ನವದೆಹಲಿ: ಇಂದು ವಿಶ್ವ ಇಡ್ಲಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಆನ್ಲೈನ್ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಸ್ವಿಗ್ಗಿ ಇಡ್ಲಿ ಆರ್ಡ್ರ್ ಕುರಿತ ಕುತೂಹಲಕಾರಿ ಅಂಕಿ- ಅಂಶಗಳನ್ನು ಪ್ರಕಟಿಸಿದೆ. ಹೈದರಾಬಾದ್‌ನ ಸ್ವಿಗ್ಗಿ ಗ್ರಾಹಕರೊಬ್ಬರು ಕಳೆದ 12 ತಿಂಗಳಲ್ಲಿ 7.3 ಲಕ್ಷ ರೂಪಾಯಿ ಮೌಲ್ಯದ ಇಡ್ಲಿ ಆರ್ಡರ್ ಮಾಡಿದ್ದಾರೆ. ಇಡ್ಲಿಯನ್ನು ಬೆಳಗ್ಗೆ 8 ರಿಂದ 10 ಗಂಟೆ ಸಮಯದಲ್ಲಿ ಹೆಚ್ಚಾಗಿ ಆರ್ಡರ್ ಮಾಡಲಾಗುತ್ತದೆ. ಬೆಂಗಳೂರು, ಹೈದರಾಬಾದ್, ಚೆನ್ನೈ, ಕೊಯಮತ್ತೂರು ಮತ್ತು ಮುಂಬೈ ಸೇರಿದಂತೆ ವಿವಿಧ ನಗರಗಳ ಗ್ರಾಹಕರು ರಾತ್ರಿ ಊಟದ ಸಮಯದಲ್ಲೂ ಇಡ್ಲಿಯನ್ನು ಸವಿಯುತ್ತಾರೆ ಎಂದು ಸ್ವಿಗ್ಗಿ ಮಾಹಿತಿ ನೀಡಿದೆ.
ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ಇಡ್ಲಿಗಳನ್ನು ಹೆಚ್ಚು ಆರ್ಡರ್ ಮಾಡುವ ಮೊದಲ ಮೂರು ನಗರಗಳಾಗಿ ಹೊರಹೊಮ್ಮಿವೆ. ಮುಂಬೈ, ಪುಣೆ, ಕೊಯಮತ್ತೂರು, ದೆಹಲಿ, ವಿಶಾಖಪಟ್ಟಣ, ಕೋಲ್ಕತ್ತಾ ಮತ್ತು ವಿಜಯವಾಡ ನಂತರದ ಸ್ಥಾನಗಳಲ್ಲಿವೆ. ಸಾಮಾನ್ಯವಾಗಿ ಇಡ್ಲಿಯು ಎಲ್ಲಾ ನಗರಗಳಲ್ಲಿ ಅತ್ಯಂತ ಜನಪ್ರಿಯ ಭಕ್ಷ್ಯವಾಗಿ ಹೆಸರುವಾಸಿಯಾಗಿದೆ. ಎಲ್ಲೆಡೆ ಸಾಮಾನ್ಯವಾಗಿ ಪ್ಲೇಟ್ಗೆ ಎರಡು ಇಡ್ಲಿಗಳಿರುತ್ತವೆ. ರವಾ ಇಡ್ಲಿಯು ಬೆಂಗಳೂರಿನಲ್ಲಿ ಜನಪ್ರಿಯವಾಗಿದೆ. ತೆಲಂಗಾಣ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ತುಪ್ಪ, ಶೇಂಗಾ ಪುಡಿ ಜೊತೆಗೆ ಇಡ್ಲಿ ಸೇವಿಸಲು ಜನ ಹೆಚ್ಚು ಇಷ್ಟಪಡುತ್ತಾರೆ. ತಟ್ಟೆ ಇಡ್ಲಿ ಮತ್ತು ಮಿನಿ ಇಡ್ಲಿ ಆರ್ಡರ್ಗಳನ್ನು ಹೆಚ್ಚು ಪಡೆಯುತ್ತೇವೆ ಎಂದು ಸ್ವಿಗ್ಗಿ ತಿಳಿಸಿದೆ.
ಇಡ್ಲಿಗಳಿಗೆ ಹೆಸರುವಾಸಿಯಾದ ಅಗ್ರ ಐದು ರೆಸ್ಟೋರೆಂಟ್ಗಳು ಯಾವುವು?: ಮಸಾಲಾ ದೋಸೆಯ ನಂತರ ಇಡ್ಲಿ ಎರಡನೇ ಅತಿ ಹೆಚ್ಚು ಆರ್ಡರ್ ಮಾಡಿದ ಉಪಾಹಾರ ಪದಾರ್ಥವಾಗಿದೆ. ಆನ್ಲೈನ್ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಪ್ರಕಾರ, ಬೆಂಗಳೂರಿನಲ್ಲಿ ಆಶಾ ಟಿಫಿನ್ಸ್, ಎ2ಬಿ - ಬೆಂಗಳೂರು ಮತ್ತು ಚೆನ್ನೈನಲ್ಲಿ ಅಡ್ಯಾರ್ ಆನಂದ್ ಭವನ್, ಹೈದರಾಬಾದ್‌ನಲ್ಲಿ ವರಲಕ್ಷ್ಮಿ ಟಿಫಿನ್ಸ್, ಚೆನ್ನೈನಲ್ಲಿ ಶ್ರೀ ಅಕ್ಷಯಂ ಮತ್ತು ಬೆಂಗಳೂರಿನ ವೀಣಾ ಸ್ಟೋರ್ಸ್ ಇಡ್ಲಿಗಳಿಗೆ ಹೆಸರುವಾಸಿಯಾದ ಅಗ್ರ ಐದು ರೆಸ್ಟೋರೆಂಟ್‌ಗಳಾಗಿವೆ.