ನವದೆಹಲಿ: ಭಾರತೀಯ ನವೋದ್ಯಮಿಗಳು ಭಾರತದ ಹೊರಗೆ 109 ಯುನಿಕಾರ್ನ್ಗಳನ್ನು ಸ್ಥಾಪಿಸಿದ್ದಾರೆ ಎಂದು ಗ್ಲೋಬಲ್ ಯೂನಿಕಾರ್ನ್ ಇಂಡೆಕ್ಸ್ 2024 ರ ವರದಿ ಹೇಳಿದೆ. ಹಾಗೆಯೇ ಭಾರತೀಯರು ಭಾರತದಲ್ಲಿ 109 ಯುನಿಕಾರ್ನ್ಗಳನ್ನು ಆರಂಭಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಗ್ಲೋಬಲ್ ಯುನಿಕಾರ್ನ್ ಇಂಡೆಕ್ಸ್ ಇದು 2000 ರ ದಶಕದಲ್ಲಿ ಸ್ಥಾಪಿಸಲಾದ ವಿಶ್ವದ ಸ್ಟಾರ್ಟ್ಅಪ್ಗಳಿಗೆ ಶ್ರೇಯಾಂಕ ನೀಡುವ ಸೂಚ್ಯಂಕ ಇದಾಗಿದೆ.
ಕನಿಷ್ಠ ಒಂದು ಬಿಲಿಯನ್ ಡಾಲರ್ ಮೌಲ್ಯದ ಮೂಲ ಬಂಡವಾಳದೊಂದಿಗೆ ಆರಂಭವಾಗುವ ಮತ್ತು ಇನ್ನೂ ಸಾರ್ವಜನಿಕ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರದ ಸ್ಟಾರ್ಟ್ಅಪ್ಗಳನ್ನು ಯುನಿಕಾರ್ನ್ ಎಂದು ಕರೆಯಲಾಗುತ್ತದೆ. ಹುರುನ್ ರಿಸರ್ಚ್ ಇನ್ ಸ್ಟಿಟ್ಯೂಟ್ನ ವರದಿಯ ಪ್ರಕಾರ 67 ಯುನಿಕಾರ್ನ್ಗಳೊಂದಿಗೆ ಭಾರತವು ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ. ತಲಾ 8 ಬಿಲಿಯನ್ ಡಾಲರ್ ಮೌಲ್ಯದ ಆನ್ - ಡಿಮ್ಯಾಂಡ್ ಡೆಲಿವರಿ ಸ್ಟಾರ್ಟ್ಅಪ್ ಸ್ವಿಗ್ಗಿ ಮತ್ತು ಫ್ಯಾಂಟಸಿ ಸ್ಪೋರ್ಟ್ಸ್ ಪ್ಲಾಟ್ಫಾರ್ಮ್ ಡ್ರೀಮ್ 11 ಹಾಗೂ 7.5 ಬಿಲಿಯನ್ ಡಾಲರ್ ಮೌಲ್ಯದ ರೇಜರ್ ಪೇ ಇವು ಭಾರತದ ಮುಂಚೂಣಿಯ ಯುನಿಕಾರ್ನ್ಗಳಾಗಿವೆ.
"ಭಾರತೀಯ ನವೋದ್ಯಮಿಗಳು ಬೇರೆ ಯಾವುದೇ ದೇಶಕ್ಕಿಂತ ಹೆಚ್ಚು ಕಡಲಾಚೆಯ ಯುನಿಕಾರ್ನ್ಗಳನ್ನು ಆರಂಭಿಸಿರುವುದು ಒಂದು ಮಹತ್ವದ ಅಂಶವಾಗಿದೆ. ಭಾರತೀಯರು ಭಾರತದಲ್ಲಿ ಸ್ಥಾಪಿಸಿರುವ 67 ಯುನಿಕಾರ್ನ್ಗಳಿಗೆ ಹೋಲಿಸಿದರೆ ಭಾರತದ ಹೊರಗೆ 109 ಯುನಿಕಾರ್ನ್ಗಳನ್ನು ಸಹ-ಸ್ಥಾಪಿಸಿದ್ದಾರೆ (ಕೋ ಫೌಂಡಿಂಗ್)" ಎಂದು ವರದಿ ಹೇಳಿದೆ.
