ಕೊರ್ಬಾ (ಛತ್ತೀಸ್‌ಗಢ): ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿಗಾಗಿ ದೈಹಿಕ ಸಹಿಷ್ಣುತಾ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಅಭ್ಯರ್ಥಿಯೋರ್ವ ಓಡುವಾಗ ಪ್ರಜ್ಞೆ ತಪ್ಪಿ ಬಿದ್ದು ಸಾವನ್ನಪ್ಪಿದ ಘಟನೆ ಛತ್ತೀಸ್‌ಗಢದ ಕೊರ್ಬಾದಲ್ಲಿ ಇಂದು ಬೆಳಗ್ಗೆ ನಡೆದಿದೆ. ಅಭ್ಯರ್ಥಿಯ ಹೆಸರನ್ನು ಸದ್ಯಕ್ಕೆ ಬಹಿರಂಗಪಡಿಸಿಲ್ಲ.
ಕೊರ್ಬಾದ ಟಿ.ಪಿ. ನಗರದ ಇಂದಿರಾ ಕ್ರೀಡಾಂಗಣದಲ್ಲಿ ಡಿಸೆಂಬರ್ 4ರಿಂದ ಅರಣ್ಯ ಸಿಬ್ಬಂದಿ ನೇಮಕಾತಿಗಾಗಿ ದೈಹಿಕ ಸಹಿಷ್ಣುತಾ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ನೇಮಕಾತಿಯ ನಿಯಮಾವಳಿ ಪ್ರಕಾರ ಅಭ್ಯರ್ಥಿಗಳು ಎತ್ತರ ಜಿಗಿತ, ಉದ್ದ ಜಿಗಿತದ ಜೊತೆಗೆ ಓಟದಲ್ಲಿ ಉತ್ತೀರ್ಣರಾಗಿರಬೇಕು. ಎಂದಿನಂತೆ ಇಂದು ಬೆಳಗ್ಗೆ ದೈಹಿಕ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ, ಅಭ್ಯರ್ಥಿಯೋರ್ವ ಓಡುವಾಗ ಹಠಾತ್ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಬಿದ್ದ ತಕ್ಷಣ ಆ ಅಭ್ಯರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವೈದ್ಯರು ಆತನ ಸಾವಿನ ಬಗ್ಗೆ ಖಚಿತಪಡಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
''ನಿಮ್ಮ ಮಗನಿಗೆ ಏನೋ ಆಗಿದೆ ಎಂದು ಸಂಬಂಧಿಯೊಬ್ಬರು ವಿಷಯ ತಿಳಿಸಿದರು. ಓಡೋಡಿ ಬಂದು ನೋಡಿದಾಗ ಈ ವಿಚಾರ ಗೊತ್ತಾಯಿತು. ನನ್ನ ಅಣ್ಣನ ಮಗನೂ ಅವನೊಂದಿಗಿದ್ದ. ಅವರು ನಮಗೆ ಕರೆ ಮಾಡಿ ಇಡೀ ಘಟನೆಯ ಬಗ್ಗೆ ತಿಳಿಸಿದರು. ನಾವು ತರಾತುರಿಯಲ್ಲಿ ಇಲ್ಲಿಗೆ ಓಡಿಬಂದೆವು. ನಮ್ಮ ಮಗ ಸರ್ಕಾರಿ ನೌಕರಿ ಸೇರಬೇಕೆಂಬ ಆಸೆ ಹೊತ್ತಿದ್ದ'' ಎಂದು ಮೃತರ ಸಂಬಂಧಿ ಸುಕುಮಾರ್ ಸಿಂಗ್ ಕಣ್ಣೀರು ಹಾಕಿದರು.
''ಡಿ. 4 ರಿಂದ ಇಲ್ಲಿ ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿಗಾಗಿ ದೈಹಿಕ ಸಹಿಷ್ಣುತಾ ಪರೀಕ್ಷೆ ನಡೆಸಲಾಗುತ್ತಿದೆ. ಮೃತ ಅಭ್ಯರ್ಥಿ 200 ಮೀಟರ್ ಓಟವನ್ನು ಪೂರ್ಣಗೊಳಿಸುತ್ತಿದ್ದಂತೆ ತಲೆತಿರುಗಿದಂತಾಗಿ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ, ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿ'' ಕೊರ್ಬಾ ಅರಣ್ಯ ವಿಭಾಗದ ರೇಂಜರ್ ಮೃತ್ಯುಂಜಯ್ ಶರ್ಮಾ ಎಂಬುವರು ಮಾಹಿತಿ ನೀಡಿದ್ದಾರೆ.
