ಬೆಂಗಳೂರು : ಸಮುದಾಯ ನೇತೃತ್ವದ ಸಂಚಾರ ಸೇವಾ ಆ್ಯಪ್ ನಮ್ಮ ಯಾತ್ರಿ 11 ಮಿಲಿಯನ್ ಡಾಲರ್ (ಸುಮಾರು 92 ಕೋಟಿ ರೂ.) ಫಂಡಿಂಗ್ ಪಡೆದುಕೊಂಡಿದೆ ಎಂದು ಕಂಪನಿ ಮಂಗಳವಾರ ತಿಳಿಸಿದೆ. ಬ್ಲೂಮ್ ವೆಂಚರ್ಸ್ ಮತ್ತು ಆಂಟ್ಲರ್ ನೇತೃತ್ವದಲ್ಲಿ, ಸರಣಿ ಎ ಫಂಡಿಂಗ್ ಸುತ್ತಿನಲ್ಲಿ ಗೂಗಲ್ ಮತ್ತು ಇತರ ಹೂಡಿಕೆದಾರರ ಭಾಗವಹಿಸುವಿಕೆಯೊಂದಿಗೆ ನಮ್ಮ ಯಾತ್ರಿ ಈ ಫಂಡಿಂಗ್ ಸಂಗ್ರಹಿಸಿದೆ.
ಫಂಡಿಂಗ್ ಮೊತ್ತವನ್ನು ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಉತ್ಪನ್ನ ಆವಿಷ್ಕಾರಗಳಿಗೆ ಫಂಡಿಂಗ್ ನಿಧಿಯನ್ನು ವಿನಿಯೋಗ ಮಾಡಲಾಗುವುದು ಎಂದು ನಮ್ಮ ಯಾತ್ರಿ ಆ್ಯಪ್ನ ಮಾತೃ ಕಂಪನಿ ಮೂವಿಂಗ್ ಟೆಕ್ ಹೇಳಿದೆ. ನಮ್ಮ ಯಾತ್ರಿ ಮಾತ್ರವಲ್ಲದೇ ಯಾತ್ರಿ ಸಾಥಿ, ಯಾತ್ರಿ ಮತ್ತು ಮನ ಯಾತ್ರಿ ಈ ಎಲ್ಲ ಆ್ಯಪ್ಗಳಿಗೆ ಕೂಡ ಮೂವಿಂಗ್ ಟೆಕ್ ಮಾತೃ ಕಂಪನಿಯಾಗಿದೆ.
ಮೂವಿಂಗ್ ಟೆಕ್ 2020 ರಲ್ಲಿ ಓಪನ್ ಮೊಬಿಲಿಟಿ ಅಪ್ಲಿಕೇಶನ್ ಆಗಿರುವ ಯಾತ್ರಿಯನ್ನು ಪ್ರಾರಂಭಿಸಿತು. ನಂತರ ಇದು 2022 ರಲ್ಲಿ ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಆ್ಯಪ್ ಅನ್ನು ಪ್ರಾರಂಭಿಸಿತು. ನಮ್ಮ ಯಾತ್ರಿ ಮತ್ತು ಅದರ ಇತರ ಎಲ್ಲ ಅಪ್ಲಿಕೇಶನ್ಗಳು ಸಂಪೂರ್ಣವಾಗಿ ಮುಕ್ತ - ಮೂಲವಾಗಿದೆ. ಅಲ್ಲದೇ ಇವು ಮುಕ್ತ ಡೇಟಾ ಮೆಟ್ರಿಕ್ಸ್ ಕೂಡ ಆಗಿದ್ದು, ಒಎನ್ಡಿಸಿ ನೆಟ್ವರ್ಕ್ನ ಭಾಗವಾಗಿವೆ.
