ಮೀರತ್: ಪತಿಯೊಂದಿಗೆ ಜಗಳವಾಡಿ ಮನೆ ತೊರೆದಿದ್ದ ಮಹಿಳೆಯನ್ನು 20 ಸಾವಿರ ರೂ.ಗೆ ಮಾರಾಟ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕುಮಾರ್ ಸಿಂಗ್ ಅಲಿಯಾಸ್ ಕುನ್ವರ್‌ಪಾಲ್ ಮತ್ತು ಬದನ್ ಸಿಂಗ್ ಬಂಧಿತ ಆರೋಪಿಗಳು. ಬಂಧಿತರಿಂದ ಮಹಿಳೆಯನ್ನು ರಕ್ಷಿಸಿದ ಪೊಲೀಸರು, ಪುನಃ ಮೀರತ್ಗೆ ಕರೆತಂದು ಬಿಟ್ಟಿದ್ದಾರೆ.
ಮನೆ ಬಿಟ್ಟುಹೋದ ಮಹಿಳೆ ವೃಂದಾವನಕ್ಕೆ ತೆರಳಿದ್ದು ಅಲ್ಲಿ ದಲ್ಲಾಳಿಗಳ ಕೈಗೆ ಸಿಕ್ಕಿಬಿದ್ದಿದ್ದಳು. ದಲ್ಲಾಳಿ ಆಕೆಯನ್ನು ಮೊದಲು ಆಗ್ರಾದ ವೇಶ್ಯಾಗೃಹಕ್ಕೆ ಮತ್ತು ನಂತರ ರಾಜಸ್ಥಾನದ ಭರತ್ ಎಂಬಾತನಿಗೆ 20 ಸಾವಿರ ರೂ.ಗೆ ಮಾರಾಟ ಮಾಡಿದ್ದ. ಸುದ್ದಿ ತಿಳಿದ ಖಾರ್ಖೋಡಾ ಠಾಣಾ ಪೊಲೀಸರು ಮಹಿಳೆಯನ್ನು ರಕ್ಷಿಸಿ ಇಬ್ಬರನ್ನು ಬಂಧಿಸಿದ್ದಾರೆ.
ಘಟನೆಯ ವಿವರ: ಸೆ. 21 ರಂದು ತನ್ನ ಗಂಡನ ಜೊತೆ ಜಗಳ ಮಾಡಿ ಮಹಿಳೆ ಮನೆ ತೊರೆದಿದ್ದಳು. ವೃಂದಾವನದಲ್ಲಿ ಒಬ್ಬಂಟಿಯಾಗಿ ಕಂಡ ಈಕೆಯನ್ನು ರಾಜಸ್ಥಾನ ಮೂಲದ ಕುನ್ವರ್‌ಪಾಲ್ ಎಂಬಾತ ಭೇಟಿಯಾಗಿದ್ದ. ಮನೆಗೆ ಬಿಡುವುದಾಗಿ ಹೇಳಿ ಆಕೆಯನ್ನು ಕಾರಿನಲ್ಲಿ ಆಗ್ರಾಕ್ಕೆ ಕರೆದೊಯ್ದು 6 ದಿನ ಹೋಟೆಲ್ವೊಂದರಲ್ಲಿ ಇರಿಸಿದ್ದ. ಬಳಿಕ ಚಿನ್ನಾಭರಣ ದೋಚಿದ್ದ ಆರೋಪಿ, ಮಹಿಳೆಯನ್ನು ಅಲ್ಲಿಂದ ರಾಜಸ್ಥಾನದ ಭರತ್‌ಪುರ ಜಿಲ್ಲೆಯ ವೇಶ್ಯಾಗೃಹಕ್ಕೆ 20 ಸಾವಿರ ರೂ.ಗೆ ಮಾರಾಟ ಮಾಡಿದ್ದನು.
ಮೋಸ ಹೋಗಿರುವುದು ಗೊತ್ತಾಗಿದ್ದು ಯಾವಾಗ?: ಇದು ಮೋಸ ಎಂದು ತಿಳಿದಾಗ ಮಹಿಳೆ ಪೋನ್ ಮೂಲಕ ತನ್ನ ಮನೆಯವರನ್ನು ಸಂಪರ್ಕಿಸಿದ್ದು, ಅವರು ಪೊಲೀಸರಿಗೆ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಖಾರ್ಖೋಡಾ ಪೊಲೀಸರು ಪರಿಶೀಲನೆ ನಡೆಸಿದಾಗ ಸತ್ಯ ಗೊತ್ತಾಗಿದೆ. ದಲ್ಲಾಳಿಯು ಬದನ್ ಸಿಂಗ್ ಎಂಬಾತನಿಗೆ ಮಹಿಳೆಯನ್ನು 20 ಸಾವಿರ ರೂ.ಗೆ ಮಾರಾಟ ಮಾಡಿರುವುದು ತನಿಖೆಯಿಂದ ತಿಳಿದುಬಂದಿತ್ತು. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದಾಗ ಈ ಪ್ರಕರಣ ಬೆಳಕಿದೆ ಬಂದಿದೆ.
ಕೌಟುಂಬಿಕ ಕಲಹದಿಂದ ಬೇಸತ್ತು ವೃಂದಾವನಕ್ಕೆ ತೆರಳಿದ್ದ ಮಹಿಳೆಯನ್ನು ಕೆಲವರು ಭೇಟಿಯಾಗಿದ್ದರು. ಮನೆಗೆ ಬಿಡುವ ನೆಪದಲ್ಲಿ ಆಕೆಗೆ ಮೋಸ ಮಾಡಿದ್ದರು. ಈ ವಿಷಯ ತಿಳಿದ ಮಹಿಳೆ ಹೇಗೋ ತನ್ನ ಮನೆಯವರಿಗೆ ಕರೆ ಮಾಡಿ ಘಟನೆಯನ್ನೆಲ್ಲಾ ತಿಳಿಸಿದ್ದಾಳೆ. ದೂರು ದಾಖಲಿಸಿ ತನಿಖೆ ನಡೆಸಿದಾಗ ಈ ಜಾಲ ಪತ್ತೆಯಾಗಿದೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಠಾಣೆ ಪ್ರಭಾರಿ ಕುನ್ವರ್ ಪಾಲ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆ ಮಾರಾಟ ಆರೋಪ: ನಾಲ್ವರ ಬಂಧನ - Four people arrested