ನವದೆಹಲಿ: ಸೈಬರ್ ದಾಳಿಯಂತಹ ಅಪರಾಧಗಳ ಪತ್ತೆಗಾಗಿಯೇ 5 ಸಾವಿರ ಸೈಬರ್ ಕಮಾಂಡೋಗಳಿಗೆ ಮುಂದಿನ ಐದು ವರ್ಷದಲ್ಲಿ ತರಬೇತಿ ನೀಡಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಸೈಬರ್ ವಂಚನೆ ತಗ್ಗಿಸುವಿಕೆ ಕೇಂದ್ರ ಮತ್ತು ಸೈಬರ್ ಅಪರಾಧ ಮಾಹಿತಿ ಹಂಚಿಕೆಗೆ ಪೋರ್ಟಲ್ ಸೇರಿದಂತೆ ಹಲವು ಉಪಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೆಹಲಿಯಲ್ಲಿನ ಇಂಡಿಯನ್ ಸೈಬರ್ ಕ್ರೈಮ್ ಕೋರ್ಡಿನೇಷನ್ ಸೆಂಟರ್ (14ಸಿ) ಮೊದಲ ಸಂಸ್ಥಾಪನ ದಿನಾಚರಣೆಯಲ್ಲಿ ಭಾಗಿಯಾದ ಅವರು, ರಾಷ್ಟ್ರದ ಭದ್ರತೆ ಮತ್ತು ಪ್ರಗತಿಯಲ್ಲಿ ಸೈಬರ್ ಭದ್ರತೆ ನಿರ್ಣಾಯಕವಾಗಿದೆ. ಈ ನಿಟ್ಟಿನಲ್ಲಿ ಭಾರತದೆಲ್ಲೆಡೆ ಸೈಬರ್ ರಕ್ಷಣೆ ಬಲಗೊಳಿಸಲು 5 ಸಾವಿರ ಸೈಬರ್ ಕಮಾಂಡೋಗಳಿಗೆ ತರಬೇತಿ ನೀಡಲಾಗುವುದು. ಸದ್ಯ ಸೈಬರ್ ಸೆಕ್ಯೂರಿಟಿ ಇಲ್ಲದೇ ದೇಶದ ಅಭಿವೃದ್ಧಿ ಸಾಧ್ಯ ಇಲ್ಲ ಎಂದರು.
ರಾಜ್ಯ ಮಟ್ಟದಲ್ಲಿ ಸೈಬರ್ ಸಸ್ಪೆಕ್ಟ್ ರಿಜಿಸ್ಟ್ರಿ ರಚಿಸುವ ಪ್ರಾಮುಖ್ಯತೆ ತಿಳಿಸಿದ ಅವರು, ಇದು ಸೈಬರ್ ಅಪರಾಧದ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಡೇಟಾಬೇಸ್ ಆಗಿ ಕಾರ್ಯನಿರ್ವಹಿಸುತ್ತದೆ. ಸೈಬರ್ ವಂಚನೆ ತಗ್ಗಿಸುವಿಕೆ ಕೇಂದ್ರವು ಪೊಲೀಸ್, ಹಣಕಾಸು ಸಂಸ್ಥೆಗಳು ಮತ್ತು ಇತರ ಸಂಬಂಧಿತ ಏಜೆನ್ಸಿಗಳನ್ನು ಒಂದೇ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಲಿದೆ. ಆದರೆ, ಸಮನ್ವಯ ವೇದಿಕೆಯು ಸೈಬರ್ ಬೆದರಿಕೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲಿದೆ.
ತಂತ್ರಜ್ಞಾನವೂ ನಮಗೆ ವರದಾನವಾಗಿದ್ದರೂ, ಅದೇ ಸಮಯದಲ್ಲಿ ಆರ್ಥಿಕತೆಗೆ ಅತಿ ಹೆಚ್ಚಿನ ವೃದ್ಧಿಗೆ ಕಾರಣವಾಗುತ್ತದೆ. ಇದೇ ಸಮಯದಲ್ಲಿ ತಂತ್ರಜ್ಞಾನಕ್ಕೆ ಅನೇಕ ಬೆದರಿಕೆ ಒಡ್ಡುತ್ತಿದೆ. ಸೈಬರ್ ಸೆಕ್ಯೂರಿಟಿ ಇಲ್ಲದೇ ನಾವು ದೇಶದ ರಕ್ಷಣೆ ಮಾಡಲು ಸಾಧ್ಯವಿಲ್ಲ. 14 ಸಿ ನಂತಹ ವೇದಿಕೆಗಳು ಪ್ರಮುಖ ಪಾತ್ರವಹಿಸುತ್ತದೆ.
ಡಿಜಿಟಲ್ ವಹಿವಾಟಿನ ಹೆಚ್ಚಳವಾಗಿದ್ದು, ಈ ನಿಟ್ಟಿನಲ್ಲಿ ಡಿಜಿಟಲ್ ಭದ್ರತಾ ಕ್ರಮಗಳ ಅಗತ್ಯದ ಕುರಿತು ಮಾತನಾಡಿದ ಅವರು, ಸೈಬರ್ ಭದ್ರತೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಹೊಸ ರೀತಿಯ ಸೈಬರ್ ಬೆದರಿಕೆ, ವಂಚನೆಯಂತಹ ಪ್ರಕರಣಗಳು ಹೆಚ್ಚುತ್ತಿದೆ. ಇದಕ್ಕೆ ಸಮಗ್ರ ತಡೆಗಟ್ಟುವ ಕಾರ್ಯತಂತ್ರದ ಅಗತ್ಯವನ್ನು ಒತ್ತಿ ಹೇಳಿದರು, ಈ ನಿಟ್ಟಿನಲ್ಲಿ ಸರ್ಕಾರವು ಮೇವಾತ್, ಜಮ್ತಾರಾ, ಗುವಾಹಟಿ ಮತ್ತು ಅಹಮದಾಬಾದ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಜಂಟಿ ತಂಡಗಳನ್ನು ಸ್ಥಾಪಿಸಿದೆ ಎಂದರು.
ಇಂಡಿಯನ್ ಸೈಬರ್ ಕ್ರೈಮ್ ಕೋರ್ಡಿನೇಷನ್ ಸೆಂಟರ್ (14ಸಿ) ಅನ್ನು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ 2018ರಲ್ಲಿ ಸ್ಥಾಪಿಸಲಾಗಿದೆ. (ಐಎಎನ್ಎಸ್)
ಇದನ್ನೂ ಓದಿ: ನಾಗ್ಪುರ: ಬಿಜೆಪಿ ನಾಯಕನ ಪುತ್ರನ ಕಾರು ಅಪಘಾತ; ಪೊಲೀಸರು ಹೇಳಿದ್ದೇನು?