ನವದೆಹಲಿ: ಸ್ಟಾರ್ಟ್ಅಪ್ಗಳು 'ವಿಕಸಿತ ಭಾರತ್' ಅಭಿಯಾನದ ರಾಯಭಾರಿಗಳಾಗಿದ್ದು, 2029ರ ವೇಳೆಗೆ ದೇಶದಲ್ಲಿ ಕನಿಷ್ಠ 10-15 ಲಕ್ಷ ಸ್ಟಾರ್ಟ್ಅಪ್ಗಳು ಮತ್ತು ಸುಮಾರು 500 ಯುನಿಕಾರ್ನ್ಗಳು ಇರಲಿವೆ ಎಂದು ಬಿಜೆಪಿ ಮುಂಬೈ ಪ್ರದೇಶ ಉಪಾಧ್ಯಕ್ಷ ಹಿತೇಶ್ ಜೈನ್ ಮಂಗಳವಾರ ಇಲ್ಲಿ ಹೇಳಿದರು.
'ವಿಕಸಿತ ಭಾರತ್ ಸ್ಟಾರ್ಟ್ಅಪ್ ಮಹಾಕುಂಭ 2024' ಸಮಾವೇಶದಲ್ಲಿ ಐಎಎನ್ಎಸ್ ಜೊತೆ ಮಾತನಾಡಿದ ಜೈನ್, 2047ರ ವೇಳೆಗೆ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಮತ್ತು ಸ್ಟಾರ್ಟ್ಅಪ್ಗಳು ಆರ್ಥಿಕತೆ ಬೆಳವಣಿಗೆಯ ಪ್ರಮುಖ ಮಾರ್ಗವಾಗಲಿವೆ ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಭಾವನೆಯಾಗಿದೆ ಎಂದರು.
"2014ರಲ್ಲಿ ದೇಶದಲ್ಲಿ ಕೇವಲ 350 ಸ್ಟಾರ್ಟ್ಅಪ್ಗಳಿದ್ದವು. ಆದರೆ ಇಂದು ಹಲವಾರು ವಿಭಿನ್ನ ವಲಯಗಳಲ್ಲಿ 1.25 ಲಕ್ಷಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳ ಶ್ರೀಮಂತ ಮತ್ತು ಅದ್ಭುತ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ದೇಶ ಹೊಂದಿದೆ. ಮುಂದಿನ ಐದು ವರ್ಷಗಳಲ್ಲಿ ನಾವು ಕನಿಷ್ಠ 10-15 ಲಕ್ಷ ಸ್ಟಾರ್ಟ್ಅಪ್ಗಳನ್ನು ಹೊಂದಲಿದ್ದೇವೆ" ಎಂದು ಅವರು ನುಡಿದರು.
'ಸ್ಟಾರ್ಟ್ಅಪ್ ಮಹಾಕುಂಭ 2024' ನಲ್ಲಿ ಹಾಜರಿರುವ ಸಾವಿರಾರು ನವೋದ್ಯಮಿಗಳು ಮತ್ತು ಹೂಡಿಕೆದಾರರು ವಿಕಸಿತ ಭಾರತ್ ಕಲ್ಪನೆಯ ಬಗ್ಗೆ ಭರವಸೆ ಹೊಂದಿದ್ದು, ಉಜ್ವಲ ಭವಿಷ್ಯವನ್ನು ಅವರು ಎದುರು ನೋಡುತ್ತಿದ್ದಾರೆ ಎಂದು ಜೈನ್ ತಿಳಿಸಿದರು.
ಯುವ ಉದ್ಯಮಿಗಳು ಸುಲಭವಾಗಿ ವ್ಯವಹಾರ ಆರಂಭಿಸಲು ಅನುಕೂಲವಾಗುವಂತೆ ಸುಲಭ ಮತ್ತು ಸ್ನೇಹಪರ ಕಾನೂನುಗಳನ್ನು ರೂಪಿಸುವುದರ ಜೊತೆಗೆ ಸರ್ಕಾರವು ಅನುಕೂಲಕರ ಸ್ಟಾರ್ಟ್ಅಪ್ ನೀತಿಯನ್ನು ರಚಿಸಿದೆ ಎಂದು ಜೈನ್ ಪ್ರತಿಪಾದಿಸಿದರು.
ಮಾರ್ಚ್ 18 ರಿಂದ 20 ರವರೆಗೆ ರಾಷ್ಟ್ರ ರಾಜಧಾನಿಯ ಭಾರತ್ ಮಂಟಪದಲ್ಲಿ ಆಯೋಜಿಸಲಾಗಿರುವ ಈ ಸಮಾವೇಶವು ನಾವೀನ್ಯತೆಯ ವೇಗವರ್ಧನೆ, ನೆಟ್ವರ್ಕಿಂಗ್ ಸುಗಮಗೊಳಿಸುವುದು ಮತ್ತು ಸ್ಟಾರ್ಟ್ಅಪ್ಗಳು, ಹೂಡಿಕೆದಾರರು, ಇನ್ಕ್ಯುಬೇಟರ್ಗಳು ಮತ್ತು ಉದ್ಯಮ ನಾಯಕರಿಗೆ ಬೆಳವಣಿಗೆಯ ಅವಕಾಶಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
1,000 ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳು, 1,000 ಕ್ಕೂ ಹೆಚ್ಚು ಹೂಡಿಕೆದಾರರು, 5,000 ಭವಿಷ್ಯದ ಉದ್ಯಮಿಗಳು ಮತ್ತು 40,000 ವ್ಯಾಪಾರ ಸಂದರ್ಶಕರು 'ಸ್ಟಾರ್ಟ್ಅಪ್ ಮಹಾಕುಂಭ'ದಲ್ಲಿ ಭಾಗವಹಿಸುತ್ತಿದ್ದಾರೆ. 'ಸ್ಟಾರ್ಟ್ಅಪ್ ಮಹಾಕುಂಭ' ಸಮಾವೇಶವು ಸ್ಟಾರ್ಟ್ಅಪ್ ವ್ಯವಸ್ಥೆಯ ಬಗ್ಗೆ ಉದ್ಯಮಿಗಳಲ್ಲಿ ಜಾಗೃತಿ ಮೂಡಿಸುತ್ತಿದೆ ಮತ್ತು ಅವರ ಉದ್ಯಮ ಜಾಲಗಳನ್ನು ವಿಸ್ತರಿಸಲು ಸಹಾಯ ಮಾಡುತ್ತಿದೆ ಎಂದು ಸಮಾವೇಶದಲ್ಲಿ ಭಾಗವಹಿಸಿದವರಲ್ಲಿ ಒಬ್ಬರು ಐಎಎನ್ಎಸ್ಗೆ ತಿಳಿಸಿದರು.
ಇದನ್ನೂ ಓದಿ: ಕಳೆದ ವರ್ಷ ಭಾರತದಲ್ಲಿ ದಾಖಲೆಯ 1 ಲಕ್ಷ ಪೇಟೆಂಟ್ ನೋಂದಣಿ