ನವದೆಹಲಿ : ಮಹಿಳೆಯರಿಗೆ ಸಂಬಂಧಿಸಿದ ಎಲ್ಲಾ ವೈಯಕ್ತಿಕ ಕಾನೂನುಗಳು ಎಲ್ಲ ಧರ್ಮಗಳಲ್ಲೂ ಏಕರೂಪವಾಗಿರಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಪ್ರತಿಪಾದಿಸಿದ್ದಾರೆ. ವಿಚ್ಛೇದಿತ ಮುಸ್ಲಿಂ ಮಹಿಳೆಗೂ ಜೀವನಾಂಶ ಪಡೆಯುವ ಹಕ್ಕಿದೆ ಎಂಬ ಜೂನ್ 10ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸ್ವಾಗತಿಸಿದ ಅವರು, ಎಲ್ಲ ಧರ್ಮಗಳ ಮಹಿಳೆಯರ ವೈಯಕ್ತಿಕ ಕಾನೂನುಗಳು ಏಕರೂಪವಾಗಿರಬೇಕು ಎಂದಿದ್ದಾರೆ.
ಎಎನ್ಐ ಜೊತೆ ಮಾತನಾಡಿದ ರೇಖಾ ಶರ್ಮಾ, "ಮಹಿಳೆಯರ ಹಕ್ಕುಗಳು ಏಕರೂಪವಾಗಿರಬೇಕು ಮತ್ತು ಧರ್ಮದ ಆಧಾರದ ಮೇಲೆ ಅವನ್ನು ನಿರ್ಧರಿಸಬಾರದು ಎಂಬುದು ನನ್ನ ನಿಲುವಾಗಿದೆ. ಮಹಿಳೆಯರಿಗೆ ಸಂಬಂಧಿಸಿದ ಎಲ್ಲಾ ವೈಯಕ್ತಿಕ ಕಾನೂನುಗಳು ಎಲ್ಲಾ ಧರ್ಮಗಳಲ್ಲಿ ಸಮಾನವಾಗಿರಬೇಕು. ಹಿಂದೂ ವಿವಾಹ ಕಾಯ್ದೆಯಡಿ, ವಿಚ್ಛೇದನದ ನಂತರ ಮಹಿಳೆ ಜೀವನಾಂಶ ಪಡೆಯಬಹುದು ಎಂದಾದರೆ, ಮುಸ್ಲಿಂ ಮಹಿಳೆ ಏಕೆ ಜೀವನಾಂಶ ಪಡೆಯಲಾಗದು? ಈ ಕುರಿತಾದ ಸುಪ್ರೀಂ ಕೋರ್ಟ್ ತೀರ್ಪಿಗೆ ಸ್ವಾಗತ" ಎಂದು ಹೇಳಿದರು.
ವಿಚ್ಛೇದಿತ ಮುಸ್ಲಿಂ ಮಹಿಳೆಯು ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ ಪಿಸಿ) ಸೆಕ್ಷನ್ 125 ರ ಅಡಿಯಲ್ಲಿ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳು ಎಂದು ಸುಪ್ರೀಂ ಕೋರ್ಟ್ ಜೂನ್ 10 ರಂದು ತೀರ್ಪು ನೀಡಿದ್ದು, ದೇಶದ ಜಾತ್ಯತೀತ ಕಾನೂನುಗಳ ಅಡಿಯಲ್ಲಿ ಜೀವನಾಂಶದ ವಿಷಯಗಳಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧದ ತಾರತಮ್ಯವು ಅನ್ಯಾಯಕರ ಮತ್ತು ಲಿಂಗ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದೆ.
ಸುಪ್ರೀಂ ಕೋರ್ಟ್ನ ಈ ತೀರ್ಪನ್ನು ಹೃದಯಪೂರ್ವಕವಾಗಿ ಸ್ವಾಗತಿಸಿದ ರೇಖಾ ಶರ್ಮಾ, ಈ ನಿರ್ಧಾರವು ಲಿಂಗ ಸಮಾನತೆ ಮತ್ತು ಧರ್ಮವನ್ನು ಲೆಕ್ಕಿಸದೆ ಎಲ್ಲಾ ಮಹಿಳೆಯರಿಗೆ ನ್ಯಾಯವನ್ನು ಖಾತ್ರಿಪಡಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು. ಕಾನೂನಿನ ಅಡಿಯಲ್ಲಿ ಯಾವುದೇ ಮಹಿಳೆಯನ್ನು ಬೆಂಬಲ ಮತ್ತು ರಕ್ಷಣೆಯಿಂದ ವಂಚಿತಳನ್ನಾಗಿ ಮಾಡಬಾರದು ಎಂಬ ತತ್ವವನ್ನು ಈ ನಿರ್ಧಾರವು ಬಲಪಡಿಸುತ್ತದೆ ಎಂದು ಎನ್ಸಿಡಬ್ಲ್ಯೂ ಅಧ್ಯಕ್ಷೆ ಒತ್ತಿ ಹೇಳಿದರು.
ಕೀರ್ತಿ ಚಕ್ರ ಪುರಸ್ಕೃತ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ವಿಧವೆ ಪತ್ನಿಯ ಕುರಿತಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾದ ಅಶ್ಲೀಲ ಕಾಮೆಂಟ್ಗಳ ಬಗ್ಗೆ ಮಾತನಾಡಿದ ರೇಖಾ ಶರ್ಮಾ, "ಇದು ನಾವು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ ಅತ್ಯಂತ ಅವಹೇಳನಕಾರಿ ಕಾಮೆಂಟ್ ಆಗಿದೆ. ಇದರ ಬಗ್ಗೆ ನಾವು ತಕ್ಷಣವೇ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಂಡಿದ್ದೇವೆ. ಪೊಲೀಸರು ಈ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಆದರೆ ಕಾಮೆಂಟ್ ಮಾಡಿದ ವ್ಯಕ್ತಿ ಪಾಕಿಸ್ತಾನದಲ್ಲಿನ ವ್ಯಕ್ತಿಯಾಗಿರಬಹುದು" ಎಂದು ಅವರು ಹೇಳಿದರು. "ಇಂತಹ ಅನೇಕ ಕಮೆಂಟ್ಗಳನ್ನು ಮಾಡಲಾಗುತ್ತಿದೆ ಮತ್ತು ನಾವು ಆ ಕಾಮೆಂಟ್ಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಇಂಥ ಎಲ್ಲ ಪ್ರಕರಣಗಳಲ್ಲಿಯೂ ಎಫ್ಐಆರ್ ದಾಖಲಿಸುವಂತೆ ಪೊಲೀಸರನ್ನು ಒತ್ತಾಯಿಸುತ್ತಿದ್ದೇವೆ" ಎಂದು ಅವರು ತಿಳಿಸಿದರು.
ಇದನ್ನೂ ಓದಿ : ಅಂಬಾನಿ ಪುತ್ರನ ಮದುವೆಯಲ್ಲಿ ಗಣ್ಯರು: ಅನಂತ್-ರಾಧಿಕಾ ದಂಪತಿಗೆ ಆಶೀರ್ವದಿಸಿದ ಪ್ರಧಾನಿ ಮೋದಿ - PM Modi in Ambani Program