ಅಕ್ಟೋಬರ್ 2019ರಲ್ಲಿ ನಡೆದ 41ನೇ ಡಿಆರ್‌ಡಿಒ ಸಮ್ಮೇಳನ ಉದ್ದೇಶಿಸಿ, ಆಗಿನ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮಾತನಾಡಿದ್ದರು 'ಭಾರತವು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಅತಿದೊಡ್ಡ ಆಮದುದಾರರಲ್ಲಿ ಒಂದಾಗಿದೆ ಎಂದು ಅವತ್ತು ಅವರು ಹೇಳಿದ್ದರು.
70 ವರ್ಷಗಳ ಸ್ವಾತಂತ್ರ್ಯದ ನಂತರವೂ ಭಾರತ ಅತಿ ದೊಡ್ಡ ಆಮದುದಾರ ರಾಷ್ಟ್ರ ಎಂಬುದು ದೇಶಕ್ಕೆ ಹೆಮ್ಮೆಯ ವಿಚಾರವೇನೂ ಆಗಿರಲಿಲ್ಲ. ಆದರೆ ಮುಂಬರುವ ಯುದ್ಧಗಳನ್ನು ನಾವು ಸ್ವದೇಶಿ ಶಸ್ತ್ರಾಸ್ತ್ರ ವ್ಯವಸ್ಥೆಗಳೊಂದಿಗೆ ಹೋರಾಡುತ್ತೇವೆ ಮತ್ತು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದು ಅವರು ಅಂದು ಹೇಳಿದ್ದರು.
ಇದಾದ ಐದು ವರ್ಷಗಳ ಬಳಿಕ ಅಂದರೆ ಕಳೆದ ವಾರ ಪ್ರಸ್ತುತ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, 2025 ರ ವೇಳೆಗೆ 230 ಒಪ್ಪಂದಗಳನ್ನು ಪೂರೈಸಲು 2.5 ಲಕ್ಷ ಕೋಟಿ ವೆಚ್ಚದೊಂದಿಗೆ 340 ಸ್ಥಳೀಯ ರಕ್ಷಣಾ ಉದ್ಯಮಗಳೊಂದಿಗೆ ಸೈನ್ಯವು ಕೆಲಸ ಮಾಡುತ್ತಿದೆ ಎಂಬ ಹೇಳಿಕೆ ನೀಡಿದ್ದಾರೆ. ಭಾರತೀಯ ನೌಕಾಪಡೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ತನ್ನ ಹಿರಿಯ ಕಮಾಂಡರ್‌ಗಳ ಸಮ್ಮೇಳನದ ಮೊದಲು ಹೇಳಿಕೆಯೊಂದನ್ನು ನೀಡಿತ್ತು. 2047ರ ವೇಳೆಗೆ 'ಆತ್ಮನಿರ್ಭರತೆ ಸಾಧಿಸುವ ಗುರಿಯೊಂದಿಗೆ 'ಮೇಕ್ ಇನ್ ಇಂಡಿಯಾ' ಮೂಲಕ ಸ್ವದೇಶೀಕರಣ ಹೆಚ್ಚಿಸಲು ವಿವರವಾದ ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು ಎಂದು ಹೇಳಿತ್ತು. ಪ್ರಸ್ತುತ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಹರಿ ಕುಮಾರ್ ಅವರು ಮಾತನಾಡಿ, '2047 ರ ವೇಳೆಗೆ ನಾವು ಆತ್ಮನಿರ್ಭರ್ ಆಗುತ್ತೇವೆ ಎಂದು ನಮ್ಮ ರಾಷ್ಟ್ರೀಯ ನಾಯಕತ್ವಕ್ಕೆ ನಾವು ಅಭಯ ನೀಡುತ್ತೇವೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಹೇಳಿದ್ದರು.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಇಂಡಿಯನ್ ಏರೋಸ್ಪೇಸ್ ಮತ್ತು ಡಿಫೆನ್ಸ್‌ಗೆ ನೀಡಿದ ಸಂದರ್ಶನದಲ್ಲಿ, ವಾಯು ಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ, 'ಐಎಎಫ್ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ರಕ್ಷಣೆಯಲ್ಲಿ ನಾವೀನ್ಯತೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯನ್ನು ಉತ್ತೇಜಿಸುವ ಪರಿಸರ ವ್ಯವಸ್ಥೆಯನ್ನು ನಾವು ಬಲಪಡಿಸುವ ಗುರಿ ಹೊಂದಿದ್ದೇವೆ ಎಂದಿದ್ದರು.
