ನಲ್ಗೊಂಡ (ಆಂಧ್ರಪ್ರದೇಶ): ನಲ್ಗೊಂಡ ಜಿಲ್ಲೆಯ ಸಾಮಾನ್ಯ ಹಳ್ಳಿ ದೋಮಲಪಲ್ಲಿಯಲ್ಲಿ ಹಾಲು ಮಾರಿ, ಪೇಪರ್ ಹಾಕುತ್ತಿದ್ದ ಯುವಕನೊಬ್ಬ ಬರೋಬ್ಬರಿ ಮೂರು ಸರ್ಕಾರಿ ಉದ್ಯೋಗಗಳನ್ನು ಪಡೆದಿರುವ ಸಾಧನೆಯ ಕಥೆ ಇದು. ಸಾಧಾರಣ ಕುಟುಂಬದಲ್ಲಿ ಜನಿಸಿದ ಗದ್ದಂ ಲಿಂಗಸ್ವಾಮಿ ತಮ್ಮ ಕಠಿಣ ಪರಿಶ್ರಮದಿಂದ ಇಂದು ತಮ್ಮ ಕುಟುಂಬಕ್ಕೆ ಭರವಸೆಯ ದಾರಿದೀಪವಾಗಿ ನಿಂತಿದ್ದಾರೆ.
ಭೀಕರ ಅಪಘಾತವೊಂದರಲ್ಲಿ ಲಿಂಗಸ್ವಾಮಿ ಅವರ ತಂದೆ ಕೆಲಸ ಮಾಡದ ಪರಿಸ್ಥಿತಿಗೆ ತಲುಪಿದ್ದರು. ಹೀಗಾಗಿ ತಮ್ಮ ಸಹೋದರನ ಜೊತೆಗೆ ಇಡೀ ಕುಟುಂಬವನ್ನು ಪೋಷಿಸುವ ಜವಾಬ್ದಾರಿ ಲಿಂಗಸ್ವಾಮಿ ಹೆಗಲ ಮೇಲೆ ಬಿದ್ದಿತ್ತು. ಆ ಸಂದರ್ಭದಲ್ಲಿ ತಮ್ಮ ಕುಟುಂಬಕ್ಕಾಗಿ ಬೆಳಗಾಗುವ ಮೊದಲೇ ಎದ್ದು, ಮನೆಯ ಕೃಷಿ ಕೆಲಸಗಳನ್ನು ಮಾಡಿ, ಹಾಲು ಮಾರಿ, ದಿನಪತ್ರಿಕೆಗಳನ್ನು ಮನೆ ಮನೆಗೆ ಹಾಕುವ ಕೆಲಸಗಳನ್ನು ಮಾಡುತ್ತಿದ್ದರು.
ಕುಟುಂಬದ ಜವಾಬ್ದಾರಿಯ ಜೊತೆಗೆ ತಮ್ಮ ಶಿಕ್ಷಣವನ್ನೂ ಮುಂದುವರಿಸಿದ್ದ ಲಿಂಗಸ್ವಾಮಿ ತೆಲಂಗಾಣ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. ಚಿನ್ನದ ಪದಕ ಪಡೆದು ತೆಲುಗು ಎಂಎಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಬಹುಮುಖ ಪ್ರತಿಭೆ ಲಿಂಗಸ್ವಾಮಿ ಅವರು ಶೈಕ್ಷಣಿಕವಾಗಿ ಮಾತ್ರವಲ್ಲದೆ ಕ್ರೀಡೆಯಲ್ಲೂ ತೊಡಗಿಸಿಕೊಂಡಿದ್ದರು.
ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಬಿ.ಇಡಿ ಪದವಿಯನ್ನೂ ಲಿಂಗಸ್ವಾಮಿ ಗಳಿಸಿದ್ದಾರೆ. ತಮ್ಮ ಕುಟುಂಬದ ಆರ್ಥಿಕ ಸಂಕಷ್ಟಗಳನ್ನು ನಿವಾರಿಸುವ ಕನಸನ್ನು ಹೊತ್ತಿದ್ದ ಲಿಂಗಸ್ವಾಮಿ, ನಿರಂತರವಾಗಿ ಸರ್ಕಾರಿ ಉದ್ಯೋಗ ಪಡೆಯಲು ಪ್ರಯತ್ನಿಸುತ್ತಲೇ ಇದ್ದರು. ಇದರ ಜೊತೆಗೆ ಕೆಲಸ ದೊರೆಯುವವರೆಗೆ ಲಿಂಗಸ್ವಾಮಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳಿಕೊಡುವ ಕೆಲಸವನ್ನೂ ಮಾಡುತ್ತಿದ್ದರು. ಈ ಎಲ್ಲಾ ಪರಿಶ್ರಮಗಳ ಫಲವಾಗಿ ಇಂದು ಲಿಂಗಸ್ವಾಮಿ ಏಕಕಾಲದಲ್ಲಿ ಮೂರು ಸರ್ಕಾರಿ ಉದ್ಯೋಗಗಳನ್ನು ಪಡೆಯುವ ಮೂಲಕ ಯುವ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಮೂರು ಸರ್ಕಾರಿ ಉದ್ಯೋಗಗಳ ಸರದಾರ ಫುಡ್ ಡೆಲಿವರಿ ಬಾಯ್: ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ತಾಡ್ವಾಯಿ ಮಂಡಲದ ಸಂಗೋಜಿವಾಡಿ ಗ್ರಾಮದ ಕುಟುಂಬದಲ್ಲಿ ಜನಿಸಿದ ಬಲವಂತ ರಾವ್ ಅವರ ಬಾಲ್ಯದ ಸರ್ಕಾರಿ ಶಿಕ್ಷಕನಾಗುವ ಕನಸು ಆರ್ಥಿಕ ಸಂಕಷ್ಟದಿಂದ ದೂರವಾದಂತಿತ್ತು. ಆದರೂ ಅಚಲ ನಿರ್ಧಾರದಿಂದ ಅಂತಿಮವಾಗಿ ಕೇವಲ ಒಂದಲ್ಲ.. ಎರಡಲ್ಲ ಒಟ್ಟು ಮೂರು ಸರ್ಕಾರಿ ಉದ್ಯೋಗಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಮರೆಡ್ಡಿ ಸರ್ಕಾರಿ ಕಾಲೇಜಿನಲ್ಲಿ ಪದವಿ ಪಡೆದು ಶ್ರದ್ಧೆಯಿಂದ ಶಿಕ್ಷಣ ಮುಂದುವರಿಸಿದರು. 2015ರಲ್ಲಿ, ಹೈದರಾಬಾದ್‌ಗೆ ತೆರಳಿ, ಅಲ್ಲಿ ತಮ್ಮ ಕನಸಿನ ಉದ್ಯೋಗಕ್ಕಾಗಿ ತಯಾರಿ ನಡೆಸಿದರು. ಆ ಸಮಯದಲ್ಲೇ ಜೀವನಾಂಶಕ್ಕಾಗಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದರು. ಸರ್ಕಾರಿ ಹುದ್ದೆ ಪಡೆಯುವ ಆಸೆಯಿಂದ ಅಡೆತಡೆಗಳು ಮತ್ತು ಅಪಹಾಸ್ಯಗಳಿಗೆ ಹಿಂಜರಿಯದೆ ಸಿದ್ಧತೆ ನಡೆಸಿದರು.
ತಮ್ಮ ಪರಿಶ್ರಮದ ಫಲವಾಗಿ, ತರಬೇತಿ ಪಡೆದ ಪದವೀಧರ ಶಿಕ್ಷಕರು (ಟಿಜಿಟಿ), ಸ್ನಾತಕೋತ್ತರ ಶಿಕ್ಷಕರು (ಪಿಜಿಟಿ), ಮತ್ತು ಜೂನಿಯರ್ ಲೆಕ್ಚರರ್ (ಜೆಎಲ್) ಆಗಿ ಹೊರಹೊಮ್ಮಿರುವ ಬಲವಂತ್ ಅವರು ಮೂರು ಸರ್ಕಾರಿ ಉದ್ಯೋಗಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರತಿ ವಿಭಾಗಗಳಲ್ಲೂ ಟಾಪರ್ ಆಗಿ ಹೊರಹೊಮ್ಮಿರುವುದು ಅವರ ಹೆಗ್ಗಳಿಕೆ.
ತಮ್ಮ ತಯಾರಿಯ ಕಷ್ಟದ ಸಮಯದಲ್ಲಿ ಬಲವಂತ ರಾವ್ ಅವರು, ಹರೇ ರಾಮ ಹರೇ ಕೃಷ್ಣ ಫೌಂಡೇಶನ್ ನೀಡುತ್ತಿದ್ದ ಸಬ್ಸಿಡಿ ದರದಲ್ಲಿ ಊಟವನ್ನು ಪಡೆಯುತ್ತಿದ್ದರು. ತಮ್ಮ ಅಧ್ಯಯನದ ಖರ್ಚಿಗೆ Zomato ಮತ್ತು Swiggy ಗಳಂತ ಆಹಾರ ವಿತರಣಾ ಕಂಪನಿಗಳಲ್ಲಿ ಡೆಲಿವರಿ ಬಾಯ್ ಆಗಿ ಸೇರಿಕೊಂಡರು. ಹಲವು ಉದ್ಯೋಗಾವಕಾಶ ಕೈತಪ್ಪಿದಂತಹ ಸಂದರ್ಭಗಳಲ್ಲಿ ಶ್ರೀ ನೇತಾಜಿ ಸ್ಟಡಿ ಸರ್ಕಲ್‌ನ ಸಿದ್ಧಾರ್ಥ್ ಮತ್ತು ಶಾಲಾ ಸಹಾಯಕ ಸುಧಾಕರ್ ಅವರಂತಹ ಮಾರ್ಗದರ್ಶಕರ ಬೆಂಬಲ ಸಿಕ್ಕಿತು. ಇದು ಬಲವಂತ ರಾವ್ ಅವರ ಗುರಿಯನ್ನು ಮುಟ್ಟಲು ಕಠಿಣ ಪರಿಶ್ರಮ ಇಂದು ಮೂರು ಸರ್ಕಾರಿ ಉದ್ಯೋಗಗಳನ್ನು ಪಡೆಯುವಂತೆ ಮಾಡಿದೆ.
ಇದನ್ನೂ ಓದಿ: 30 ಗುಂಟೆ ಜಮೀನು, 6 ತಿಂಗಳಲ್ಲಿ 5 ಲಕ್ಷ ರೂ. ಆದಾಯ: ಹಾವೇರಿ ರೈತನ ಮಾದರಿ ಸೇವಂತಿ ಕೃಷಿ