ಅಮರಾವತಿ: ದೇಶದ ಪ್ರಸಿದ್ಧ, ಶ್ರೀಮಂತ ಹಿಂದೂ ದೇವಾಲಯ ತಿರುಪತಿಯ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲ ಪವಿತ್ರಗೊಳಿಸುವ ಕಾರ್ಯ ಆರಂಭಿಸಲಾಗಿದೆ ಎಂದು ಆಂಧ್ರ ಪ್ರದೇಶ ಸಿಎಂ ಎನ್.ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ದೇಗುಲದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗುತ್ತಿತ್ತು ಎಂದು ಅವರು ಆರೋಪಿಸಿರುವ ಬೆನ್ನಲ್ಲೇ, ಪ್ರಯೋಗಾಲಯದ ಪರೀಕ್ಷೆಯಲ್ಲೂ ಲಡ್ಡಿನಲ್ಲಿ ಕಲಬೆರಕೆಯ ತುಪ್ಪದ ಅಂಶ ದೃಢಪಟ್ಟಿತ್ತು.
ಇದಾದ ನಂತರ ಹಿಂದಿನ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಸಿಎಂ ನಾಯ್ಡು, ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದಲ್ಲಿ ತಿರುಮಲ ಭಕ್ತರಿಕೆ ಕಲಬೆರಕೆ ವಸ್ತು ಬಳಸಿ ದೇಗುಲದ ಪಾವಿತ್ರ್ಯತೆಗೆ ಧಕ್ಕೆ ತರಲಾಗಿತ್ತು. ಇದರ ಜೊತೆಗೆ ಭಕ್ತರ ಭಾವನೆಗಳಿಗೂ ಘಾಸಿ ಮಾಡಲಾಗಿದೆ. ದೇವರ ಪ್ರಸಾದ ತಯಾರಿಕೆಯಲ್ಲಿ ಬಳಸುತ್ತಿದ್ದ ವಸ್ತುಗಳಲ್ಲಿ ಕಲಬೆರಕೆಯ ಅಂಶ ಪತ್ತೆಯಾಗಿರುವ ಸಂಬಂಧ ಬಲವಾದ ಸಾಕ್ಷ್ಯ ಸಿಕ್ಕಿದೆ. ಈ ಕೆಲಸದಲ್ಲಿ ಭಾಗಿಯಾದವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ
ಗುರುವಾರ ಸೆಕ್ರೆಟೆರಿಯೇಟ್ನಲ್ಲಿ ಬಡ ಜನರಿಗೆ ಕಡಿಮೆ ದರದಲ್ಲಿ ಉತ್ತಮ ಆಹಾರ ಒದಗಿಸುವ 'ಅನ್ನ ಕ್ಯಾಂಟೀನ್' ಉದ್ಘಾಟಿಸಿ ಮಾತನಾಡಿದ ಅವರು, ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ಹಿಂದೂಗಳ ಆರಾಧ್ಯ ದೈವ. ಆದರೆ, ವೈಎಸ್ಆರ್ಸಿಪಿ ಸರ್ಕಾರ ಅದನ್ನು ಸಂಪೂರ್ಣವಾಗಿ ಅಪವಿತ್ರಗೊಳಿಸಿದೆ ಎಂದು ಆರೋಪಿಸಿದರು.
ಇನ್ನು ಐಟಿ ಸಚಿವ ನಾರಾ ಲೋಕೇಶ್ ಕೂಡ, ದೇಗುಲದಲ್ಲಿ ಭಕ್ತರಿಗೆ ನೀಡುವ ಉಚಿತ ಅನ್ನದಾನಂ ಸೇವೆ ಮತ್ತು ಲಡ್ಡುಗಳ ಗುಣಮಟ್ಟವನ್ನು ವೈಎಸ್ಆರ್ಸಿಪಿ ಸರ್ಕಾರದ ಸಮಯದಲ್ಲಿ ಹಾಳು ಮಾಡಲಾಗಿದೆ ಎಂದು ದೂರಿದ್ದಾರೆ.
ದೇಗುಲದ ಪ್ರಸಾದ ತಯಾರಿಕೆಯ ವಸ್ತುಗಳಲ್ಲಿ ಈ ಹಿಂದೆ ಕಂಡರಿಯದಂತಹ ಭ್ರಷ್ಟಾಚಾರ ಮಾಡಲಾಗಿತ್ತು. ಇದೇ ಕಾರಣಕ್ಕೆ ಕಲಬೆರಕೆ ತುಪ್ಪ ಬಳಸಲಾಗಿದೆ. ಎನ್‌ಡಿಎ ಸರ್ಕಾರ ರಚನೆಯಾದ ತಕ್ಷಣ ದೇಗುಲದ ಆಡಳಿತದಲ್ಲಿ ಹೊಸ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸಲಾಗಿದೆ. ಅವರಿಗೆ ದೇಗುಲ ಪವಿತ್ರಗೊಳಿಸುವ ಹಾಗೂ ಹಿಂದಿನ ಅಕ್ರಮ ಮರಳದಂತೆ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಲೋಕೇಶ್ ತಿಳಿಸಿದರು.
ಪ್ರಸಾದದ ಗುಣಮಟ್ಟ ಕಾಪಾಡುವ ಉದ್ದೇಶದಿಂದ ತುಪ್ಪ, ಅಕ್ಕಿ ಮತ್ತು ಎಲ್ಲ ತರಕಾರಿಗಳನ್ನು ಪರಿಶೀಲಿಸುವಂತೆ ಇಒಗೆ ಸಿಎಂ ಸೂಚಿಸಿದ್ದರು. ಅದರಂತೆ, ಪರೀಕ್ಷಿಸಿದಾಗ ಎನ್‌ಡಿಡಿಬಿ ಲ್ಯಾಬ್ನಲ್ಲಿ ತುಪ್ಪದ ಗುಣಮಟ್ಟ ಕಲಬೆರಕೆಯಿಂದ ಕೂಡಿದೆ ಎಂಬ ವರದಿ ಬಂದಿದೆ.
ಇದನ್ನೂ ಓದಿ: ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಸಿರುವುದು ಎನ್‌ಡಿಡಿಬಿ ವರದಿಯಿಂದ ದೃಢ: ಟಿಡಿಪಿ ಆರೋಪ