೆ.
ಈ ಪತ್ರದಲ್ಲಿ, 'ಎಲ್ಲಾ ಕ್ಯಾಬಿನ್ ಸಿಬ್ಬಂದಿ ಮೇ 10, 2024ರೊಳಗೆ ಕರ್ತವ್ಯಕ್ಕೆ ಹಿಂತಿರುಗಿದ್ದಾರೆ. ಆದಾಗ್ಯೂ, ಸಿಬ್ಬಂದಿಯ ವಿಳಂಬವನ್ನು ಉಲ್ಲೇಖಿಸಿ ಇನ್ನೂ ಅನೇಕ ವಿಮಾನಗಳನ್ನು ರದ್ದುಗೊಳಿಸಲಾಗುತ್ತಿದೆ. ಈ ಬೆಳವಣಿಗೆ ಆಘಾತಕಾರಿ ಮತ್ತು ಅಚ್ಚರಿ ಉಂಟುಮಾಡುತ್ತಿದೆ. ಹೆಚ್ಚುವರಿ 100ಕ್ಕೂ ಹೆಚ್ಚು ಕ್ಯಾಬಿನ್ ಸಿಬ್ಬಂದಿ ಕಳೆದ ಎರಡು ತಿಂಗಳಿಂದ ವಿಮಾನ ನಿಲ್ದಾಣದ ಪ್ರವೇಶ ಪಾಸ್‌ಗಳು ಸಿಗದೆ ಸುಮ್ಮನೆ ಕುಳಿತಿದ್ದಾರೆ. ಕ್ಯಾಬಿನ್ ಸಿಬ್ಬಂದಿಯು ಸಾರ್ವಜನಿಕ ಅನುಕೂಲಕ್ಕಾಗಿ ಸಮಯಕ್ಕೆ ಸರಿಯಾಗಿ ವಿಮಾನಗಳನ್ನು ಪುನಃಸ್ಥಾಪಿಸಲು ಮತ್ತು ನಿರ್ವಹಿಸಲು ಪ್ರಯತ್ನಿಸುತ್ತಿದ್ದಾರೆ' ಎಂದು ತಿಳಿಸಿದ್ದಾರೆ.
ಸಂಸ್ಥೆಯ ಸಿಬ್ಬಂದಿಯೊಬ್ಬರು ಮಾತನಾಡಿ, "ನಾವು ಮಾರ್ಚ್ 9ರಂದು ಪ್ರತಿಭಟನೆ ಹಿಂತೆಗೆದುಕೊಂಡಿದ್ದೇವೆ. ಕರ್ತವ್ಯಕ್ಕೆ ಸೇರಿದ ಕೂಡಲೇ ಏರ್‌ಲೈನ್ ರೋಸ್ಟರಿಂಗ್ ಸಿಸ್ಟಮ್‌ಗಾಗಿ ಹೊಸ ಅಪ್ಲಿಕೇಶನ್ ಬಂದಿದೆ. ಈಗ ನಾವು ಅದನ್ನು ಬಳಸುತ್ತಿದ್ದೇವೆ. ಹೊಸ ಅಪ್ಲಿಕೇಶನ್ ಅನ್ನು CEA ಅಪ್ಲಿಕೇಶನ್ ಎಂದು ಕರೆಯಲಾಗುತ್ತದೆ. ಆದರೆ ಹಿಂದಿನ ಅಪ್ಲಿಕೇಶನ್‌ನಲ್ಲಿದ್ದ ಎಲ್ಲಾ ಡೇಟಾವನ್ನು ವಿಮಾನಯಾನ ಸಂಸ್ಥೆ ಕಳೆದುಕೊಂಡಿದ್ದು ಸಮಸ್ಯೆಯಾಗಿದೆ" ಎಂದರು.
"ಸಾಮಾನ್ಯವಾಗಿ ಸಿಬ್ಬಂದಿಗೆ ಏರ್‌ಲೈನ್ ಸಂಸ್ಥೆ ವ್ಯವಸ್ಥೆ ಮಾಡಬೇಕಾದ ಏರ್‌ಪೋರ್ಟ್ ಪ್ರವೇಶ ಪಾಸ್ ಕೂಡ ಲಭ್ಯವಿಲ್ಲ. ಇಂತಹ ಘಟನೆಗಳು ರದ್ದತಿ ಮತ್ತು ವಿಳಂಬಗಳಿಗೆ ಕಾರಣವಾಗುತ್ತಿವೆ. ನನಗೆ ತಿಳಿದಿರುವಂತೆ ಈ ಕಾರಣದಿಂದಾಗಿ ಮೇ 10-20ರವರೆಗೆ ಸುಮಾರು 350ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ'' ಎಂದು ಮತ್ತೊಬ್ಬ ಸಿಬ್ಬಂದಿ ತಿಳಿಸಿದರು.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, "ಸಿಬ್ಬಂದಿ ರದ್ದತಿಯಿಂದ ಪ್ರಯಾಣಿಕರಿಗೆ ಯಾವುದೇ ಅನಾನುಕೂಲತೆ ಇಲ್ಲ. ಏಕೆಂದರೆ ಅವರಿಗೆ ಮುಂಚಿತವಾಗಿಯೇ ತಿಳಿಸಲಾಗುತ್ತಿದೆ. ಮೇಲಾಗಿ ದೇಶೀಯ ಮಾರ್ಗಗಳಲ್ಲಿ ಈ ಸಮಸ್ಯೆ ಉಂಟಾಗಿದೆ" ಎಂದು ಹೇಳಿದರು.
ಇದನ್ನೂ ಓದಿ: ಏರ್ ಇಂಡಿಯಾ ವಿರುದ್ಧ ಪ್ರತಿಭಟನೆಗೆ ಮುಂದಾದ ವಿಧವೆ ಕುಟುಂಬ; ಕಾರಣ ಇದು - AIR INDIA EXPRESS