ಹೈದರಾಬಾದ್, ತೆಲಂಗಾಣ: ನಗರದ ಆರ್ ಟಿಸಿ ಬಸ್ ಗೆ ಆಕ್ರೋಶಗೊಂಡ ಮಹಿಳೆಯೊಬ್ಬರು ಬಿಯರ್ ಬಾಟಲಿ ಎಸೆದು ಬಸ್ನ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ. ಅಷ್ಟೇ ಅಲ್ಲ ಮಹಿಳಾ ಕಂಡಕ್ಟರ್ ಮೇಲೆ ಹಾವು ಎಸೆದ ವಿಚಿತ್ರ ಘಟನೆ ಕೂಡಾ ನಡೆದಿದೆ. ಹೈದರಾಬಾದ್‌ನ ವಿದ್ಯಾನಗರದಲ್ಲಿ ಗುರುವಾರ ಈ ಘಟನೆ ನಡೆದಿದೆ.
ಘಟನೆ ಹಿನ್ನೆಲೆ: ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗೆ ಸೇರಿದ ಬಸ್ ಚಾಲಕ, ಸಿಟಿ ಬಸ್ ಅನ್ನು ನಿಲ್ಲಿಸದೇ ಮುಂದೆ ಸಾಗಿದ್ದಾನೆ. ಇದರಿಂದ ನಿಲ್ಲಿಸುವಂತೆ ಕೈ ಸನ್ನೆ ಮಾಡಿದ ಮಹಿಳೆ, ಬಸ್ ನಿಲ್ಲಿಸದೇ ಇರುವುದರಿಂದ ಆಕ್ರೋಶಗೊಂಡಿದ್ದಾರೆ. ಪರಿಣಾಮ ಬಸ್ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದಾರೆ. ಚಾಲಕ ಇದ್ಯಾವುದನ್ನು ಲೆಕ್ಕಿಸದೇ ಮುಂದೆ ಸಾಗಿದಾಗ ಮದ್ಯದ ಅಮಲಿನಲ್ಲಿದ್ದರು ಎನ್ನಲಾದ ಮಹಿಳೆ ಬಸ್ ಗಾಜಿಗೆ ಬಿಯರ್ ಬಾಟಲಿ ಎಸೆದಿದ್ದಾರೆ. ಇದರಿಂದಾಗಿ ಬಸ್ನ ಹಿಂಬದಿಯ ಗಾಜು ಒಡೆದಿದೆ. ಗ್ಲಾಸ್ ಒಡೆದಿದ್ದರಿಂದ ಚಾಲಕ ಬಸ್ ನಿಲ್ಲಿಸಿದ್ದಾರೆ. ಇದೇ ವೇಳೆ ಮಹಿಳಾ ಕಂಡಕ್ಟರ್, ಬಿಯರ್ ಬಾಟಲ್ ಎಸೆದ ಮಹಿಳೆಯನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ ಬಿಯರ್ ಬಾಟಲಿಯಿಂದ ದಾಳಿ ಮಾಡಿದ್ದ ಮಹಿಳೆ, ಕಂಡಕ್ಟರ್ ಹಿಡಿಯಲು ಬರುತ್ತಿದ್ದಂತೆ ಅವರ ಮೇಲೆ ಹಾವು ಎಸೆದು ಹೆದರಿಸಿದ್ದಾರೆ.
ಟಿಜಿಎಸ್‌ಆರ್‌ಟಿಸಿಯ ದಿಲ್‌ಸುಖ್‌ನಗರ ಡಿಪೋಗೆ ಸೇರಿದ ಬಸ್ ಸಿಕಂದರಾಬಾದ್‌ನಿಂದ ಎಲ್‌ಬಿ ನಗರಕ್ಕೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಇಷ್ಟೆಲ್ಲ ರಗಳೆ ನಡೆದಿದೆ.