ಭಾರತದ ಹೊರಗೆ ಸ್ಥಾಪಿಸಲಾದ ಯುನಿಕಾರ್ನ್ಗಳ ಪೈಕಿ 95 ಯುನಿಕಾರ್ನ್ಗಳು ಅಮೆರಿಕದ ಬೇ ಏರಿಯಾದಲ್ಲಿದ್ದರೆ, ಯುಕೆಯಲ್ಲಿ ನಾಲ್ಕು, ಸಿಂಗಾಪುರದಲ್ಲಿ ಮೂರು ಮತ್ತು ಜರ್ಮನಿಯಲ್ಲಿ ಎರಡು ಯುನಿಕಾರ್ನ್ ಇವೆ ಎಂದು ಸೂಚ್ಯಂಕ ತಿಳಿಸಿದೆ. ಅಮೆರಿಕ, ಭಾರತ ಮತ್ತು ಇಂಗ್ಲೆಂಡ್ನ ಷೇರು ಮಾರುಕಟ್ಟೆಗಳಲ್ಲಿ ಗಮನಾರ್ಹ ಪ್ರಮಾಣದ ಯುನಿಕಾರ್ನ್ ಐಪಿಒಗಳು ಬಂದಿಲ್ಲ.
"ವಿಶ್ವದ ಯುನಿಕಾರ್ನ್ಗಳ ಈ ಪಟ್ಟಿಯು ಹೊಸ ಕ್ಷೇತ್ರಗಳಲ್ಲಿ ಮೌಲ್ಯ ಸೃಷ್ಟಿಯನ್ನು ಹೆಚ್ಚಿಸಲು ಮತ್ತು ದೇಶಗಳು ಮತ್ತು ನಗರಗಳು ತಮ್ಮ ಭವಿಷ್ಯದ ಆರ್ಥಿಕತೆಗೆ ಯುನಿಕಾರ್ನ್ಗಳ ಮಹತ್ವವನ್ನು ಗುರುತಿಸಲು ವ್ಯಕ್ತಿಗಳನ್ನು ಪ್ರೇರೇಪಿಸುತ್ತದೆ" ಎಂದು ವರದಿ ಹೇಳಿದೆ.
ವಿಶ್ವದ 53 ದೇಶಗಳ 291 ನಗರಗಳಲ್ಲಿ ಯುನಿಕಾರ್ನ್ಗಳು ಸ್ಥಾಪನೆಯಾಗಿವೆ. ಕಳೆದ ವರ್ಷ 48 ದೇಶಗಳ 271 ನಗರಗಳಲ್ಲಿ ಯುನಿಕಾರ್ನ್ಗಳಿದ್ದವು. ಅಮೆರಿಕದ 703 ಯುನಿಕಾರ್ನ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಚೀನಾ 340 ಯುನಿಕಾರ್ನ್ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ವಿಶ್ವದಾದ್ಯಂತ 1,453 ಯುನಿಕಾರ್ನ್ಗಳಿವೆ ಎಂದು ಹುರುನ್ ವರದಿ ತಿಳಿಸಿದೆ. ಇದು ಹೊಸ ವಿಶ್ವ ದಾಖಲೆಯಾಗಿದೆ.
ಇದನ್ನೂ ಓದಿ : ಸ್ಯಾಮ್ಸಂಗ್ ಗ್ಯಾಲಕ್ಸಿ M ಸರಣಿಯ ಹೊಸ ಸ್ಮಾರ್ಟ್ಫೋನ್ ಬಿಡುಗಡೆ: ₹__ಆರಂಭಿಕ ಬೆಲೆಯಲ್ಲಿ ಲಭ್ಯ - Samsung Smartphones