ಅಹಮದಾಬಾದ್: ಅದಾನಿ ಪೋರ್ಟ್ಸ್ ಅಂಡ್ ಸ್ಪೆಶಲ್ ಎಕನಾಮಿಕ್ ಜೋನ್ ಲಿಮಿಟೆಡ್ (ಎಪಿಎಸ್ಇಝಡ್) 2024ರ ಹಣಕಾಸು ವರ್ಷದಲ್ಲಿ (ಅಂತರರಾಷ್ಟ್ರೀಯ ಬಂದರುಗಳು ಸೇರಿದಂತೆ) ದಾಖಲೆಯ 420 ಎಂಎಂಟಿ (ಮಿಲಿಯನ್ ಮೆಟ್ರಿಕ್ ಟನ್) ಯಷ್ಟು ಸರಕುಗಳನ್ನು ನಿರ್ವಹಿಸಿದೆ. ಇದು ವರ್ಷದಿಂದ ವರ್ಷಕ್ಕೆ ಶೇಕಡಾ 24 ರಷ್ಟು ಬೆಳವಣಿಗೆಯಾಗಿದೆ. ಇದರಲ್ಲಿ ದೇಶೀಯ ಬಂದರುಗಳು 408 ಎಂಎಂಟಿ ಸರಕುಗಳನ್ನು ನಿರ್ವಹಿಸಿವೆ.
ಕಂಪನಿಯು ಮಾರ್ಚ್ ತಿಂಗಳೊಂದರಲ್ಲೇ 38 ಎಂಎಂಟಿಗಿಂತ ಹೆಚ್ಚಿನ ಮಾಸಿಕ ಸರಕು ಪ್ರಮಾಣವನ್ನು (ಅಂತರರಾಷ್ಟ್ರೀಯ ಬಂದರುಗಳನ್ನು ಒಳಗೊಂಡಂತೆ) ನಿರ್ವಹಿಸಿದೆ.
"ಕಂಪನಿಯು ಮೊದಲ 100 ಎಂಎಂಟಿ ವಾರ್ಷಿಕ ಸರಕು ಸಾಗಣೆಯನ್ನು ಸಾಧಿಸಲು 14 ವರ್ಷಗಳನ್ನು ತೆಗೆದುಕೊಂಡರೆ, ಎರಡನೇ ಮತ್ತು ಮೂರನೇ 100 ಎಂಎಂಟಿಯಷ್ಟು ಸರಕು ಸಾಗಣೆಗಳನ್ನು ಕ್ರಮವಾಗಿ 5 ವರ್ಷ ಮತ್ತು 3 ವರ್ಷಗಳಲ್ಲಿ ಸಾಧಿಸಲಾಗಿದೆ" ಎಂದು ಎಪಿಎಸ್ಇಝಡ್ ವ್ಯವಸ್ಥಾಪಕ ನಿರ್ದೇಶಕ ಕರಣ್ ಅದಾನಿ ಹೇಳಿದರು. ಹಣಕಾಸು ವರ್ಷ 2024 ರಲ್ಲಿ ಅಖಿಲ ಭಾರತ ಸರಕು ಪ್ರಮಾಣಗಳಲ್ಲಿ ನಾಲ್ಕನೇ ಒಂದು ಭಾಗವನ್ನು ಎಪಿ ಎಸ್ಇಝಡ್ ಬಂದರುಗಳ ಮೂಲಕ ಸಾಗಿಸಲಾಗಿದೆ.
ಇನ್ನು ಪ್ರಮುಖ ಬಂದರಾಗಿರುವ ಮುಂದ್ರಾ ಬಂದರು ಒಂದೇ ತಿಂಗಳಲ್ಲಿ (ಅಕ್ಟೋಬರ್ 2023) 16 ಎಂಎಂಟಿ ಸರಕುಗಳನ್ನು ನಿರ್ವಹಿಸಿದ ಭಾರತದ ಮೊದಲ ಬಂದರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೆಂಪು ಸಮುದ್ರದ ಬಿಕ್ಕಟ್ಟಿನಿಂದ ಉಂಟಾದ ಜಾಗತಿಕ ವ್ಯಾಪಾರ ಅಡೆತಡೆಗಳು, ರಷ್ಯಾ-ಉಕ್ರೇನ್ ಸಂಘರ್ಷ ಮತ್ತು ಪನಾಮ ಕಾಲುವೆಯಲ್ಲಿನ ಸಮಸ್ಯೆಗಳು ಮತ್ತು ಬಿಪರ್ ಜೋಯ್ ಚಂಡಮಾರುತ ಮತ್ತು ಮಿಚಾಂಗ್ ಚಂಡಮಾರುತದಿಂದಾಗಿ ಕಾರ್ಯಾಚರಣೆಗಳಿಗೆ ಅಡ್ಡಿಯಂತಹ ಅನೇಕ ಸವಾಲುಗಳ ಹೊರತಾಗಿಯೂ ಅದಾನಿ ಪೋರ್ಟ್ ಈ ಸಾಧನೆ ಮಾಡಿದೆ. ಕಂಪನಿಯ ಕಂಟೇನರ್ ಪರಿಮಾಣವು ಕಳೆದ ಐದು ವರ್ಷಗಳಲ್ಲಿ ಭಾರತದ ಕಂಟೇನರ್ ಬೆಳವಣಿಗೆಯ ಎರಡು ಪಟ್ಟು ಹೆಚ್ಚಾಗಿದೆ.
ಕಂಟೇನರ್ ವಿಭಾಗದಲ್ಲಿ ಮುಂದ್ರಾ, ಹಜೀರಾ, ಕಟ್ಟುಪಲ್ಲಿ ಮತ್ತು ಎನ್ನೋರ್ ಬಂದರುಗಳು ದಾಖಲೆ ಪ್ರಮಾಣದ ಸರಕು ಸಾಗಿಸಿವೆ. ಭಾರತದಲ್ಲಿ ಕಂಟೇನರೈಸ್ಡ್ ಸಮುದ್ರಮಾರ್ಗದ ಸರಕುಗಳಲ್ಲಿ ಸುಮಾರು 44 ಪ್ರತಿಶತದಷ್ಟು ಎಪಿಎಸ್ಇಝಡ್ ಬಂದರುಗಳ ಮೂಲಕ ಸಾಗುತ್ತದೆ ಎಂದು ಕಂಪನಿ ತಿಳಿಸಿದೆ. ಡ್ರೈ ಕಾರ್ಗೋ ವಿಭಾಗದಲ್ಲಿ ಟ್ಯೂನಾ, ಮರ್ಮುಗಾವೊ, ಕಾರೈಕಲ್, ಕೃಷ್ಣಪಟ್ಟಣಂ, ಗಂಗಾವರಂ ಮತ್ತು ಧಮ್ರಾದಂತಹ ಬಂದರುಗಳು ಈ ಹಣಕಾಸು ವರ್ಷದಲ್ಲಿ ದಾಖಲೆಯ ಪ್ರಮಾಣದ ಸರಕು ನಿರ್ವಹಿಸಿವೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ : 2028ಕ್ಕೆ ತಯಾರಾಗಲಿದೆ $100 ಬಿಲಿಯನ್ ವೆಚ್ಚದ Stargate AI Super Computer