ದೇಶೀಯ ರಕ್ಷಣಾ ಉದ್ಯಮವನ್ನು ಬೆಂಬಲಿಸುವ ಅಗತ್ಯವನ್ನು ಸಶಸ್ತ್ರ ಪಡೆಗಳು ಅರಿತುಕೊಂಡಿವೆ. ದೇಶದ ರಕ್ಷಣೆಗೆ ಆಮದುಗಳನ್ನು ಅವಲಂಬಿಸಿ ಹೊರಗುತ್ತಿಗೆ ನೀಡುತ್ತಿರುವುದು ದೇಶದ ರಕ್ಷಣಾ ವ್ಯವಸ್ಥೆಗೆ ಸರಿಹೊಂದುವುದಿಲ್ಲ. ಉಕ್ರೇನ್ ಸಂಘರ್ಷದಲ್ಲಿ ಕಲಿತ ಪಾಠಗಳ ಕುರಿತು ಮಾತನಾಡಿರುವ ಸಿಡಿಎಸ್ ಜನರಲ್ ಅನಿಲ್ ಚೌಹಾಣ್, 'ನಾವು ಹೊರಗಿನಿಂದ ಆಮದಾಗುವ ಶಸ್ತ್ರಾಸ್ತ್ರಗಳ ಪೂರೈಕೆಯ ಮೇಲೆ ಅವಲಂಬಿತರಾಗಲು ಸಾಧ್ಯವಿಲ್ಲ. ಸಂಘರ್ಷದ ಸಮಯದಲ್ಲಿ ನಾವು ಕಲಿಯುವ ದೊಡ್ಡ ಪಾಠ ಅದು. ಇತ್ತೀಚಿನ ಎಲ್ಲ ಘರ್ಷಣೆಗಳು ನಮಗೆ ಪ್ರಮುಖ ಪಾಠವಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.
ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಅಗತ್ಯ: ಒಂದು ರಾಷ್ಟ್ರವು ತನ್ನ ನಿರ್ದಿಷ್ಟ ಭೂಪ್ರದೇಶ ಮತ್ತು ಕಾರ್ಯಾಚರಣೆ ಅವಶ್ಯಕತೆಗಳಿಗಾಗಿ ವಿನ್ಯಾಸಗೊಳಿಸಲಾದ ಶಸ್ತ್ರಾಸ್ತ್ರಗಳೊಂದಿಗೆ ರಕ್ಷಣೆಯಲ್ಲಿ ಸ್ವಾವಲಂಬಿಯಾಗಿರಬೇಕು. ಉಕ್ರೇನ್ ತನ್ನ ರಕ್ಷಣಾ ಅಗತ್ಯಗಳಿಗಾಗಿ ಪಶ್ಚಿಮದ ಮೇಲೆ ಅವಲಂಬಿತವಾಗಿದೆ ಮತ್ತು ಪೂರೈಕೆಯಲ್ಲಿನ ಕೊರತೆಯು ಯುದ್ಧಭೂಮಿಯಲ್ಲಿ ಅದರ ಇತ್ತೀಚಿನ ಹಿನ್ನಡೆಗಳಿಗೆ ಕಾರಣವಾಗಿದೆ. ಉಕ್ರೇನ್‌ಗೆ ಪಶ್ಚಿಮದಿಂದ ಒದಗಿಸಲಾದ ಶಸ್ತ್ರಾಸ್ತ್ರಗಳನ್ನು ಬೇರೆ ಬೇರೆ ಸನ್ನಿವೇಶದಲ್ಲಿ ಕಾರ್ಯಾಚರಣೆ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಪ್ರಸ್ತುತ ಯುದ್ಧದ ಮೇಲೆ ಪರಿಣಾಮ ಬೀರುತ್ತದೆ. ಅಮೆರಿಕದ ಅಬ್ರಾಮ್ಸ್ ಟ್ಯಾಂಕ್‌ಗಳು ಹೆಚ್ಚು ಯಶಸ್ವಿಯಾಗದ ಕಾರಣ, ಅಮೆರಿಕ ಕಾಂಗ್ರೆಸ್, ತಾತ್ಕಾಲಿಕವಾಗಿ ಆ ಟ್ಯಾಪ್ ಅನ್ನು ಮುಚ್ಚುವ ಮೂಲಕ ಉಕ್ರೇನ್ ಅನ್ನು ಮತ್ತಷ್ಟು ಬಿಕ್ಕಟ್ಟಿಗೆ ತಳ್ಳಿತು. ಯುರೋಪ್ ಸಹ ಕೀವ್ನ ಬೇಡಿಕೆಗಳನ್ನು ಪೂರೈಸಲು ಸಾಧ್ಯವಿಲ್ಲ. ಇದು ರಷ್ಯಾಕ್ಕೆ ಪ್ರಯೋಜನವನ್ನು ನೀಡುತ್ತಿದೆ. ರಷ್ಯಾ ಯುದ್ದೋಪಕರಣಗಳನ್ನು ತಯಾರಿಸುವಲ್ಲಿ ಸಬಲವಾಗಿದೆ ಮತ್ತು ಸ್ವಾವಲಂಬಿಯಾಗಿದೆ. ಆದರೆ ಇದು ಉಕ್ರೇನ್‌ಗೆ ವ್ಯತಿರಿಕ್ತವಾಗಿದೆ.