ಕೊರ್ಬಾ ಜಿಲ್ಲೆಯ ಟಿಪಿ ನಗರದಲ್ಲಿರುವ ಪ್ರಿಯದರ್ಶಿನಿ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಕೊರ್ಬಾ, ಕಟ್ಘೋರಾ ಮತ್ತು ಮರ್ವಾಹಿ ಅರಣ್ಯ ವಿಭಾಗಗಳಿಗೆ ಫಾರೆಸ್ಟ್ ಗಾರ್ಡ್ ನೇಮಕಾತಿಗಾಗಿ ದೈಹಿಕ ಪರೀಕ್ಷೆ ನಡೆಸಲಾಗುತ್ತಿದೆ. ಈ ಮೂರು ಅರಣ್ಯ ವಿಭಾಗದಲ್ಲಿ ಒಟ್ಟು 120 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು, 29,000 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ದೈಹಿಕ ಪರೀಕ್ಷೆಯನ್ನು ಡಿಸೆಂಬರ್ 18ರ ವರೆಗೆ ತೆಗೆದುಕೊಳ್ಳಲಾಗುತ್ತದೆ. ದೈಹಿಕ ಪರೀಕ್ಷೆಗೆ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಹಾಜರಾಗುವುದರಿಂದ, ದಿನಕ್ಕೆ ಸುಮಾರು 2,500 ಅಭ್ಯರ್ಥಿಗಳನ್ನು ಪರೀಕ್ಷಿಸಲು ತಲಾ 25 ಬ್ಯಾಚ್‌ಗಳನ್ನು ಮಾಡಲಾಗುತ್ತಿದೆ.
ಅಗ್ನಿವೀರ್ ನೇಮಕಾತಿ ವೇಳೆ ಯುವಕ ಸಾವು: ಡಿ.10 ರಂದು ರಾಯಗಢ ಸ್ಟೇಡಿಯಂನಲ್ಲಿ ನಡೆದ ಅಗ್ನಿವೀರ್ ನೇಮಕಾತಿ ರ‍್ಯಾಲಿಯಲ್ಲಿ 20 ವರ್ಷದ ಮನೋಜ್ ಕುಮಾರ್ ಸಾಹು ಎಂಬ ಯುವಕ ಓಡಿ ಪ್ರಜ್ಞಾಹೀನನಾಗಿದ್ದನು. ಕ್ರೀಡಾಂಗಣದಲ್ಲಿ ಹಾಜರಿದ್ದ ಜಿಲ್ಲಾ ಆರೋಗ್ಯ ಇಲಾಖೆಯ ವೈದ್ಯಕೀಯ ತಂಡವು ಸ್ಥಳದಲ್ಲೇ ಅಭ್ಯರ್ಥಿಯನ್ನು ಪರೀಕ್ಷಿಸಿದ್ದರು. ಆದರೆ, ಬಳಿಕ ಯುವಕನನ್ನು ರಾಯಗಢ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಆತ ಮೃತಪಟ್ಟಿದ್ದನು. ಡಿಸೆಂಬರ್ 9 ರಂದು ಕಂಕೇರ್ನ ಸೈನಿಕ ಮೈದಾನದಲ್ಲಿ ನಡೆದ ಫಾರೆಸ್ಟ್ ಗಾರ್ಡ್ ನೇಮಕಾತಿ ವೇಳೆಯಲ್ಲೂ ಯುವಕನೊಬ್ಬ ಹೀಗೆ ಮೃತಪಟ್ಟ ಘಟನೆ ನಡೆದಿತ್ತು. ಇಂದಿನ ಪ್ರಕರಣ ಸೇರಿ ಒಟ್ಟು ಮೂವರು ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.