ಪೊಲೀಸರು ನೀಡಿರುವ ಮಾಹಿ ಪ್ರಕಾರ, ವಿದ್ಯಾನಗರ ಬಸ್ ನಿಲ್ದಾಣದಲ್ಲಿ ತಿರುವು ಪಡೆದುಕೊಂಡು ಮುಂದೆ ಸಾಗುತ್ತಿತ್ತು. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಬಸ್ ನಿಲ್ಲಿಸಲು ಚಾಲಕನಿಗೆ ಕೈ ಸನ್ನೆ ಮೂಲಕ ಮನವಿ ಮಾಡಿದ್ದಾರೆ. ಆತ ಬಸ್ ನಿಲ್ಲಿಸದಿದ್ದಾಗ ಮಹಿಳೆ ಕೋಪಗೊಂಡು ಬಿಯರ್ ಬಾಟಲಿ ಎಸೆದು ಹಿಂಬದಿಯ ಗಾಜು ಒಡೆದು ಹಾಕಿದ್ದಾರೆ. ಈ ಸಂದರ್ಭದಲ್ಲಿ ಬಸ್ನ ಗ್ಲಾಸ್ ಒಡೆದುಹೋಗಿದ್ದರಿಂದ ಚಾಲಕ ವಾಹನ ನಿಲ್ಲಿಸಿದ್ದಾರೆ. ತಕ್ಷಣ ಬಸ್ನಲ್ಲಿದ್ದ ಮಹಿಳಾ ಕಂಡಕ್ಟರ್ ಕೆಳಗಿಳಿದು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ ದಾಳಿ ಮಾಡಿದ ಆಕೆಯನ್ನು ಹಿಡಿಯಲು ಮುಂದಾದಾಗ ಮಹಿಳೆ ಏಕಾಏಕಿ ತನ್ನ ಬ್ಯಾಗ್‌ನಿಂದ ಹಾವನ್ನು ಹೊರತೆಗೆದು ಕಂಡಕ್ಟರ್ ಮೇಲೆ ಎಸೆದಿದ್ದಾಳೆ.
ಪ್ರಾಣಾಪಾಯದಿಂದ ಪಾರಾಗಲು ಕಂಡಕ್ಟರ್ ಓಡುತ್ತಿದ್ದಂತೆಯೇ ಹಾವು ನೆಲಕ್ಕೆ ಬಿದ್ದು ರಸ್ತೆಬದಿಯಲ್ಲಿ ಕಣ್ಮರೆ ಆಗಿದೆ. ಈ ಮೂಲಕ ಕಂಡಕ್ಟರ್ ಅಪಾಯದಿಂದ ಪಾರಾಗಿದ್ದಾರೆ. ಮತ್ತೊಂದು ಕಡೆ ರಸ್ತೆಯಲ್ಲಿ ನಡೆದ ಹೈ ಡ್ರಾಮಾದಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಮತ್ತೊಂದು ಕಡೆ, ಈ ಕಂಡಕ್ಟರ್, ಚಾಲಕ ಹಾಗೂ ಮಹಿಳೆಯ ನಡುವಣ ವಾಗ್ವಾದವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದ ದಾರಿಹೋಕರು ಹಾವನ್ನು ಹುಡುಕಲು ಪ್ರಯತ್ನಿಸುತ್ತಿರುವುದು ಕೂಡಾ ಕಂಡುಬಂತು. ಕೆಲವರು ಮೊಬೈಲ್‌ನಲ್ಲಿ ವಿಡಿಯೋ, ಫೋಟೋ ತೆಗೆಯುತ್ತಿದ್ದರು.
ಈ ಮಧ್ಯೆ, ಟಿಜಿಎಸ್‌ಆರ್‌ಟಿಸಿ ಅಧಿಕಾರಿಗಳು ನಲ್ಲಕುಂಟಾ ಪೊಲೀಸ್ ಠಾಣೆಗೆ ಈ ಘಟನೆ ಸಂಬಂಧ ದೂರು ನೀಡಿದ್ದಾರೆ. ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಮುಂದಿನ ತನಿಖೆ ಕೈಗೊಂಡಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನು ಮಹಿಳೆ ಚೀಲದಲ್ಲಿ ಹಾವನ್ನು ಏಕೆ ತೆಗೆದುಕೊಂಡು ಹೋಗುತ್ತಿದ್ದರು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.