ಪಾಕಿಸ್ತಾನದ F 16 ವಿಮಾನಗಳನ್ನು ಅಮೆರಿಕ ದಿನದ ಇಪ್ಪತ್ನಾಲ್ಕು ಗಂಟೆಯೂ ಮೇಲ್ವಿಚಾರಣೆ ಮಾಡುತ್ತದೆ. ಅವುಗಳ ಶಸ್ತ್ರಾಸ್ತ್ರಗಳನ್ನು ಅಲ್ಲಿಂದ ಮಾತ್ರವೇ ಖರೀದಿಸಬಹುದು. ಕಾರ್ಗಿಲ್ ಸಂಘರ್ಷದ ಸಮಯದಲ್ಲಿ ಭಾರತಕ್ಕೆ ಜಿಪಿಎಸ್ ಸೇವೆಗಳನ್ನು ಅಮೆರಿಕ ನಿರಾಕರಿಸಿದೆ. DRDO ತನ್ನದೇ ಆದ ಅಭಿವೃದ್ಧಿಗೆ ಒತ್ತಾಯಿಸಿದೆ. ಹೀಗಾಗಿ, ನ್ಯಾವಿಗೇಷನ್ ಫಾರ್ ಇಂಡಿಯನ್ ಕಾನ್ಸ್ಟೆಲೇಷನ್ (NavIC) ಜನಿಸಿದೆ. ಜೊತೆಗೆ, ಆಮದು ವೆಚ್ಚಗಳು ಹೆಚ್ಚು. ಅದೇ ಭಾರತದಲ್ಲಿ ಖರ್ಚು ಮಾಡಿದರೆ, ಹೆಚ್ಚೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು. ಆರ್ಥಿಕತೆ ಹೆಚ್ಚಿಸಬಹುದು. ರಕ್ಷಣಾ ವ್ಯವಹಾರಗಳಲ್ಲಿನ ಭ್ರಷ್ಟಾಚಾರದ ವರದಿಗಳು ಮತ್ತಷ್ಟು ಇವೆ.
2014 ರಿಂದ ಸ್ವಾವಲಂಬನೆಯತ್ತ ರಕ್ಷಣಾ ವಲಯ: 2014 ರಿಂದ ರಕ್ಷಣಾ ಉತ್ಪಾದನೆಯಲ್ಲಿ ಆತ್ಮನಿರ್ಭರತೆ ನಿಧಾನವಾಗಿ ಪ್ರಾರಂಭವಾಯಿತು. ಅದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚೆಚ್ಚು ತೆರೆದುಕೊಳ್ಳುತ್ತಾ ಸಾಗಿದೆ. ಖಾಸಗಿ ವಲಯಕ್ಕೆ ಬಾಗಿಲು ತೆರೆಯುವುದರ ಜೊತೆಗೆ ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್ ಅನ್ನು ಕಾರ್ಪೊರೇಟ್ ಮಾಡುವುದು ಭಾರತದ ರಕ್ಷಣಾ ಉತ್ಪಾದನಾ ಭೂದೃಶ್ಯವನ್ನೇ ಬದಲಾಯಿಸಿದೆ. ಭಾರತದ ರಕ್ಷಣಾ ಉತ್ಪಾದನೆಯು ನಿರಂತರವಾಗಿ ಸ್ಥಿರತೆ ಕಂಡುಕೊಳ್ಳುತ್ತಿದೆ. ಇದು 2017ರಲ್ಲಿ 740 ಕೋಟಿ ರೂ.ಗಳಿಂದ 2023 ರಲ್ಲಿ ಒಂದು ಲಕ್ಷ ಕೋಟಿ ವರೆಗೂ ಹೆಚ್ಚಳಗೊಂಡಿದೆ.
