ಮಸ್ಸೂರಿ (ಉತ್ತರಾಖಂಡ): ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಯುವಕನೊಬ್ಬನ ಶವ ಅಕಾಡೆಮಿ ಆವರಣದ ಸಿಬ್ಬಂದಿ ಕೊಠಡಿಯಲ್ಲಿ ಪತ್ತೆಯಾಗಿದೆ. ಯುವಕ ಮಹಿಳೆಯರಂತೆ ವೇಷ ಧರಿಸಿ ಸಾವನ್ನಪ್ಪಿದ್ದಾನೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡರೂ ಪೊಲೀಸರ ತನಿಖೆ ಬಳಿಕ ಸತ್ಯಾಂಶ ಹೊರ ಬೀಳಲಿದೆ.
ಪೊಲೀಸರ ಪ್ರಕಾರ, ಯುವಕ ಮಸ್ಸೂರಿ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಮಲ್ಟಿ ಟಾಸ್ಕ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಬುಧವಾರ ಸಂಜೆ ಡ್ಯೂಟಿ ಮುಗಿಸಿ ಕೋಣೆಗೆ ಹೋದಾತ ಬೆಳಗ್ಗೆಯಾದರೂ ಕೆಲಸಕ್ಕೆ ಬಂದಿರಲಿಲ್ಲ. ಅವನ ಸಹೋದ್ಯೋಗಿಗಳು ಕರೆದಾಗ ಕೊಠಡಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
ನಂತರ ಮಸ್ಸೂರಿ ಪೊಲೀಸರಿಗೆ ಮಾಹಿತಿ ರವಾನಿಸಲಾಗಿತ್ತು. ಮಸ್ಸೂರಿ ಕೊತ್ವಾಲ್ ಅರವಿಂದ ಚೌಧರಿ ನೇತೃತ್ವದ ಪೊಲೀಸ್ ತಂಡ ಅಕಾಡೆಮಿಗೆ ತಲುಪಿ ಯುವಕನಿದ್ದ ಕೊಠಡಿಯ ಬಾಗಿಲನ್ನು ಒಡೆದು ನೋಡಿದಾಗ ಯುವತಿಯರ ವೇಷಭೂಷಣದಲ್ಲಿ ಯುವಕನ ಶವ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಮಸ್ಸೂರಿ ಪೊಲೀಸರು ಮೃತನ ಮೊಬೈಲ್ ವಶ ಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮಸ್ಸೂರಿ ಐಎಎಸ್ ಅಕಾಡೆಮಿಯು ನಾಗರಿಕ ಸೇವಾ ತರಬೇತಿ ಸಂಸ್ಥೆಯಾಗಿದ್ದು, ಹೆಚ್ಚಿನ ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳು ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ ಮಸ್ಸೂರಿಯಲ್ಲಿ ತರಬೇತಿ ಪಡೆದಿದ್ದಾರೆ.
ಇದನ್ನೂ ಓದಿ: ಖಲಿಸ್ತಾನಿ ಉಗ್ರ ಪನ್ನುನ್ ಹತ್ಯೆ ಯತ್ನ ಪ್ರಕರಣ: ಅಮೆರಿಕದ ಮಾಹಿತಿಗಳನ್ನು ಗಂಭೀರವಾಗಿ ತೆಗೆದುಕೊಂಡ ಭಾರತ