ನವದೆಹಲಿ: ಮೇ ತಿಂಗಳಲ್ಲಿ 1.73 ಲಕ್ಷ ಕೋಟಿ ರೂ.ಗಳಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಆದಾಯ ಸಂಗ್ರಹವಾಗಿದೆ ಎಂದು ಕೇಂದ್ರ ಸರಕಾರ ಶನಿವಾರ ತಿಳಿಸಿದೆ. ಮೇ ತಿಂಗಳಲ್ಲಿ ದೇಶೀಯ ವಹಿವಾಟುಗಳಲ್ಲಿ ಹೆಚ್ಚಳವಾಗಿದ್ದರಿಂದ ಮತ್ತು ಆಮದುಗಳು ಕಡಿಮೆಯಾಗಿದ್ದರಿಂದ ವರ್ಷದಿಂದ ವರ್ಷಕ್ಕೆ ಜಿಎಸ್ಟಿ ಸಂಗ್ರಹವು ಶೇ 10ರಷ್ಟು ಏರಿಕೆಯಾಗಿದೆ ಎಂದು ಸರಕಾರ ಹೇಳಿದೆ.
ಹಣಕಾಸು ಸಚಿವಾಲಯದ ಪ್ರಕಾರ, 2024-25ರ ಹಣಕಾಸು ವರ್ಷದಲ್ಲಿ ಮೇ ವರೆಗೆ ಒಟ್ಟು ಜಿಎಸ್ಟಿ ಸಂಗ್ರಹವು 3.83 ಲಕ್ಷ ಕೋಟಿ ರೂ.ಗಳಷ್ಟಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇಕಡಾ 11.3 ರಷ್ಟು ಬೆಳವಣಿಗೆಯಾಗಿದೆ.
ಮರುಪಾವತಿಗಳನ್ನು (ರಿಫಂಡ್) ಲೆಕ್ಕ ಹಾಕಿದ ನಂತರ, 2024-25ರ ಹಣಕಾಸು ವರ್ಷದಲ್ಲಿ ಮೇ 2024 ರವರೆಗೆ ನಿವ್ವಳ ಜಿಎಸ್ಟಿ ಆದಾಯವು 3.36 ಲಕ್ಷ ಕೋಟಿ ರೂ.ಗಳಷ್ಟಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇಕಡಾ 11.6 ರಷ್ಟು ಬೆಳವಣಿಗೆಯಾಗಿದೆ. ಹಾಗೆಯೇ ಮೇ ತಿಂಗಳಲ್ಲಿ ಮರುಪಾವತಿಯನ್ನು ಲೆಕ್ಕಹಾಕಿದ ನಂತರ, ನಿವ್ವಳ ಜಿಎಸ್ಟಿ ಆದಾಯವು 1.44 ಲಕ್ಷ ಕೋಟಿ ರೂ.ಗಳಷ್ಟಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 6.9 ರಷ್ಟು ಏರಿಕೆಯಾಗಿದೆ.
ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್ಟಿ) ಸಂಗ್ರಹ 32,409 ಕೋಟಿ ರೂ. ಆಗಿದ್ದರೆ, ರಾಜ್ಯಗಳ ಜಿಎಸ್ಟಿ ಸಂಗ್ರಹ 40,265 ಕೋಟಿ ರೂ. ಹಾಗೂ ಸಮಗ್ರ ಐಜಿಎಸ್ಟಿ ಸಂಗ್ರಹ 87,781 ಕೋಟಿ ರೂ. ಆಗಿದೆ. ಇದು ಆಮದು ಮಾಡಿದ ಸರಕುಗಳ ಮೇಲೆ ಸಂಗ್ರಹಿಸಲಾದ 39,879 ಕೋಟಿ ರೂ.ಗಳನ್ನು ಒಳಗೊಂಡಿದೆ ಎಂದು ಸಚಿವಾಲಯ ತಿಳಿಸಿದೆ.
ಹಾಗೆಯೇ ಸೆಸ್ ಸಂಗ್ರಹವು 12,284 ಕೋಟಿ ರೂ. ಆಗಿದ್ದು, ಇದು ಆಮದು ಸರಕುಗಳ ಮೇಲೆ ಸಂಗ್ರಹಿಸಿದ 1,076 ಕೋಟಿ ರೂ. ಸೆಸ್ ಅನ್ನು ಒಳಗೊಂಡಿದೆ.
2024-25ರ ಹಣಕಾಸು ವರ್ಷದಲ್ಲಿ ಮೇ ವರೆಗೆ ಸಿಜಿಎಸ್ಟಿ 76,255 ಕೋಟಿ ರೂ., ಎಸ್ಜಿಎಸ್ಟಿ 93,804 ಕೋಟಿ ರೂ., ಐಜಿಎಸ್ಟಿ 1,87,404 ಕೋಟಿ ರೂ. ಮತ್ತು ಸೆಸ್ 25,544 ಕೋಟಿ ರೂ. ಸಂಗ್ರಹವಾಗಿದೆ.
ಮೇ ತಿಂಗಳಲ್ಲಿ ಕೇಂದ್ರ ಸರ್ಕಾರವು ನಿವ್ವಳ ಐಜಿಎಸ್ಟಿ 67,204 ಕೋಟಿ ರೂ. ಸಂಗ್ರಹದಲ್ಲಿ 38,519 ಕೋಟಿ ರೂ. ಸಿಜಿಎಸ್ಟಿ ಮತ್ತು 32,733 ಕೋಟಿ ರೂ.ಗಳಷ್ಟು ಎಸ್ಜಿಎಸ್ಟಿ ಇತ್ಯರ್ಥಪಡಿಸಿದೆ. ಇದರಿಂದ ಮೇ ತಿಂಗಳಲ್ಲಿ ಸಿಜಿಎಸ್ಟಿ ಒಟ್ಟು ಆದಾಯ 70,928 ಕೋಟಿ ರೂ. ಮತ್ತು ಎಸ್ಜಿಎಸ್ಟಿ ಯ ಒಟ್ಟು ಆದಾಯ 72,999 ಕೋಟಿ ರೂ. ಆಗಿದೆ. ಈ ಮೂಲಕ 2024-25ರ ಹಣಕಾಸು ವರ್ಷದಲ್ಲಿ ಮೇ ವರೆಗೆ ಸಿಜಿಎಸ್ಟಿ ಆದಾಯ ಒಟ್ಟು 1,65,081 ಕೋಟಿ ರೂ ಮತ್ತು ಎಸ್ಜಿಎಸ್ಟಿ ಆದಾಯ 1,68,137 ಕೋಟಿ ರೂ. ಆಗಿದೆ.