ಮೇ 2023ರ ಕೇಂದ್ರ ಸರ್ಕಾರದ ಪತ್ರಿಕಾ ಪ್ರಕಟಣೆ ಪ್ರಕಾರ, ಸಣ್ಣ ಪ್ರಮಾಣದಲ್ಲಿ ಆರಂಭವಾದ ರಕ್ಷಣಾ ರಫ್ತುಗಳು ನಿರಂತರವಾಗಿ ಹೆಚ್ಚಳ ಕಾಣುತ್ತಿದೆ. 2013-14ನೇ ಸಾಲಿನಲ್ಲಿ 686 ಕೋಟಿ ರೂ.ಗಳ ರಪ್ತು ಮಾಡಿದ್ದರೆ, 2022-23 ರಲ್ಲಿ 16,000 ಕೋಟಿಗೆ ಏರಿಕೆ ಕಂಡಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಈ ಬಗ್ಗೆ ಮಾತನಾಡಿದ್ದ ಪ್ರಧಾನಿ ಮೋದಿ, ಮುಂದಿನ ಐದು ವರ್ಷಗಳಲ್ಲಿ 35,000 ಕೋಟಿ ರೂಪಾಯಿಗಳ ರಕ್ಷಣಾ ರಫ್ತುಗಳನ್ನು ಸಾಧಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಘೋಷಿಸಿದ್ದರು. ಭಾರತವನ್ನು ರಕ್ಷಣಾ ಸಾಧನಗಳ ಪ್ರಮುಖ ರಫ್ತುದಾರನನ್ನಾಗಿ ಮಾಡುವ ಉದ್ದೇಶವನ್ನು ಪ್ರಧಾನಿ ಮೋದಿ ಹೊಂದಿದ್ದಾರೆ.
ರಕ್ಷಣಾ ಇಲಾಖೆಯ ಪತ್ರಿಕಾ ಪ್ರಕಟಣೆಯಲ್ಲಿ 'ವಿದೇಶಿ ಮೂಲಗಳಿಂದ ರಕ್ಷಣಾ ಸಂಗ್ರಹಣಾ ವೆಚ್ಚವು 2018 -19 ರಲ್ಲಿ ಒಟ್ಟಾರೆ ವೆಚ್ಚದ ಶೇ 46ರಿಂದ ಶೇ 36.7 ಕ್ಕೆ ರಲ್ಲಿ ಕಡಿಮೆಯಾಗಿದೆ ಎಂದು ಹೇಳಿಕೆ ನೀಡಿತ್ತು. ಕಳೆದ ಮೂರು ಹಣಕಾಸು ವರ್ಷಗಳಲ್ಲಿ ರಕ್ಷಣಾ ಸಾಧನಗಳಿಗಾಗಿ 122 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಅದರಲ್ಲಿ 100 ಒಪ್ಪಂದಗಳು ಸ್ಥಳೀಯ ಪೂರೈಕೆದಾರರೊಂದಿಗೆ ನಡೆದಿವೆ ಎಂಬುದು ಗಮನಾರ್ಹ.
ನಾವೀನ್ಯತೆ ಮತ್ತು ತಂತ್ರಜ್ಞಾನ ಅಭಿವೃದ್ಧಿ ಉತ್ತೇಜಿಸುವ ಗುರಿಯನ್ನು ಹೊಂದಿರುವ 'ಇನ್ನೋವೇಶನ್ಸ್ ಫಾರ್ ಡಿಫೆನ್ಸ್ ಎಕ್ಸಲೆನ್ಸ್ (iDEX),' ನಂತಹ ಉಪಕ್ರಮಗಳು ಇದೀಗ ಯಶಸ್ವಿಯಾಗಿರುವುದು ಸಾಬೀತಾಗಿದೆ. ನಾಲ್ಕು ಸ್ಥಳೀಯ ರಕ್ಷಣಾ ಉತ್ಪಾದನಾ ಪಟ್ಟಿಗಳನ್ನು ನೀಡುವುದರೊಂದಿಗೆ ಸರ್ಕಾರವು ದೇಶೀಯ ಉದ್ಯಮಗಳಲ್ಲಿ ಭಾರಿ ಆತ್ಮ ವಿಶ್ವಾಸವನ್ನು ಮೂಡಿಸಿದೆ.