"ಜನಹಿತವೇ ಮೊದಲ ಆದ್ಯತೆಯ ವಿಧಾನದೊಂದಿಗೆ, 10 ಪಟ್ಟು ಉತ್ತಮವಾದ ಬಳಕೆಯ ಉತ್ಪನ್ನಗಳು ಮತ್ತು ತಂತ್ರಜ್ಞಾನವನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ. ಈ ಫಂಡಿಂಗ್ ನಮಗೆ ಹೊಸ ಆವಿಷ್ಕಾರಗಳನ್ನು ಮಾಡಲು ಮತ್ತು ಮತ್ತಷ್ಟು ಬೆಳೆಯಲು ಅನುವು ಮಾಡಿಕೊಡುತ್ತದೆ" ಎಂದು ಮೂವಿಂಗ್ ಟೆಕ್ ನ ಸಹ ಸಂಸ್ಥಾಪಕರಾದ ಮಗಿಝಾನ್ ಸೆಲ್ವನ್ ಮತ್ತು ಶಾನ್ ಎಂಎಸ್ ಹೇಳಿದರು.
ಸಂಚಾರ ವ್ಯವಸ್ಥೆಯಲ್ಲಿ ಮತ್ತೊಂದು ಯುಪಿಐ ಮಾದರಿಯ ಪಾರದರ್ಶಕ, ಪರಿಣಾಮಕಾರಿ ಮತ್ತು ಸುಸ್ಥಿರ ಸಾರಿಗೆ ಪರಿಸರ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಅಪ್ಲಿಕೇಶನ್ಗಳು ಹೊಂದಿವೆ.
ಮೂವಿಂಗ್ ಟೆಕ್ ಎಂಟು ನಗರಗಳು ಮತ್ತು ಪಟ್ಟಣಗಳಲ್ಲಿ ಲೈವ್ ಆಗಿದ್ದು, ಈವರೆಗೆ 46 ಮಿಲಿಯನ್ ಟ್ರಿಪ್ಗಳನ್ನು ನಿರ್ವಹಿಸಿದೆ. ಯಾವುದೇ ಕಮಿಷನ್ ಪಡೆಯದೇ ಇದು ಚಾಲಕರಿಗೆ 7 ಬಿಲಿಯನ್ ರೂಪಾಯಿ ಆದಾಯ ಸೃಷ್ಟಿಸಿದೆ. 7 ಮಿಲಿಯನ್ ಬಳಕೆದಾರರು ಮತ್ತು 4,00,000 ಚಾಲಕರನ್ನು ಹೊಂದಿರುವ ಕಂಪನಿಯು ವೇಗವಾಗಿ ಬೆಳೆಯುತ್ತಿದೆ ಎಂದು ಕಂಪನಿ ತಿಳಿಸಿದೆ.
"ಸಾಮೂಹಿಕ ಚಲನಶೀಲತೆಯ ಸಮಸ್ಯೆಗಳನ್ನು ತಂತ್ರಜ್ಞಾನ ಮತ್ತು ದೃಢವಾದ ಉತ್ಪನ್ನದಿಂದ ಎಷ್ಟು ಸರಳವಾಗಿ ಪರಿಹರಿಸಬಹುದು ಎಂಬುದು ಆಶ್ಚರ್ಯಕರವಾಗಿದೆ" ಎಂದು ಬ್ಲೂಮ್ ವೆಂಚರ್ಸ್ನ ಪಾಲುದಾರ ಕಾರ್ತಿಕ್ ರೆಡ್ಡಿ ಹೇಳಿದರು.
ಇದನ್ನೂ ಓದಿ : ಈ ವರ್ಷದ ಬಜೆಟ್ ಗಾತ್ರ 48 ಲಕ್ಷ ಕೋಟಿ ರೂ.: ಯಾವೆಲ್ಲ ಮೂಲಗಳಿಂದ ಬರುತ್ತದೆ ಹಣಕಾಸು? ಇಲ್ಲಿದೆ ಮಾಹಿತಿ - union budget size